Advertisement

ಪೌರತ್ವ ಕಾಯ್ದೆಯಿಂದ ಯಾರಿಗೂ ತೊಂದರೆಯಿಲ್ಲ

05:05 PM Jan 13, 2020 | Naveen |

ಚಿಕ್ಕಮಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತೀಯ ನಾಗರಿಕರಿಗೆ ಯಾವುದೇ ಆತಂಕ ಇಲ್ಲ ಎಂದು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದರು.

Advertisement

ಕೊಟ್ಟಿಗೆಹಾರ ಸಮೀಪದ ಜಾವಳಿ ಗ್ರಾಮದಲ್ಲಿ ಪೌರತ್ವ ಕಾಯ್ದೆ ಮಾಹಿತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತೀಯ ನಾಗರಿಕರಿಗೆ ಯಾವುದೇ ಆತಂಕ ಇಲ್ಲ. ಅದು ಪಾಕಿಸ್ತಾನ, ಅಪಘಾನಿಸ್ಥಾನ ಹಾಗೂ ಬಾಂಗ್ಲಾದೇಶದಲ್ಲಿರುವ ಹಿಂದೂ, ಕ್ರೈಸ್ತ, ಸಿಖ್‌ ಮತ್ತು ಬೌದ್ಧ ಧರ್ಮದ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವ ಹಾಗೂ ಭಾರತದಲ್ಲಿ ಅವರಿಗೆ ಪೌರತ್ವ ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ಕಾಯ್ದೆಯಾಗಿದೆ. ಆದರೆ ವಿರೋಧ ಪಕ್ಷಗಳು ಕುತಂತ್ರದಿಂದ ದೇಶದ ನಾಗರಿಕರಿಗೆ ತಪ್ಪು ಮಾಹಿತಿ ರವಾನೆ ಮಾಡಿ ಈ ಕಾಯ್ದೆ ವಿರುದ್ಧ ಹೋರಾಟ ಮಾಡುವಂತೆ ಪ್ರೇರಣೆ ನೀಡುತ್ತಿದ್ದಾರೆ. ಕಾಯ್ದೆಯ ನಿಜವಾದ ಮೂಲ ಉದ್ದೇಶಗಳನ್ನು ಸ್ಪಷ್ಟವಾಗಿ ತಿಳಿಸುವ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರತಿ ಮನೆ ಮನೆಗಳಿಗೂ ತೆರಳಿ ಕಾಯ್ದೆ ಉದ್ದೇಶಗಳನ್ನು ತಿಳಿಸಲಾಗುವುದು ಎಂದರು.

ಬಿಜೆಪಿ ಮುಖಂಡ ಜಾವಳಿ ಪರೀಕ್ಷಿತ್‌ ಅವರು, ಕಾಂಗ್ರೆಸ್‌ ಹಾಗೂ ಇತರೆ ವಿರೋಧ ಪಕ್ಷಗಳು ದೇಶದಲ್ಲಿ ಅರಾಜಕತೆ ಉಂಟು ಮಾಡುವ ಉದ್ದೇಶದಿಂದ ಅನಾವಶ್ಯಕವಾಗಿ ಜನರನ್ನು ರೊಚ್ಚಿಗೇಳುವಂತೆ ಪ್ರೇರಣೆ ನೀಡುತ್ತಿದ್ದಾರೆ. ದೇಶಾದ್ಯಂತ ಉಂಟಾದ ಗಲಭೆಯಲ್ಲಿ ಬಲಿಪಶುಗಳಾಗುತ್ತಿರುವುದು ಜನಸಾಮಾನ್ಯರೇ ಹೊರತು ಅಶಾಂತಿ ಉಂಟು ಮಾಡುತ್ತಿರುವ ಮುಖಂಡರಲ್ಲ. ಕಾಂಗ್ರೆಸ್‌ ಹಾಗೂ ಅಂಗಪಕ್ಷಗಳು ದೇಶದಲ್ಲಿ ಶಾಂತಿ ಕದಡುವ ದುಸ್ಸಾಹಸಕ್ಕೆ ಕೈ ಹಾಕುತ್ತಿವೆ. ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಪ್ರತಿಫಲ ಅನುಭವಿಸಲೇಬೇಕಾಗುತ್ತದೆ ಎನ್ನುವ ಸಾಮಾನ್ಯ ಪರಿಜ್ಞಾನವೂ ಕೂಡ ಇಲ್ಲದೆ ಅಲ್ಪ ಸಂಖ್ಯಾತರನ್ನು ದಾರಿ ತಪ್ಪಿಸುತ್ತಿವೆ. ಕಾಯ್ದೆಯ ಮೂಲ ಉದ್ದೇಶ, ಅದರಲ್ಲಿ ಅಡಕವಾಗಿರುವ ಮೂಲಾಂಶಗಳು ಹೀಗೆ ಹಲವು ಮಾಹಿತಿಗಳನ್ನು ಒಳಗೊಂಡಂತೆ ಎಲ್ಲಾ ವಿಚಾರಗಳನ್ನು ಸಾರ್ವಜನಿಕರ ಮುಂದಿಡುವ ಉದ್ದೇಶದಿಂದ ಈ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಬಿಜೆಪಿ ಮುಖಂಡರಾದ ಶಶಿಧರ್‌, ಕೃಷ್ಣ ಟೈಲರ್‌, ಮೇಗೂರು ಸುನೀಲ್‌, ನರೇಂದ್ರ ಹಾಗೂ ಕಾರ್ಯಕರ್ತರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next