Advertisement

ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿ

07:05 PM Apr 23, 2021 | Team Udayavani |

ಚಿಕ್ಕಮಗಳೂರು: ರಾಜ್ಯದಲ್ಲಿ ಕೊರೊನಾ ಗಂಭೀರ ಪರಿಸ್ಥಿತಿ ಎದುರಾಗಿದ್ದು ಸರ್ಕಾರದ ಮಾರ್ಗಸೂಚಿಗಳನ್ನು ವರ್ತಕರು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಕೊರೊನಾ ಹೆಮ್ಮಾರಿ ತಡೆಗಟ್ಟಲು ಜಿಲ್ಲಾಡಳಿತದೊಂದಿಗೆ ವರ್ತಕರು ಸಹಕರಿಸಬೇಕೆಂದು ಜಿಲ್ಲಾ ಧಿಕಾರಿ ಕೆ.ಎನ್‌. ರಮೇಶ್‌ ಮನವಿ ಮಾಡಿದರು.

Advertisement

ಗುರುವಾರ ನಗರದ ನಗರಸಭೆ ಸಭಾಂಗಣದಲ್ಲಿ ವಿವಿಧ ವರ್ತಕರೊಂದಿಗೆ ಸಭೆ ನಡೆಸಿದ ಅವರು, ಸರ್ಕಾರ ಸೋಂಕು ತಡೆಗಟ್ಟುವ ಉದ್ದೇಶದಿಂದ ನಿರ್ಬಂಧಗಳನ್ನು ವಿಧಿಸಿದ್ದು ಅವುಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕು. ಇದು ಪ್ರತಿಯೊಬ್ಬರ ಜವಾಬ್ದಾರಿ ಎಂದರು. ಜಿಲ್ಲೆಯಲ್ಲಿ ಮೂರು ದಿನಗಳಿಂದ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಅಂಗಡಿ- ಮುಂಗಟ್ಟುಗಳಿಗೆ ಬರುವ ಗ್ರಾಹಕರಿಗೆ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮತ್ತು ಸ್ಯಾನಿಟೈಸರ್‌ ಬಳಕೆ ಮಾಡುವಂತೆ ತಿಳುವಳಿಕೆ ನೀಡಬೇಕು. ಸರ್ಕಾರದ ಆದೇಶದಂತೆ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂನಲ್ಲಿ ವಿ ಧಿಸಿರುವ ನಿರ್ಬಂಧಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಮತ್ತು ಜಿಲ್ಲಾಡಳಿತದ ಜೊತೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.

ಬೆಂಗಳೂರು ನಗರದಲ್ಲಿ ಕೋವಿಡ್‌ ಸೋಂಕು ಉಲ್ಬಣಗೊಳ್ಳುತ್ತಿದ್ದು ಆಕ್ಸಿಜನ್‌ ಸಮಸ್ಯೆ, ಹಾಸಿಗೆ ಸಮಸ್ಯೆ ಏದುರಾಗುತ್ತಿದೆ. ಸೋಂಕಿತ ವ್ಯಕ್ತಿ ಮಾತ್ರವಲ್ಲ ಆತನ ಕುಟುಂಬವೇ ನರಕ ಯಾತನೆ ಅನುಭವಿಸಬೇಕಾಗುತ್ತದೆ. ಆದ್ದರಿಂದ 10-15 ದಿನಗಳ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದರಿಂದ ಏನೂ ತೊಂದರೆಯಾಗುವುದಿಲ್ಲ, ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು. ಶಾಲಾ- ಕಾಲೇಜುಗಳನ್ನು ಬಂದ್‌ ಮಾಡಲಾಗಿದೆ. ಕಮರ್ಷಿಯಲ್‌ ವ್ಯಾಪಾರ- ವಹಿವಾಟು ಬಂದ್‌ ಮಾಡಲಾಗಿದೆ. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದಂತೆ ಅಂಗಡಿ- ಮುಂಗಟ್ಟುಗಳನ್ನು ತೆರೆಯಲು ಅವಕಾಶವಿಲ್ಲ, ಸರ್ಕಾರದ ಆದೇಶ ಮೇ 4ರ ವರೆಗೂ ಜಾರಿಯಲ್ಲಿರುತ್ತದೆ ಎಂದರು. ಪ್ರತೀ ನಿತ್ಯ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೂ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ವಾರಾಂತ್ಯದ ಶನಿವಾರ ಮತ್ತು ಭಾನುವಾರ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದರು.

