ಚಿಕ್ಕಮಗಳೂರು: ಕೋವಿಡ್ ವ್ಯಾಪಕವಾಗಿ ಹರಡುತ್ತಿದ್ದು ಜಿಲ್ಲಾಡಳಿತ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ತಿಳಿಸಿದರು. ಮಂಗಳವಾರ ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಕೋವಿಡ್ ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಜನರು ಸರ್ಕಾರದೊಂದಿಗೆ ಸ್ಪಂದಿಸಿದ್ದರಿಂದ ಕೋವಿಡ್ ನಿಯಂತ್ರಿಸಲು ಸಾಧ್ಯವಾಗಿತ್ತು. ಈಗ ಜನರ ನಿರ್ಲಕ್ಷ ಭಾವನೆಯಿಂದ ಸೋಂಕು ಹರಡುತ್ತಿದೆ. ಕೋವಿಡ್ ನಿಯಂತ್ರಿಸಲು ಜಿಲ್ಲಾಡಳಿತ ಪೂರಕ ವ್ಯವಸ್ಥೆ ಕೈಗೊಂಡು ಕಾರ್ಯರೂಪಕ್ಕೆ ತರಬೇಕು ಎಂದರು.
ಜನರ ರಕ್ಷಣೆಗಾಗಿ ಸರ್ಕಾರ ಮಾರ್ಗಸೂಚಿಗಳನ್ನು ಅನುಷ್ಠಾನಕ್ಕೆ ತಂದಿದೆ. ಯಾರು ಕೂಡ ನಿಯಮಗಳನ್ನು ಉಲ್ಲಂಘಿಸಬಾರದು ಎಂದು ಮನವಿ ಮಾಡಿದ ಅವರು, ನಿಯಮ ಉಲ್ಲಂಘಿಸುವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆಯಾಗುತ್ತಿರುವುದು ಕಂಡು ಬರುತ್ತಿದೆ. ಹೊರ ಜಿಲ್ಲೆ ಮತ್ತು ಬೆಂಗಳೂರಿನಿಂದ ಬಹಳಷ್ಟು ಜನರು ಬರುತ್ತಿದ್ದು, ಅವರನ್ನು ಕೋವಿಡ್ ಟೆಸ್ಟ್‌ಗೆ ಒಳಪಡಿಸಿ ಕ್ವಾರಂಟೈನ್ ಮಾಡಬೇಕು ಹಾಗೂ ಜಿಲ್ಲೆಯಲ್ಲಿರುವ ಹೋಂ ಸ್ಟೇಗಳ ಮೇಲೆ ಜಿಲ್ಲಾಡಳಿತ ನಿಗಾ ವಹಿಸಬೇಕೆಂದು ಹೇಳಿದರು. ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಜಿಲ್ಲೆಯಲ್ಲಿ ಆಂಬ್ಯುಲೆನ್ಸ್ ಕೊರತೆ ಇದ್ದು, ಟೆಂಡರ್ ಕರೆಯುವುದು ವಿಳಂಬವಾಗಿದೆ. ಕೊರತೆಯನ್ನು ನೀಗಿಸಲು ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಿಳಿಸಿ ದರು.
ಕೋವಿಡ್ ನಿಯಂತ್ರಣಕ್ಕೆ ಅಧಿ ಕಾರಿಗಳು ಸರ್ಕಾರದ ನಿಯಮಗಳಿಗಾಗಿ ಕಾದು ಕುಳಿತುಕೊಳ್ಳಬಾರದು. ಅ ಧಿಕಾರಿಗಳು ಸ್ವ-ವಿವೇಚನೆಯಿಂದ ಕೋವಿಡ್ ನಿಯಂತ್ರಿಸಲು ಏನೇನು ಮಾಡಬಹುದು ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಯೋಚಿಸಿ ಕಾರ್ಯರೂಪಕ್ಕೆ ತಂದು ಕೋವಿಡ್ ನಿಯಂತ್ರಣಕ್ಕೆ ತರಬೇಕು ಎಂದು ಸಲಹೆ ನೀಡಿದರು. ಶಾಸಕ ಸಿ.ಟಿ.ರವಿ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್ ನಿರ್ವಹಣೆಯನ್ನು ಜಿಲ್ಲಾಡಳಿತ ಉತ್ತಮವಾಗಿ ಮಾಡಿಕೊಂಡು ಬಂದಿದೆ. ನಮ್ಮ ಮುಂದೆ ಸವಾಲು ಇದ್ದು, ಇದನ್ನು ಎದುರಿಸಲು ಸಿದ್ಧತೆಯಾಗಬೇಕಿದೆ. ಬೆಡ್ ಶೇ.90ರಷ್ಟು ಭರ್ತಿ ಯಾಗಿದ್ದು ಇನಷ್ಟು ಸಿದ್ಧತೆಯ ಅವಶ್ಯಕತೆ ಇದೆ ಎಂದರು. ಬೆಡ್ ಸಾಮರ್ಥ್ಯ, ಆಕ್ಸಿಜನ್, ವೆಂಟಿಲೇಟರ್ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಬೇಕಿದೆ. ಸೋಂಕಿತರಿಗೆ ಸಮರ್ಪಕ ಮಾಹಿತಿ ನೀಡಲು 24ಗಂಟೆ ಹೆಲ್ಪ್ಲೈನ್ ವ್ಯವಸ್ಥೆ ಕಲ್ಪಸಬೇಕು ಮತ್ತು ನಿವೃತ್ತ ವೈದ್ಯರನ್ನು ಗುರುತಿಸಿ ಕೋವಿಡ್ ಸೋಂಕಿತರಿಗೆ ಸ್ಪಷ್ಟ ಮಾಹಿತಿ ನೀಡಲು ಹೆಲ್ಪ್ಡೆಸ್ಕ್ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಮುಂದಾಬೇಕು ಎಂದರು.
