ಚಿಕ್ಕಮಗಳೂರು: ಕೋವಿಡ್ ನಾಗಾಲೋಟಕ್ಕೆ ತಡೆಯೊಡ್ಡುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯ ಕರ್ಫ್ಯೂಗೆ ಕಾμನಾಡಿನಲ್ಲಿ ಬೆಂಬಲ ವ್ಯಕ್ತವಾಗಿದ್ದು, ಜನರೇ ಸ್ವಯಂಪ್ರೇರಿತವಾಗಿ ಮನೆಯಲ್ಲೇ ಲಾಕ್ ಆದರು. ಶುಕ್ರವಾರ ರಾತ್ರಿಯಿಂದಲೇ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿದ್ದು, ರಾತ್ರಿ ವೇಳೆ ಅನಗತ್ಯ ಸಂಚಾರಕ್ಕೆ ಪೊಲೀಸರು ಬ್ರೇಕ್ ಹಾಕಿದರು.
ಶನಿವಾರ ಮುಂಜಾನೆ 6 ಗಂಟೆಯಿಂದ ಅಗತ್ಯ ವಸ್ತುಗಳ ಅಂಗಡಿ- ಮುಂಗಟ್ಟುಗಳ ಬಾಗಿಲು ತೆರೆದಿದ್ದು, ಜನರು ಸರತಿ ಸಾಲಿನಲ್ಲಿ ನಿಂತು ಅಗತ್ಯ ವಸ್ತುಗಳ ಖರೀದಿಗೆ ಮುಗಿ ಬಿದ್ದಿದ್ದರು. ನಗರದ ಎಪಿಎಂಸಿ ಮಾರುಕಟ್ಟೆ, ಮಾರ್ಕೆಟ್ ರಸ್ತೆ, ಎಂ.ಜಿ. ರಸ್ತೆ, ಐಜಿ ರಸ್ತೆಗಳಲ್ಲಿ ಜನರು ಅಗತ್ಯ ವಸ್ತುಗಳನ್ನು ಖರೀದಿಸಿದರು. ಈ ಸಂದರ್ಭದಲ್ಲಿ ಅಂಗಡಿ- ಮುಂಗಟ್ಟುಗಳ ಎದುರು ಜನದಟ್ಟಣೆ ಏರ್ಪಟ್ಟಿತ್ತು. 10 ಗಂಟೆಯ ಬಳಿಕ ವ್ಯಾಪಾರ- ವಹಿವಾಟು ಸ್ತಬ್ಧಗೊಳ್ಳುವ ಹಿನ್ನೆಲೆಯಲ್ಲಿ ಹೂವು, ಹಣ್ಣು ತರಕಾರಿ ಹಾಲು, ಮೀನು- ಮಾಂಸ ಸೇರಿದಂತೆ ಇನ್ನಿತರ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು. ಕೊರೊನಾ ಸೋಂಕು ಲೆಕ್ಕಿಸದೆ ಜನರು ಅಗತ್ಯ ವಸ್ತುಗಳನ್ನು ಖರೀದಿಸಿ ಮನೆ ಕಡೆ ಮುಖ ಮಾಡಿದರು. ಶನಿವಾರ 10 ಗಂಟೆಯಾಗುತ್ತಿದ್ದಂತೆ ದಿನನಿತ್ಯ ಜನಜಂಗುಳಿಯಿಂದ ತುಂಬಿರುತ್ತಿದ್ದ ರಸ್ತೆಗಳು ಕ್ರಮೇಣವಾಗಿ ಖಾಲಿಯಾಗಲು ಪ್ರಾರಂಭಿಸಿದವು. ರಸ್ತೆಗಳಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿ ಕಡಿಮೆಯಾಗಲಾರಂಭಿಸಿತು. 10 ಗಂಟೆ ಸಮೀಪಿಸುತ್ತಿದ್ದಂತೆ ಖಾಕಿ ಪಡೆ ಕಾರ್ಯಾಚರಣೆಗೆ ಇಳಿಯಿತು. 10 ಗಂಟೆಯ ಬಳಿಕವೂ ಅಂಗಡಿ ತೆರೆದು ವ್ಯಾಪಾರ- ವಹಿವಾಟು ನಡೆಸಲು ನಿರತರಾಗಿದ್ದ ವರ್ತಕರಿಗೆ ಎಚ್ಚರಿಕೆ ನೀಡಿ ಅಂಗಡಿಗಳ ಬಾಗಿಲು ಹಾಕಿಸಿದರು.