ಸಾಮಾಜಿಕ ಅಂತರ ಮತ್ತು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಅಂಗಡಿಗಳಿಗೆ ಬರುವ ಗ್ರಾಹಕರಿಗೂ ತಿಳುವಳಿಕೆ ನೀಡಬೇಕು. ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದ್ದು, ಅಗತ್ಯ ವಸ್ತುಗಳ ಸರಕು ಸಾಗಾಟಕ್ಕೆ ಮಾತ್ರ ಅವಕಾಶವಿರುತ್ತದೆ. ಕಳೆದ ಬಾರಿ ಕೋವಿಡ್‌ ಪರಿಸ್ಥಿತಿಯಲ್ಲಿ ವರ್ತಕರು ಸಹಕಾರ ನೀಡಿದ್ದರಿಂದ ಕೊರೊನಾ ಹಿಮ್ಮೆಟ್ಟಿಸಲು ಸಾಧ್ಯವಾಗಿತ್ತು. ಅದೇ ರೀತಿ ಎರಡನೇ ಅಲೆ ಹಿಮ್ಮೆಟ್ಟಿಸಲು ವರ್ತಕರು ಸಹಕಾರ ನೀಡಬೇಕು ಎಂದರು. ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಎಂ.ಎಚ್‌. ಅಕ್ಷಯ್‌ ಮಾತನಾಡಿ, ಕೋವಿಡ್‌ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಉಚ್ಚ ನ್ಯಾಯಾಲಯದಿಂದ ಆದೇಶ ಬಂದಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರ ವಿರುದ್ಧ ದಂಡ ವಿ ಧಿಸುವುದು ಅಷ್ಟೇ ಅಲ್ಲ, ಅವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗುವುದು. ಜಿಲ್ಲಾದ್ಯಂತ ಈಗಾಗಲೇ 9 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.

ಕೋವಿಡ್‌ ಸೋಂಕು ರಾಕೆಟ್‌ ಮಾದರಿಯಲ್ಲಿ ಜಾಸ್ತಿಯಾಗುತ್ತಿದೆ. ಸರ್ಕಾರದ ಗೈಡ್‌ಲೈನ್‌ ಪಾಲಿಸುವುದು ಅನಿವಾರ್ಯವಾಗಿದ್ದು, ಈಗ ಗೈಡ್‌ ಲೈನ್‌ ಅನುಸರಿಸದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರ ಲಾಕ್‌ಡೌನ್‌ ಮಾಡಿದರೂ ಮಾಡಬಹುದು. ನಿಮ್ಮೆಲ್ಲರ ಸಹಕಾರದಿಂದ ಸೋಂಕನ್ನು ಹಿಮ್ಮೆಟ್ಟಿಸಲು ಸಾಧ್ಯ. ಆದ್ದರಿಂದ ಎಲ್ಲರೂ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದರು.

Advertisement

ಟೈಲರ್‌ ಅಸೋಸಿಯೇಶನ್‌, ಜನದಲಿತ್‌ ಸೇನದ ಅನಿಲ್‌ ಆನಂದ್‌ ಸೇರಿದಂತೆ ಇತರರು ತಮ್ಮಲ್ಲಿರುವ ಗೊಂದಲಗಳಿಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾ ಧಿಕಾರಿಗಳ ಬಳಿ ಪರಿಹಾರ ಕಂಡುಕೊಂಡರು. ಸಭೆಯಲ್ಲಿ ನಗರಸಭೆ ಪೌರಾಯುಕ್ತ ಬಸವರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next