ಬಳ್ಳಾರಿ ಜಿಲ್ಲೆಯಿಂದ ನಮ್ಮ ಜಿಲ್ಲೆಗೆ ಆಕ್ಸಿಜನ್ ಪೂರೈಕೆಯಾಗುತ್ತಿದ್ದು, ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಆಕ್ಸಿಜನ್ ವಾಹನಕ್ಕೆ ಜಿಪಿಎಸ್ ಅಳವಡಿಸಬೇಕು. ಜಿಲ್ಲಾಡಳಿತ ಕೋವಿಡ್ ನಿಯಂತ್ರಣಕ್ಕೇ ಏನೇ ಕ್ರಮ ಕೈಗೊಂಡರೂ ಎಲ್ಲಾ ಹಂತದಲ್ಲೂ ಸಹಕಾರ ನೀಡುತ್ತೇವೆಂದು ಭರವಸೆ ನೀಡಿದರು. ಅಂತಿಮ ಪದವಿ ಪಡೆಯುತ್ತಿರುವ ನರ್ಸಿಂಗ್ ವಿದ್ಯಾರ್ಥಿಗಳನ್ನು ಕೋವಿಡ್ ಸೇವೆಗೆ ಬಳಸಿಕೊಳ್ಳಲು ಜಿಲ್ಲಾಡಳಿತ ಚಿಂತನೆ ನಡೆಸಲಿ. ಹತ್ತು ತಿಂಗಳು ಅಥವಾ ಒಂದು ವರ್ಷ ಅವರ ಸೇವೆಯನ್ನು ಪಡೆದು ಕೋವಿಡ್ ಕರ್ತವ್ಯ ನಿರ್ವಹಿಸಿದ್ದಕ್ಕೆ ಪ್ರಮಾಣಪತ್ರವನ್ನು ಮತ್ತು ಶಿಷ್ಯವೇತನದ ಜೊತೆಗೆ ವೃತ್ತಿಗೆ ಪರಿಗಣಿಸುವ ಸಂದರ್ಭದಲ್ಲಿ ಗ್ರೇಸ್ ಅಂಕವನ್ನು ನೀಡುವಂತಾಗಬೇಕು ಎಂದರು.
ಕಡೂರು ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿ, ಆಕ್ಸಿಜನ್ ಪೂರೈಕೆಯಲ್ಲಿ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಕ್ಕೆ ತಾರತಮ್ಯ ಮಾಡಲಾಗುತ್ತಿದೆ. ಆಕ್ಸಿಜನ್ ಖಾಲಿಯಾದರೆ ಆಂಬ್ಯುಲೆನ್ಸ್ ಡ್ರೈವರ್‌ಗಳು ತುಂಬಿಸಿಕೊಡುವ ಪರಿಸ್ಥಿತಿ ಇದೆ. ಜಿಲ್ಲಾಕೇಂದ್ರಕ್ಕೆ ಪೂರೈಕೆ ಮಾಡುವಂತೆ ತಾಲೂಕು ಕೇಂದ್ರಕ್ಕೂ ಪೂರೈಕೆ ಮಾಡಬೇಕು ಎಂದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್, ಜಿಲ್ಲಾಧಿ ಕಾರಿ ಕೆ.ಎನ್. ರಮೇಶ್, ಜಿಪಂ ಸಿಇಒ ಎಸ್. ಪೂವಿತ, ಎಸ್ಪಿ ಎಂ.ಎಚ್. ಅಕ್ಷಯ್, ಅಪರ ಜಿಲ್ಲಾ ಧಿಕಾರಿ ಬಿ.ಆರ್. ರೂಪ, ಎಸಿ ಎಚ್.ಎಲ್. ನಾಗರಾಜ್ ಸೇರಿದಂತೆ ವಿವಿಧ ಇಲಾಖೆಯ ಅಧಿ ಕಾರಿಗಳು ಇದ್ದರು.