Advertisement

ನೆರೆಯಿಂದಾದ ಬೆಳೆ ನಾಶ ಸಮೀಕ್ಷೆ ನಡೆಸಿ

03:16 PM Sep 01, 2019 | Team Udayavani |

ಚಿಕ್ಕಮಗಳೂರು: ನೆರೆ ಹಾನಿಯಿಂದ ಬೆಳೆ ನಾಶವಾಗಿರುವ ಕುರಿತು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮೀಕ್ಷೆ ಕೈಗೊಂಡು, ವರದಿ ತಯಾರಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಚ್.ಮಹೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಪಂ ಕಚೇರಿಯ ಅಬ್ದುಲ್ ನಜೀರ್‌ ಸಾಬ್‌ ಸಭಾಂಗಣದಲ್ಲಿ ನಡೆದ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನೆರೆ ಹಾನಿಯಿಂದ ಹಲವು ರೈತರ ಜೀವನ ಶೋಚನೀಯ ಸ್ಥಿತಿಗೆ ತಲುಪಿದೆ. ಅವರಿಗೆ ಪ್ರಕೃತಿಯಿಂದ ಆದ ಅನ್ಯಾಯಕ್ಕೆ ಅಧಿಕಾರಿಗಳು ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಅಲ್ಲದೇ, ಪುರಾತನ ಕಾಲದಿಂದಲೂ ಹಲವು ಜನರಿಗೆ ಕೆಲಸ ಕೊಡುವ ರೈತರು ಇಂದು ನೆರೆ ಹಾನಿಯಿಂದ ಬದುಕು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಅಂತಹ ರೈತರ ಬದುಕು ಕಟ್ಟಿಕೊಡುವ ಪ್ರಯತ್ನ ಮಾಡಬೇಕು. ಕೃಷಿ ಇಲಾಖೆಯಿಂದ ರೈತರಿಗೆ ಹೆಚ್ಚು ಅನುದಾನ ನೀಡುವಂತೆ ಸರ್ಕಾರಕ್ಕೆ ಅಧಿಕಾರಿಗಳು ವರದಿ ಸಲ್ಲಿಸಬೇಕು ಎಂದರು.

ಸ್ಥಾಯಿ ಸಮಿತಿ ಸದಸ್ಯ ರವೀಂದ್ರ ಬೆಳವಾಡಿ ಮಾತನಾಡಿ, ಲಕ್ಯಾ ಹೋಬಳಿಯಲ್ಲಿ ಮಳೆ ಪ್ರಮಾಣ ಕಡಿಮೆ ಇದ್ದು, ಈ ಭಾಗದಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಮೇವಿನ ಅಭಾವ ಹೆಚ್ಚಾಗಿದೆ. ಆದ್ದರಿಂದ ಅಗತ್ಯಕ್ಕನುಗುಣವಾಗಿ ಮೇವು ನೀಡಬೇಕು ಹಾಗೂ ಮೇವಿನ ಬೀಜಗಳನ್ನು ನೀಡಬೇಕು. ಅಲ್ಲದೇ, ಹಲವು ದಿನಗಳಿಂದ ಶಾಶ್ವತ ಗೋಶಾಲೆ ತೆರೆಯಲು ಒತ್ತಾಯಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಲಕ್ಯಾ ಹೋಬಳಿಗೆ 208 ಟನ್‌ ಮೇವು ವಿತರಿಸಿದ್ದು, ಅಗತ್ಯವಿದ್ದರೆ ಹೆಚ್ಚಿನ ಮೇವು ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ತಾತ್ಕಾಲಿಕ ಗೋಶಾಲೆ ತೆರೆಯುವುದಕ್ಕೆ ಅನುಮೋದನೆ ನೀಡಲಾಗುವುದು ಎಂದು ತಿಳಿಸಿದರು.

Advertisement

ಸ್ಥಾಯಿ ಸಮಿತಿ ಸದಸ್ಯ ಪ್ರಭಾಕರ್‌ ಮಾತನಾಡಿ, ನೆರೆ ಹಾನಿಯಿಂದ ಎಷ್ಟು ಜಾನುವಾರುಗಳು ಮೃತಪಟ್ಟಿವೆ ಹಾಗೂ ಕಾಣೆಯಾಗಿವೆ ಎಂಬ ಮಾಹಿತಿ ನೀಡಬೇಕೆಂದರು. ಇದಕ್ಕೆ ಉತ್ತರಿಸಿದ ಪಶುಪಾಲನಾ ಇಲಾಖೆ ಅಧಿಕಾರಿಗಳು, ಜಿಲ್ಲೆಯಲ್ಲಿ 9 ಜಾನುವಾರುಗಳು ಮೃತಪಟ್ಟಿದ್ದು, ಅವುಗಳಿಗೆ ಎನ್‌ಡಿಆರ್‌ಎಫ್‌ ಮಾರ್ಗದರ್ಶನದಂತೆ ಪರಿಹಾರ ನೀಡಲಾಗಿದೆ ಎಂದು ಹೇಳಿದರು.

