ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕೊರೊನಾ ಸೋಂಕು ಎರಡನೇ ಅಲೆಯ ಆರ್ಭಟ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಕಳೆದೆರೆಡು ದಿನಗಳಿಂದ ಶತಕ ಬಾರಿಸುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಸೋಮವಾರ ಜಿಲ್ಲಾದ್ಯಂತ 142 ಪ್ರಕರಣ ಪತ್ತೆಯಾದರೆ, ಮಂಗಳವಾರ 115 ಪ್ರಕರಣ ಪತ್ತೆಯಾಗಿವೆ. 115 ಮಂದಿಯಲ್ಲಿ 102 ಮಂದಿಯನ್ನು ಹೋಮ್ ಐಸೋಲೇಶನ್ ಹಾಗೂ 10 ಮಂದಿಯನ್ನು ಕೋವಿಡ್ ಕೇರ್ ಸೆಂಟರ್ ಮತ್ತು 3 ಮಂದಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ನಿಧಾನಗತಿಯಲ್ಲಿ ಸೋಂಕು ಏರಿಕೆಯಾಗುತ್ತಿದ್ದು, ಮಂಗಳವಾರ ಪತ್ತೆಯಾದ ಸೋಂಕಿತರು ಸೇರಿದಂತೆ ಜಿಲ್ಲೆಯಲ್ಲಿ 15,265 ಮಂದಿಗೆ ಸೋಂಕು ತಗುಲಿದೆ. 14,367 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 29 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 726 ಪ್ರಕರಣ ಸಕ್ರಿಯವಾಗಿವೆ. 2 ನೇ ಅಲೆಗೆ ನಾಲ್ಕನೇ ಬಲಿ: ಕೊರೊನಾ ಸೋಂಕು ಎರಡನೇ ಅಲೆ ಜಿಲ್ಲೆಯಲ್ಲಿ 4 ಜನರನ್ನು ಬಲಿ ಪಡೆದುಕೊಂಡಿದೆ. ಮೊದಲ ಅಲೆಗೆ ಜಿಲ್ಲೆಯಲ್ಲಿ 139 ಮಂದಿ ತಮ್ಮ ಕೊನೆಯುಸಿರೆಳೆದಿದ್ದರು.
ಮಂಗಳವಾರ ಚಿಕ್ಕಮಗಳೂರು ನಗರದ ಕೋಟೆ ಬಡಾವಣೆಯ 60 ವರ್ಷದ ಮಹಿಳೆ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಕೊರೊನಾ ಮಾರ್ಗಸೂಚಿಯಂತೆ ಮೃತರ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ. ಮಂಗಳ ವಾರ ಮೃತಪಟ್ಟ ಮಹಿಳೆ ಸೇರಿದಂತೆ ಎರಡನೇ ಅಲೆ ಮೂರು ಜನರನ್ನು ಬಲಿ ಪಡೆದುಕೊಂಡಿದೆ.
ಡಿಸಿ-ಎಸ್‌ಪಿ ಕಾರ್ಯಾಚರಣೆ: ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕಠಿಣ ಮಾರ್ಗಸೂಚಿಗಳನ್ನು ಜಾರಿಗೆ ತಂದರೂ ನಗರದಲ್ಲಿ ಕೆಲವರು ಮಾಸ್ಕ್ ಧರಿಸದೇ ಸಂಚರಿಸುತ್ತಿರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್. ಅಕ್ಷಯ್ ನಗರದ ಪ್ರಮುಖ ರಸ್ತೆಗಳಲ್ಲಿರುವ ಅಂಗಡಿ- ಮುಂಗಟ್ಟುಗಳಿಗೆ, ಮಾರುಕಟ್ಟೆಗೆ ಭೇಟಿ ನೀಡಿ ಮಾಸ್ಕ್ ಧರಿಸದಿರುವರಿಗೆ ಎಚ್ಚರಿಸಿ ದಂಡ ವಿಧಿಸಿದರು.
ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ರಾಜ್ಯದಲ್ಲಿ ಕೋವಿಡ್ ವೇಗವಾಗಿ ಹರಡುತ್ತಿದೆ. ಜಿಲ್ಲೆಯಲ್ಲಿ ಕಳೆದೆರೆಡು ದಿನಗಳಿಂದ ನೂರರ ಗಡಿ ದಾಟುತ್ತಿದೆ. ಮಾಸ್ಕ್ ಧರಿಸುವಂತೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು. ಕೆಲವರು ಅನುಸರಿಸದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾ ಧಿಕಾರಿಯೊಂದಿಗೆ ತಾವೇ ಕಾರ್ಯಾಚರಣೆಗೆ ಇಳಿದು ಎಚ್ಚರಿಕೆ ನೀಡಲಾಗುತ್ತಿದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್. ಅಕ್ಷಯ್ ಮಾತನಾಡಿ, ಸರ್ಕಾರ ಹಲವಾರು ನಿರ್ಬಂಧಗಳನ್ನು ಹೇರಿದ್ದರೂ ಕೆಲವರು ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ, ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಮತ್ತು ದಂಡ ವಿಧಿಸಿದರೂ ಮಾರ್ಗಸೂಚಿಗಳನ್ನು ಉಲ್ಲಂಘಿ ಸುತ್ತಿದ್ದಾರೆ.
ಇಂದು ಎಚ್ಚರಿಕೆ ನೀಡಿ ದಂಡ ವಿಧಿ ಸಲಾಗಿದೆ ಎಂದರು. ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ ಜಿಲ್ಲೆಯಲ್ಲಿ 2 ಪ್ರಕರಣ ದಾಖಲಾಗಿದೆ. ಕಡೂರು ತಾಲೂಕಿನಲ್ಲಿ ಜಾತ್ರೋತ್ಸವಕ್ಕೆ ಮುಂದಾದವರ ವಿರುದ್ಧ ಹಾಗೂ ಚಿಕ್ಕಮಗಳೂರು ನಗರದಲ್ಲಿ ಪೊಲೀಸರ ವಿರುದ್ಧ ವಾಗ್ವಾದ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜನರು ಎಚ್ಚೆತ್ತುಕೊಳ್ಳದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರಸಭೆ ಆಯುಕ್ತ ಬಸವರಾಜ್ ಮಾತನಾಡಿ, ಜಿಲ್ಲಾ ಧಿಕಾರಿ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಅಂಗಡಿ- ಮುಂಗಟ್ಟು ಎದುರು ಬಾಕ್ಸ್ ಮಾರ್ಕ್ ಮಾಡುವಂತೆ, ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರ, ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ನಿಯಮ ಉಲ್ಲಂಘಿ ಸಿದವರ ಅಂಗಡಿಗಳನ್ನು ಸೀಜ್ ಮಾಡಲಾಗುವುದು ಎಂದರು.