ಚಿಕ್ಕಮಗಳೂರು: ಕೋವಿಡ್ ಎರಡನೇಅಲೆ ಹರಡುವಿಕೆ ತಡೆಗಟ್ಟಲು ರಾಜ್ಯ ಸರ್ಕಾರ ವಿಧಿ ಸಿರುವ ವಾರಾಂತ್ಯದ ಕರ್ಫ್ಯೂಗೆ ಕಾμನಾಡಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತಪಡಿಸಿದರು. ಶನಿವಾರ ವಿ ಧಿಸಿದ ವಾರಾಂತ್ಯದ ಕರ್ಫ್ಯೂ ಯಶಸ್ವಿಯಾಗಿದ್ದು, ಭಾನುವಾರದ ಕರ್ಫ್ಯೂ ಯಶ ಕಂಡಿದೆ.
ಭಾನುವಾರ ನಗರದಲ್ಲಿ ಜನ ಸಂಚಾರ ಮತ್ತು ವಾಹನ ಸಂಚಾರ ಸಂಪೂರ್ಣ ಸ್ತಬ್ಧಗೊಂಡು ರಸ್ತೆಗಳೆಲ್ಲ ಖಾಲಿ ಖಾಲಿಯಾಗಿ ಇಡೀ ನಗರವೇ ಬಿಕೋ ಎನ್ನುತ್ತಿದ್ದ ದೃಶ್ಯಗಳು ಕಂಡು ಬಂದವು. ಭಾನುವಾರ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೂ ಅಗತ್ಯ ವಸ್ತುಗಳಾದ ಹಾಲು, ಹಣ್ಣು, ಹೂವು, ದಿನಸಿ ಸೇರಿದಂತೆ ಇತರೆ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಮಾರುಕಟ್ಟೆ ಮತ್ತು ಎಪಿಎಂಸಿ ಮಾರುಕಟ್ಟೆಯಲ್ಲಿ ಕೊರೊನಾ ಸೋಂಕಿನ ಭೀತಿಯಿಲ್ಲದೇ ಗುಂಪುಗೂಡಿ ಅಗತ್ಯ ವಸ್ತುಗಳನ್ನು ಖರೀದಿಸಿದರು. ಮಾರ್ಕೆಟ್ ರಸ್ತೆಯಲ್ಲಿರುವ ಮೀನು ಮಾರುಕಟ್ಟೆ, ಮಾಂಸದಂಗಡಿಗಳಿಗೆ ಜನರು ಮುಗಿಬಿದ್ದಿದ್ದರು.
ಬೆಳಿಗ್ಗೆಯೇ ಜನರು ಹಾಲು, ಹಣ್ಣು, ಖರೀದಿಗಿಂತ ಹೆಚ್ಚಾಗಿ ಮೀನು, ಮಾಂಸ, ಮೊಟ್ಟೆ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. 10 ಗಂಟೆಯ ಬಳಿಕ ಕಾರ್ಯಾಚರಣೆಗಿಳಿದ ಪೊಲೀಸರು ಎಲ್ಲಾ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಿಸಿದರು. ಮೀನು ಮಾಂಸದಂಗಡಿಗಳ ಮುಂದೆ ನಿಂತ ಕೆಲವರಿಗೆ ಮೀನು ಮಾಂಸ ಸಿಗದೆ ನಿರಾಸೆಯಿಂದ ಮನೆ ಕಡೆ ಹೆಜ್ಜೆ ಹಾಕಿದರು. ಪ್ರತಿ ದಿನ ಜನರಿಂದ ಗಿಜುಗುಡುತ್ತಿದ್ದ ಮಾರುಕಟ್ಟೆ 11ಗಂಟೆ ವೇಳೆಗೆ ಸಂಪೂರ್ಣ ಸ್ತಬ್ಧಗೊಂಡಿತು. ಪೆಟ್ರೋಲ್ ಬಂಕ್, ಮೆಡಿಕಲ್ ಶಾಪ್‌ಗ್ಳನ್ನು ಹೊರತುಪಡಿಸಿ ನಗರದ ಪ್ರಮುಖ ರಸ್ತೆಗಳಾದ ಎಂ.ಜಿ. ರಸ್ತೆ, ಐಜಿ ರಸ್ತೆ, ಮಾರ್ಕೆಟ್ ರಸ್ತೆ, ಬಸವನಹಳ್ಳಿ ರಸ್ತೆ, ವಿಜಯಪುರ ರಸ್ತೆಯಲ್ಲಿರುವ ಅಂಗಡಿ- ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ವಾಹನ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿತ್ತು. ಅಗತ್ಯ ವಸ್ತುಗಳ ಖರೀದಿಗೆ ರಸ್ತೆಗಿಳಿದ ವಾಹನ ಸವಾರರನ್ನು ಪೊಲೀಸರು ತಡೆದು ವಿಚಾರಣೆ ನಡೆಸಿ ಕಳಿಸುತ್ತಿದ್ದರು.
ವಿನಾಕಾರಣ ರಸ್ತೆಯಲ್ಲಿ ಸಂಚಾರ ನಡೆಸುತ್ತಿದ್ದವರನ್ನು ಪೊಲೀಸರು ತಡೆದು ಬೈದು ಮನೆಗೆ ಕಳಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ರಾಜ್ಯ ರಸ್ತೆ ಸಾರಿಗೆ ಇಲಾಖೆಯಿಂದ ಶೇ.50ರಷ್ಟು ಪ್ರಯಾಣಿಕರೊಂದಿಗೆ ಸಂಚಾರ ನಡೆ ಸಲು ಅವಕಾಶ ನೀಡಿದರೂ ಜನರು ಬಸ್ ನಿಲ್ದಾಣದತ್ತ ಮುಖ ಮಾಡದಿದ್ದರಿಂದ ಚಾಲಕರು ಮತ್ತು ನಿರ್ವಾಹಕರು ಪ್ರಯಾಣಿಕರಿಗಾಗಿ ಕಾದು ಕುಳಿತಿದ್ದರು.
ಪ್ರಯಾಣಿಕರಿಲ್ಲದೆ ಇಡೀ ಬಸ್ ನಿಲ್ದಾಣವೇ ಖಾಲಿಯಾಗಿತ್ತು. ಭಾನುವಾರ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೂ ನಗರದಲ್ಲಿ ಆಟೋ, ಟ್ಯಾಕ್ಸಿ ಸೇರಿದಂತೆ ಇತರೆ ವಾಹನಗಳು ಸಂಚಾರ ನಡೆಸಿದವು. 10 ಗಂಟೆಯ ಬಳಿಕ ವಾಹನ ಸಂಚಾರ ಬಂದ್ ಮಾಡಲಾಯಿತು. ಔಷ ಧ ಮಳಿಗೆ, ಪೆಟ್ರೋಲ್ ಬಂಕ್, ಆಸ್ಪತ್ರೆ ಹೊರತುಪಡಿಸಿ ಉಳಿದಂತೆ ಎಲ್ಲಾ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಿ ಜನರೇ ಸ್ವಯಂಪ್ರೇರಿತವಾಗಿ ಮನೆಯಲ್ಲಿ ಉಳಿಯುವ ಮೂಲಕ ವಾರಾಂತ್ಯದ ಕರ್ಫ್ಯೂಗೆ ಬೆಂಬಲ ನೀಡಿದರು.