ಪ್ರತಿ ಗ್ರಾಪಂನಲ್ಲೂ ಸಹಕಾರ ಸಂಘ ಸ್ಥಾಪಿಸಬೇಕೆಂದು ಸರ್ಕಾರದ ಆದೇಶವಿದ್ದು, ತೋಟದೂರು ಗ್ರಾಪಂ ವ್ಯಾಪ್ತಿಯಲ್ಲಿ ಸಹಕಾರ ಸಂಘ ಸ್ಥಾಪಿಸುವ ಕುರಿತು ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿರುವುದರ ಕುರಿತು ಸೂಕ್ತ ಕ್ರಮ ವಹಿಸಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಸ್ಥಾಯಿ ಸಮಿತಿ ಸದಸ್ಯ ಕೆ.ಆರ್‌.ಮಹೇಶ್‌ ಒಡೆಯರ್‌ ಮಾತನಾಡಿ, ತೋಟಗಾರಿಕೆ ಇಲಾಖೆಯಿಂದ ನಿಂಬೆ, ಕರಿಬೇವು, ಮಾವು, ತೆಂಗು, ಅಡಕೆ ಸಸಿಗಳನ್ನು ರೈತರಿಗೆ ನೀಡುತ್ತಿದ್ದು, ಅವುಗಳನ್ನು ರೈತರಿಗೆ ಸಮರ್ಪಕವಾಗಿ ಒದಗಿಸುವಂತೆ ಪ್ರಚಾರ ಮಾಡಬೇಕು ಹಾಗೂ ವಿಶೇಷ ಹನಿ ನೀರಾವರಿಗೆ ಹೆಚ್ಚು ಒತ್ತು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಹಿರೇಗೌಜದಲ್ಲಿರುವ ಪಶು ವೈದ್ಯರನ್ನು ವಾರದಲ್ಲಿ ಮೂರು ದಿನ ಲಕ್ಯಾ ಹೋಬಳಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ನಿಯೋಜಿಸಿ ಈ ಕುರಿತು ಸದಸ್ಯರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಯಾವ ಯಾವ ಪಶು ಆಸ್ಪತ್ರೆಗಳಲ್ಲಿ ಡಿ ಗ್ರೂಪ್‌ ನೌಕರರ ಕೊರತೆ ಇದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು ಹಾಗೂ ಎಳ್ಳಂಬಳಸೆ ಡಾ| ಸುರೇಶ್‌ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ ವರದಿ ನೀಡಬೇಕೆಂದು ಸೂಚಿಸಿದರು.

ಜಿಲ್ಲಾ ಪಂಚಾಯತ್‌ ಯೋಜನಾ ಕಾರ್ಯಕ್ರಮಗಳಾದ ರೇಷ್ಮೆ ಬೆಳೆಗಾರರಿಗೆ ಸಹಾಯ, ಪರಿಶಿಷ್ಟ ಜಾತಿ ಉಪಯೋಜನೆ, ಗಿರಿಜನ ಉಪಯೋಜನೆ ಹೀಗೆ ಹಲವು ಕಾರ್ಯಕ್ರಮಗಳಿದ್ದು, ಆರ್ಥಿಕ ಗುರಿ 94.85 ಲಕ್ಷ ರೂ.ನಿಗದಿಪಡಿಸಲಾಗಿದೆ. ಭೌತಿಕ 14.43 ಲಕ್ಷ ರೂ.ಗುರಿ ಸಾಧಿಸಲಾಗಿದೆ ಎಂದು ರೇಷ್ಮೆ ಇಲಾಖೆ ಉಪ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸದಸ್ಯರಾದ ಅನುಸೂಯಾ, ಎಸ್‌.ಸುಧಾ, ಜಿಲ್ಲಾ ಪಂಚಾಯತ್‌ ಉಪ ಕಾರ್ಯದರ್ಶಿ ರಾಜಗೋಪಾಲ್ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next