Advertisement

ಕೋವಿಡ್‌ 2ನೇ ಅಲೆಗೆ ತತ್ತರಿಸಿದ ಜನ

07:10 PM Apr 23, 2021 | Team Udayavani |

ಶೃಂಗೇರಿ: ಕಳೆದ ವರ್ಷ ಕೊರೊನಾ ಅಬ್ಬರದಿಂದ ನಲುಗಿದ್ದ ಜನತೆ ಇದೀಗ ಮತ್ತೆ ಎರಡನೇ ಅಲೆಯ ಅಬ್ಬರಕ್ಕೆ ತತ್ತರಿಸಿ ಹೋಗಿದ್ದಾರೆ. ಕೊರೊನಾ ಹೊಡೆತದಿಂದ ಕೃಷಿ ಕಾರ್ಮಿಕರು, ಹೊಟೇಲ್‌ ಉದ್ಯಮಿಗಳು, ಕಟ್ಟಡ-ಕಾರ್ಮಿಕರು, ಉದ್ಯಮಿಗಳು, ಆಟೋ ಚಾಲಕರು ಸೇರಿದಂತೆ ಪ್ರತಿಯೊಬ್ಬರಿಗೂ ಹೊಡೆತ ಬೀಳಲಿದೆ.

Advertisement

ಇದರಿಂದಾಗಿ ಮತ್ತೆ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಜನತೆ ಪಟ್ಟಣದತ್ತ ಮುಖ ಮಾಡದೆ ಮನೆಗಳಲ್ಲಿಯೇ ಕೂರುವಂತಾಗಿದ್ದು, ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. ಆರ್ಥಿಕ ಸಂಕಷ್ಟದಿಂದ ಜನತೆ ಚೇತರಿಕೆ ಕಾಣುವಷ್ಟರಲ್ಲಿ ಮತ್ತೆ ಅವರಿಗೆ ಹೊಡೆತ ಬಿದ್ದಿದೆ. ಕೊರೊನಾ ಎರಡನೇ ಅಲೆಯ ಕಾರಣದಿಂದ ವ್ಯಾಪಾರ- ವಹಿವಾಟಿನ ಮೇಲೆ ಹೊಡೆತ ಬಿದ್ದಿದ್ದು, ಮುಂದಿನ ಭವಿಷ್ಯದ ಬಗ್ಗೆ ಚಿಂತೆಗೀಡಾಗಿದ್ದಾರೆ. ಕಳೆದ ವರ್ಷ ಲಾಕ್‌ಡೌನ್‌ ಅವಧಿಯಲ್ಲಿ ಮುಚ್ಚಲ್ಪಟ್ಟು ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದ ಹೊಟೇಲ್‌ ಉದ್ಯಮ ಇದೀಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದು ಹೊಟೇಲ್‌ಗ‌ಳಲ್ಲಿ ಗ್ರಾಹಕರ ಸಂಖ್ಯೆ ತೀವ್ರ ಇಳಿಮುಖವಾಗುತ್ತಿದೆ. ಲಾಕ್‌ಡೌನ್‌ ಅವಧಿಯಲ್ಲಿ 7-8 ತಿಂಗಳು ಹೊಟೇಲ್‌ ಮುಚ್ಚಿದ್ದು ತೀವ್ರ ಆರ್ಥಿಕ ನಷ್ಟ ಅನುಭವಿಸಿತ್ತು. ಇದೀಗ ಕೊರೊನಾ ಕರ್ಫ್ಯೂನಿಂದಾಗಿ ಗ್ರಾಹಕರಿಲ್ಲದೆ ಹೊಟೇಲ್‌ ಮುಚ್ಚುವಂತಾಗಿದೆ.

ಬಾಡಿಗೆ, ವಿದ್ಯುತ್‌ ಬಿಲ್‌, ಕಾರ್ಮಿಕರ ವೇತನ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ಶ್ರೀ ಗಣೇಶ್‌ ಹೊಟೆಲ್‌ ಮಾಲೀಕ ಚಗತೆ ಗಜೇಂದ್ರ. ಪಟ್ಟಣದ ಗಾಂಧಿ ಮೈದಾನದಲ್ಲಿ ವಾಹನಗಳ ಪಾರ್ಕಿಂಗ್‌ ಬಿಡ್ಡುದಾರರಿಗೆ ಆರ್ಥಿಕ ನಷ್ಟ ಎದುರಾಗಿದೆ. ಪಪಂಗೆ ಈ ಬಾರಿ ವಾಹನ ಪಾರ್ಕಿಂಗ್‌ನಲ್ಲಿ ಸಾಕಷ್ಟು ಆದಾಯ ಲಭಿಸುತ್ತಿತ್ತು. ಅದಕ್ಕೆ ಈಗ ಕೊಡಲಿ ಏಟು ಬಿದ್ದಿದ್ದು, ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಸಂಪೂರ್ಣ ಇಳಿಮುಖವಾಗಿದೆ. ಕೊರೊನಾ ಕರ್ಫ್ಯೂನಿಂದಾಗಿ ಪ್ರವಾಸಿಗರ ಸುಳಿವಿಲ್ಲ. ಇದರಿಂದಾಗಿ ವಾಹನ ಪಾರ್ಕಿಂಗ್‌ ಬಿಡ್ಡುದಾರರು ಚಿಂತೆಗೀಡಾಗಿದ್ದು, ಪ್ರವಾಸಿಗರನ್ನು ನಂಬಿಕೊಂಡಿದ್ದ ಬಿಡ್ಡುದಾರರು ವಾಹನ ಪಾರ್ಕಿಂಗ್‌ ಶುಲ್ಕ ಭರಿಸಲಾರದೆ ಕಂಗಾಲಾಗಿದ್ದಾರೆ.

ಈ ಬಾರಿ ವಾರ್ಷಿಕ ರೂ. 80 ಲಕ್ಷಕ್ಕೂ ಹೆಚ್ಚು ದರದಲ್ಲಿ ವಹಿಸಿಕೊಳ್ಳಲಾಗಿತ್ತು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಈಗಾಗಲೇ 10,321 ಜನರ ಗಂಟಲು ದ್ರವ ಪರೀಕ್ಷೆ ಮಾಡಿದ್ದು, ಎರಡನೇ ಅಲೆಯಲ್ಲಿ ಒಟ್ಟು 50 ಪ್ರಕರಣ ದಾಖಲಾಗಿವೆ. ಅವುಗಳಲ್ಲಿ 25 ಪ್ರಕರಣ ಸಕ್ರಿಯವಾಗಿದೆ. ಈಗಾಗಲೇ 5,236 ಜನರು ಲಸಿಕೆ ಪಡೆದಿದ್ದಾರೆ. ಜನತೆ ಆತಂಕಕ್ಕೆ ಒಳಗಾಗುವುದು ಬೇಡ. ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕಾಗುತ್ತದೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ| ಮಂಜುನಾಥ.

Advertisement

Udayavani is now on Telegram. Click here to join our channel and stay updated with the latest news.

Next