ಚಿಕ್ಕಮಗಳೂರು: ಚುನಾವಣೆ ರ್ಯಾಲಿ, ಕುಂಭಮೇಳದಿಂದ ಕೋವಿಡ್ ಸೋಂಕು ಹೆಚ್ಚಳವಾಗಲು ಕಾರಣವಲ್ಲ. ಅದನ್ನು ಸಮರ್ಥಿಸಿಕೊಳ್ಳಲು ಸಕಾರಣವಲ್ಲವೆಂದು ಸಂಸದೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಘೋಷಣೆ ಮಾಡಿದ್ದು ಚುನಾವಣೆ ಆಯೋಗ, ಎಲ್ಲಾ ಪಕ್ಷದವರು ರ್ಯಾಲಿಯಲ್ಲಿ ಭಾಗಿಯಾಗಿದ್ದಾರೆ. ಚುನಾವಣೆ ಇಲ್ಲದ ರಾಜ್ಯಗಳಲ್ಲೂ ಕೊರೊನಾ ಜಾಸ್ತಿಯಾಗಿದೆ. ಕುಂಭಮೇಳದಲ್ಲಿ ರಾಜ್ಯದ ಎಷ್ಟು ಜನ ಭಾಗವಹಿಸಿದ್ದಾರೆಂದು ಪ್ರಶ್ನಿಸಿದ ಅವರು, ಇದರಿಂದಲೇ ಕೊರೊನಾ ಜಾಸ್ತಿಯಾಗಿದೆ ಎಂದು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಕೋವಿಡ್ ಕರ್ಫ್ಯೂ ವೇಳೆ ಬಡವರ ಜೀವನ ನಿರ್ವಹಣೆಗೆ ಹಣ ನೀಡುವಂತೆ ವಿರೋಧ ಪಕ್ಷ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಬಡವರಿಗೆ ವ್ಯಾಕ್ಸಿನ್ ಉಚಿತವಾಗಿ ನೀಡುತ್ತಿದೆ. ಈ ಹಿಂದೆ ಲಾಕ್‌ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜನ್‌ಧನ್ ಖಾತೆಗೆ ಹಣ ಹಾಕಿದೆ. ಅಕ್ಕಿ, ಗೋಧಿ ಯನ್ನು ಉಚಿತವಾಗಿ ನೀಡಿದೆ. ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರಿಗೆ ಕೋವಿಡ್ ನಿಯಮ ಪಾಲನೆಯೊಂದಿಗೆ ಕೆಲಸ ನಿರ್ವಹಣೆಗೆ ಅವಕಾಶ ನೀಡಿದೆ. ಕಟ್ಟಡ ಕಾರ್ಮಿಕರಿಗೆ ಔಷಧ, ಊಟ ಉಪಾಹಾರ, ಆಸ್ಪತ್ರೆ ವ್ಯವಸ್ಥೆಯನ್ನು ಕಟ್ಟಡ ಮಾಲೀಕರೇ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಚಿಕ್ಕಮಗಳೂರು-ಉಡುಪಿ ಜಿಲ್ಲಾ ಧಿಕಾರಿಗೆ ಸೂಚಿಸಿದ್ದೇನೆ ಎಂದರು.
ಸೋಂಕಿತರ ಅನುಕೂಲಕ್ಕೆ ಹೆಲ್ಪ್ಲೈನ್ ಹೆಚ್ಚಳ ಮಾಡಬೇಕು. ರೆಮ್‌ಡೆಸಿವಿಯರ್, ಆಕ್ಸಿಜನ್, ಹಾಸಿಗೆ ಎಷ್ಟು ಖಾಲಿ ಇದೆ ಎಂದು ಸರ್ಕಾರ ಜನತೆಗೆ ತಿಳಿಸಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಕಾಯಿಲೆ ಬಿಜೆಪಿ-ಜೆಡಿಎಸ್- ಕಾಂಗ್ರೆಸ್ ಎಂದು ಬರಲ್ಲ. ನಾವು ಪಕ್ಷ-ಧರ್ಮ ನೋಡದೆ ಎಲ್ಲರಿಗೂ ಸಹಾಯ ಮಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಪಕ್ಷ ರಾಜಕಾರಣ ಮಾತನಾಡುವವರನ್ನು ದೇವರೇ ಕಾಪಾಡಬೇಕು ಎಂದರು.