Advertisement

ವಾರಾಂತ್ಯ ಕರ್ಫ್ಯೂ; ಎಲೆಡೆ ಸಂಪೂರ್ಣ ಲಾಕ್‌

06:29 PM Apr 25, 2021 | Team Udayavani |

ಕಡೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಸರಕಾರ ವಿಧಿಸಿರುವ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವೀಕೆಂಡ್‌ ಕರ್ಫ್ಯೂಗೆ ಶನಿವಾರ ಸಂಪೂರ್ಣ ಬೆಂಬಲ ವ್ಯಕ್ತವಾಯಿತು. ಪಟ್ಟಣದ ಮುಖ್ಯ ರಸ್ತೆಗಳು ಮತ್ತು ವಿವಿಧ ರಸ್ತೆಗಳ ಎಲ್ಲಾ ರೀತಿಯ ವ್ಯಾಪಾರ ಮಳಿಗೆಗಳು ಮುಚ್ಚಿದ್ದವು. ಔಷಧ ಅಂಗಡಿ ತೆರೆದಿದ್ದರೂ ಅಲ್ಲಿಯೂ ಕೂಡ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿತ್ತು. ಪಟ್ಟಣದ ಸುಭಾಷ್‌ ವೃತ್ತ, ಕನಕ ವೃತ್ತ, ಬಸವೇಶ್ವರ ವೃತ್ತ, ಹೊಸ ಬಸ್‌ ನಿಲ್ದಾಣ, ಡಾ| ಅಂಬೇಡ್ಕರ್‌ ವೃತ್ತ, ಕೆಎಲ್‌ವಿ ವೃತ್ತ ಹಾಗೂ ಗಣಪತಿ ಆಂಜನೇಯ ದೇವಾಲಯದ ರಸ್ತೆಗಳು ಸದಾ ಗಿಜಿಗುಡುತ್ತಿದ್ದವು.

Advertisement

ಆದರೆ ವೀಕೆಂಡ್‌ ಕರ್ಫ್ಯೂನಿಂದಾಗಿ ಶನಿವಾರ ಖಾಲಿ ಹೊಡೆಯುತ್ತಿದ್ದವು. ಚಿತ್ರಮಂದಿರಗಳು, ಸರಕಾರಿ ಕಚೇರಿಗಳು, ಬ್ಯಾಂಕ್‌, ಪೆಟ್ರೋಲ್‌ ಬಂಕ್‌, ಸಣ್ಣಸಣ್ಣ ಉದ್ಯಮಗಳು ತೆರೆಯದೆ ಇಡೀ ಪಟ್ಟಣವೇ ಹಾಳು ಸುರಿಯುತ್ತಿತ್ತು. ಮೊದಲೇ ನಿರ್ಧರಿಸಿದಂತೆ ಪೊಲೀಸರು ಆಯ್ದ ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ ರಚಿಸಿ ಸಿಬ್ಬಂದಿಗಳನ್ನು ನಿಯೋಜಿಸಿದ್ದರು. ಅನಗತ್ಯವಾಗಿ ತಿರುಗಾಡುವ ಪ್ರತಿಯೊಬ್ಬರಿಗೂ ಪೊಲೀಸರು ಬುದ್ಧಿ ಹೇಳಿ ಕಳುಹಿಸುತ್ತಿದ್ದ ಘಟನೆಗಳು ಕಂಡು ಬಂದವು. ಮುಖ್ಯವಾಗಿ ನಿತ್ಯ ಕೂಲಿ ಮಾಡಿ ದುಡಿದು ತಿನ್ನುವ ಕಾರ್ಮಿಕ ವರ್ಗ ಬವಣೆಗೆ ಒಳಗಾಯಿತು.

ಅದರಲ್ಲೂ ಹೋಟೆಲ್‌ ಕಾರ್ಮಿಕರು, ಎತ್ತಿನಗಾಡಿ ಮೂಲಕ ಸಾಮಾನು ಸರಂಜಾಮು ಸಾಗಿಸುವವರು ಹಾಗೂ ರೈಲು, ಬಸ್‌ ನಿಲ್ದಾಣದಲ್ಲಿ ಕಂಡು ಬರುತ್ತಿದ್ದ ಬಿಕ್ಷುಕ ಸಮೂಹ ಕರ್ಫ್ಯೂನಿಂದ ನರಳುವಂತಾಯಿತು. ವಿಶೇಷವಾಗಿ ಭಿಕ್ಷುಕ ಸಮುದಾಯವು ಆಹಾರವಿಲ್ಲದೆ ಪರದಾಡಿ ದಾರಿಯಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ವ¤ಕ್ತಿಗಳನ್ನು ಅಂಗಲಾಚುತ್ತಿದ್ದ ದೃಶ್ಯ ಮನಮಿಡಿಯುತ್ತಿತ್ತು. ಕಳೆದ ಬಾರಿ ಲಾಕ್‌ಡೌನ್‌ ಸಮಯದಲ್ಲಿ ಕೆಲವು ಸಂಘ-ಸಂಸ್ಥೆಗಳು ಕಾರ್ಮಿಕರು ಮತ್ತು ಭಿಕ್ಷುಕರಿಗೆ ಆಹಾರ ಪೊಟ್ಟಣಗಳನ್ನು ಪೂರೈಕೆ ಮಾಡಿದ್ದವು.

ಈ ಬಾರಿ ಯಾವುದೇ ಸಂಘ- ಸಂಸ್ಥೆಗಳು ಇದುವರೆಗೂ ಮುಂದೆ ಬಂದಿಲ್ಲ. ಕನಿಷ್ಟ ವೀಕೆಂಡ್‌ ಕರ್ಫ್ಯೂ ಸಮಯದಲ್ಲಾದರೂ ನಿರ್ಗತಿಕರಿಗೆ ಮತ್ತು ಕಾರ್ಮಿಕರಿಗೆ ಆಹಾರ ಪೂರೈಕೆ ಆಗಬೇಕೆಂಬುದು ಅವರ ಅಭಿಪ್ರಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next