Advertisement

ಸಮ್ಮಿಶ್ರ ಸರಕಾರದಿಂದ ಸರ್ವಾಧಿಕಾರ

04:24 PM May 07, 2019 | Naveen |

ಚಿಕ್ಕಮಗಳೂರು: ರಾಜ್ಯ ಸರಕಾರ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣಕ್ಕೆ ಮುಂದಾಗಿದೆ. ಗೃಹ ಸಚಿವರು ದಬ್ಟಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಪಕ್ಷದ ಕಚೇರಿ ಬಳಿ ಪ್ರತಿಭಟನೆ ಆರಂಭಿಸಿ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

Advertisement

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಆರ್‌.ಪ್ರೇಂಕುಮಾರ್‌ ಮಾತನಾಡಿ, ಗೃಹಸಚಿವರ ದಬ್ಟಾಳಿಕೆ ಹಾಗೂ ಸರಕಾರದ ಕ್ರಮ ಖಂಡಿಸಿ ಪಕ್ಷದ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ರಾಜ್ಯದ ಸಮ್ಮಿಶ್ರ ಸರ್ಕಾರ ಮಾಧ್ಯಮಗಳು ಸೇರಿದಂತೆ ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕಲು ಸೇಡಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬಿಜೆಪಿ ಈ ಬಗ್ಗೆ ದೂರು ನೀಡಿದ್ದರೂ ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಬದಲಿಗೆ ರಾಜಕೀಯ ಎದುರಾಳಿಗಳ ವಿರುದ್ಧ ಪ್ರತಿಕಾರದ ಕ್ರಮಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.

ಪ್ರಧಾನಿ ಮೋದಿಯವರ ಹತ್ಯೆ ಕುರಿತಂತೆ ಮಾತನಾಡಿದ್ದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ವಿರುದ್ಧ ದೂರು ನೀಡಲಾಗಿತ್ತು. ಆದರೆ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಜೆಡಿಎಸ್‌ ಶಾಸಕ ನಾರಾಯಣಗೌಡ ನಟರಾದ ಯಶ್‌ ಮತ್ತು ದರ್ಶನ್‌ ಅವರಿಗೆ ಬೆದರಿಕೆ ಹಾಕಿದ್ದರೂ ಯಾವುದೇ ಕ್ರಮ ಆಗಿಲ್ಲ. ಇದನ್ನು ಗಮನಿಸಿದರೆ ಸರ್ಕಾರ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಧ್ಯಮ ಕ್ಷೇತ್ರಕ್ಕೆ ಸಮ್ಮಿಶ್ರ ಸರ್ಕಾರ ಸಿಂಹಸ್ವಪ್ನವಾಗಿದೆ. ಸರ್ಕಾರವನ್ನಾಗಲೀ, ಸಚಿವರನ್ನಾಗಲೀ ಟೀಕಿಸುವುದೇ ಅಪರಾಧ ಎನ್ನುವಂತಾಗಿದೆ. ವಿರೋಧಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಟೀಕೆ ಮಾಡಿದರೆ ಅವರ ಮೇಲೆ ಪ್ರಕರಣ ದಾಖಲಿಸಿ ಭಯ ಹುಟ್ಟಿಸಲಾಗುತ್ತಿದೆ. ಮಾಧ್ಯಮ ಪ್ರತಿನಿಧಿಗಳನ್ನು ದೂಷಿಸುವುದು, ಅವುಗಳನ್ನು ಬಹಿಷ್ಕರಿಸುವುದಾಗಿ ಹೇಳಿಕೆ ನೀಡಿರುವುದು ಮಾಧ್ಯಮಗಳನ್ನು ನಿಯಂತ್ರಿಸುವ ಸರ್ವಾಧಿಕಾರಿ ಮನೋಭಾವದ ಪ್ರತೀಕವಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.

Advertisement

ಸರ್ಕಾರ ಡೈಮಂಡ್‌, ಹೇಮಂತ್‌ಕುಮಾರ್‌, ಅಜಿತ್‌ಶೆಟ್ಟಿ ಹೇರಂಜಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಮಾನಸಿಕ ಕಿರುಕುಳ ನೀಡಿದೆೆ. ಅವರೆಲ್ಲರೂ ಬಿಜೆಪಿ ಬಗ್ಗೆ ಅಭಿಮಾನ ಹೊಂದಿದವರು ಎನ್ನುವ ಕಾರಣಕ್ಕಾಗಿ ಈ ರೀತಿ ನಡೆಸಿಕೊಳ್ಳಲಾಗಿದೆ. ಸಚಿವ ಎಂ.ಬಿ.ಪಾಟಿಲ್ ಲಿಂಗಾಯಿತ ಧರ್ಮ ವಿಭಜನೆಯ ಯತ್ನದಲ್ಲಿ ಶಾಮೀಲಾಗಿದ್ದು, ಅವರೇ ಈಗ ಇತರರ ವಿರುದ್ಧ ಕ್ರಮಕ್ಕೆ ಪೊಲೀಸ್‌ ಇಲಾಖೆಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ರಾಜಪ್ಪ ಮಾತನಾಡಿದರು. ಪ್ರತಿಭಟನೆಯಲ್ಲಿ ಎಚ್.ಡಿ. ತಮ್ಮಯ್ಯ, ಸೋಮಶೇಖರ್‌, ಜಿಲ್ಲಾ ವಕ್ತಾರ ವರಸಿದ್ಧಿ ವೇಣುಗೋಪಾಲ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಜಯರಾಮ್‌, ಪುಷ್ಪರಾಜ್‌, ಮಧುಕುಮಾರ್‌ ರಾಜ್‌ ಅರಸ್‌, ತಾಪಂ ಸದಸ್ಯರಾದ ಸುರೇಶ, ಭವ್ಯ ನಟೇಶ್‌, ಎಪಿಎಂಸಿ ಸದಸ್ಯ ವಿಕ್ರಂ, ಹಿರಿಯ ಮುಖಂಡರಾದ ಪುಟ್ಟೇಗೌಡರು, ಮಹೇಶ್‌ ಶೆಟ್ಟಿ, ಕೌಶಿಕ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next