ನಗರದಾದ್ಯಂತ ಪೊಲೀಸ್ ಸರ್ಪಗಾವಲು ಹಾಕುತ್ತಿದ್ದಂತೆ ವರ್ತಕರು ತಮ್ಮ ವ್ಯಾಪಾರ- ವಹಿವಾಟು ಸ್ಥಗಿತಗೊಳಿಸಿ ಅಂಗಡಿ ಬಾಗಿಲು ಮುಚ್ಚಿ ಮನೆಯ ದಾರಿ ಹಿಡಿದರು. ಅತ್ಯಂತ ತುರ್ತುಸೇವೆಗಳಾದ ಔಷ ಧ, ಪೆಟ್ರೋಲ್, ಡೀಸೆಲ್, ಸರ್ಕಾರಿ ಕಚೇರಿ, ಬ್ಯಾಂಕ್, ಎಟಿಎಂ ಸೇರಿದಂತೆ ಕೆಲವೊಂದು ಅಂಗಡಿ- ಮುಂಗಟ್ಟುಗಳನ್ನು ಹೊರತು ಪಡಿಸಿ ಉಳಿದಂತೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಯಿತು. ವ್ಯಾಪಾರ- ವಹಿವಾಟು ಸ್ತಬ್ಧಗೊಳುತ್ತಿದ್ದಂತೆ ದಿನನಿತ್ಯ ಜನಜಂಗುಳಿಯಿಂದ ತುಂಬಿರುತ್ತಿದ್ದ ರಸ್ತೆಗಳು ಬಿಕೋ ಎನ್ನಲಾರಭಿಸಿದವು. ಮಧ್ಯಾಹ್ನದ ವೇಳೆಗೆ ಜನಸಂಚಾರ ಮತ್ತು ವಾಹನ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿತು. ಶುಕ್ರವಾರ ರಾತ್ರಿ ಸ್ತಬ್ಧಗೊಂಡಿದ್ದ ವಾಹನ ಸಂಚಾರ ಶನಿವಾರ ಬೆಳಗ್ಗೆ 6 ಗಂಟೆಯಿಂದ ಎಂದಿನಂತೆ ಆರಂಭಗೊಂಡಿತು. ರಸ್ತೆ ತುಂಬೆಲ್ಲ ವಾಹನಗಳು ಸಂಚಾರ ನಡೆಸಿದವು. 10 ಗಂಟೆಯ ವೇಳೆಗೆ ಪೊಲೀಸ್ ಸಿಬ್ಬಂದಿ ರಸ್ತೆಗಿಳಿಯುತ್ತಿದ್ದಂತೆ ವಾಹನ ಸಂಚಾರಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿತು. ನಗರದ ಹನುಮಂತಪ್ಪ ವೃತ್ತ, ಬಸ್ ನಿಲ್ದಾಣ, ಆಜಾದ್ ಪಾರ್ಕ್ ವಿಜಯಪುರ ರಸ್ತೆ, ಮಲ್ಲಂದೂರು ಕ್ರಾಸ್, ಬಸವನಹಳ್ಳಿ ರಸ್ತೆಗಳಲ್ಲಿ ಬೀಡುಬಿಟ್ಟ ಪೊಲೀಸ್ ಪಡೆಯವರು ವಾಹನಗಳಲ್ಲಿ ಸಂಚರಿಸುವವರನ್ನು ತಡೆದು ವಿಚಾರಣೆಗೆ ಒಳಪಡಿಸಿದರು.
ತುರ್ತು ಅವಶ್ಯ ವಸ್ತುಗಳನ್ನು ಖರೀದಿಸುವ ಉದ್ದೇಶದಿಂದ ಹೊರಬಂದವರಿಗೆ ಮಾತ್ರ ಬಿಡಲಾಗುತ್ತಿತ್ತು. ಅನಾವಶ್ಯಕ ಸಂಚಾರ ನಡೆಸುವರಿಗೆ ಬುದ್ಧಿಮಾತು ಹೇಳಿ ಕಳಿಸಲಾಗುತ್ತಿತ್ತು. ಕೆಲವೊಂದಿಷ್ಟು ವಾಹನ ಸಂಚಾರರಿಗೆ ದಂಡ ವಿಧಿ ಸಿ ಕಳಿಸಿದರು. 10 ಗಂಟೆ ವೇಳೆಗೆ ಅಲ್ಲೊಂದು ಇಲ್ಲೊಂದು ವಾಹನ ಸಂಚಾರ ನಡೆಸಿದರೆ ಮಧ್ಯಾಹ್ನದ ವೇಳೆಗೆ ಅಗತ್ಯ ವಸ್ತುಗಳ ವಾಹನ ಸಂಚಾರ ಹೊರತುಪಡಿಸಿ ಉಳಿದಂತೆ ಎಲ್ಲಾ ವಾಹನ ಸಂಚಾರ ಸ್ತಬ್ಧಗೊಂಡಿತು. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲೂ ಜನಸಂಚಾರ ಸಂಪೂರ್ಣ ಸ್ತಬ್ಧಗೊಂಡಿತ್ತು. ಆಸ್ಪತ್ರೆ, ಮೆಡಿಕಲ್, ಸರ್ಕಾರಿ ಕಚೇರಿ ಸೇರಿದಂತೆ ಕೆಲವೊಂದು ಅಗತ್ಯ ಸೇವೆ ಲಭ್ಯವಾಗಿತ್ತು. ಕಡೂರು, ತರೀಕೆರೆ, ಮೂಡಿಗೆರೆ, ನರಸಿಂಹರಾಜಪುರ, ಕೊಪ್ಪ, ಶೃಂಗೇರಿ ಪಟ್ಟಣ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಕಾರಣವಿಲ್ಲದೆ ತಿರುಗಾಡುವವರನ್ನು ಮತ್ತು ವಾಹನ ಸಂಚಾರವನ್ನು ನಿಯಂತ್ರಿಸಿದರು. ವಾರಾಂತ್ಯದ ಕರ್ಫ್ಯೂಗೆ ಕಾμನಾಡಿನ ಜನತೆ ಉತ್ತಮ ಬೆಂಬಲ ವ್ಯಕ್ತಪಡಿಸಿದ್ದು, ವಾರಾಂತ್ಯದ ದಿನದ ತಮ್ಮೆಲ್ಲ ಯೋಜನೆಗಳನ್ನು ಬದಿಗೊತ್ತಿ ಕುಟುಂಬದೊಂದಿಗೆ ಮನೆಯಲ್ಲೇ ಕಾಲ ಕಳೆದರು.