ಶೃಂಗೇರಿ: ತಾಲೂಕಿನಲ್ಲಿ ಜಲ ಮೂಲಗಳು ಸಾಕಷ್ಟು ಇದ್ದರೂ, ಸೂಕ್ತ ನಿರ್ವಹಣೆ ಇಲ್ಲದೆ ಕುಡಿಯುವ ನೀರಿನ ಸಮಸ್ಯೆ ಹಲವಾರು ಕಡೆ ತಲೆದೋರಿದೆ. ಪಪಂ ಸೇರಿದಂತೆ ವಿವಿಧ ಗ್ರಾಪಂ ಮಟ್ಟದ ಕುಡಿಯುವ ನೀರಿನ ಘಟಕಗಳಿಗೆ ವಿದ್ಯುತ್ ಸಮಸ್ಯೆ, ಪೈಪ್‌ಲೈನ್ ಹಾನಿಗೊಳಗಾಗುವ ಕಾರಣದಿಂದ ಆಗಾಗ್ಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಅಡಚಣೆಯಾಗುತ್ತಿದೆ. ನದಿಯಿಂದ ನೀರೆತ್ತುವ ಘಟಕಗಳಿಗೆ ನೀರಿನ ಸಮಸ್ಯೆಯಾಗದಿದ್ದರೂ, ಹಳ್ಳ, ಕೆರೆಯಿಂದ ನೀರೆತ್ತುವ ಕಡೆಯಲ್ಲಿ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗಲಿದೆ. ತಾಲೂಕಿನ ದೊಡ್ಡ ಗ್ರಾಪಂ ಮೆಣಸೆಯ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ತುಂಗಾನದಿಯ ನೀರನ್ನು ಅವಲಂಬಿಸಿದೆ.
ನದಿಯ ಪಕ್ಕದಲ್ಲಿ ಬಾವಿ ನಿರ್ಮಿಸಿ ಅದರಿಂದ ನೀರೆತ್ತಿ, ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿ, ನಂತರ ಮನೆ- ಮನೆಗಳಿಗೆ ವಿತರಣೆ ಮಾಡಲಾಗುತ್ತಿದೆ. ಮೆಣಸೆ ಗ್ರಾಪಂ ಕಚೇರಿ ಹಿಂಭಾಗದಲ್ಲಿ ನಿರ್ಮಿಸಿರುವ ನೀರಿನ ಸಂಗ್ರಹ ತೊಟ್ಟಿ ಹಲವಾರು ವರ್ಷದ ಹಿಂದೆ ನಿರ್ಮಿಸಿದ್ದು, ಅಂದಿನ ನೀರಿನ ಬಳಕೆಗೂ ಈಗಿನ ನೀರಿನ ಬಳಕೆದಾರರ ಹೆಚ್ಚಳದಿಂದ ಪ್ರತಿ ದಿನ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ದಿನ ಬಿಟ್ಟು ದಿನ ನೀರು ಸರಬರಾಜು ಮಾಡಲಾಗುತ್ತಿದೆ. ನೀರಿನ ತೊಟ್ಟಿಗೆ ಬರುವ ಪೈಪ್ ಲೈನ್ ಹಳೆಯದಾಗಿದ್ದು,ಆಗಾಗ್ಗೆ ಪೈಪ್ ಒಡೆದು ನೀರು ಪೂರೈಕೆಗೆ ಅಡಚಣೆಯಾಗುತ್ತಿದೆ. ರಸ್ತೆ ಅಗಲೀಕರಣಕ್ಕೂ ಮೊದಲು ಹಾಕಲಾಗಿದ್ದ ಪೈಪ್ ಈಗ ರಸ್ತೆಯಲ್ಲಿದ್ದು, ಪೈಪ್ ಒಡೆದರೂ ದುರಸ್ತಿ ಮಾಡುವುದು ಕಷ್ಟವಾಗಿದೆ.
ವಿದ್ಯುತ್ ಸಮಸ್ಯೆ: ಬೇಸಿಗೆಯಲ್ಲಿ ವಿದ್ಯುತ್ ಕಡಿತ ಹೆಚ್ಚಾಗಿದ್ದು, ಇದರೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ವೋಲ್ಟೆàಜ್ ಸಮಸ್ಯೆ ಎದುರಾಗಿದೆ. ಶಿಡ್ಲೆ, ಕೋಡೂರು, ಹಾಲಂದೂರು, ಹೊಸನಗರ, ಕೊರಡಕಲ್ಲು, ಪಡುಬೈಲು, ಮೂಡಬನ ಮುಂತಾದೆಡೆ ಸಮರ್ಪಕ ವೋಲ್ಟೆಜ್ ಇಲ್ಲದೆ ಮೋಟಾರ್ ಚಾಲನೆಯಾಗುವುದಿಲ್ಲ. ಕೆಲವೆಡೆ ಸಣ್ಣ ಹಳ್ಳದಿಂದ ಪೂರೈಸುವ ನೀರಿನ ಹರಿವು ಕಡಿಮೆಯಾಗಿದೆ. ತೋಟಗಳಿಗೆ ನೀರೆತ್ತುವುದರಿಂದ ನೀರಿನ ಹರಿವು ಕುಸಿತವಾಗಿದೆ.
ಅಸಮರ್ಪಕ ಬಳಕೆ: ಕುಡಿಯುವ ನೀರು ಪಪಂ ಮತ್ತು ಗ್ರಾಪಂನಿಂದ ಪೂರೈಸುತ್ತಿದ್ದು,ಸಾರ್ವಜನಿಕರು ನೀರಿನ ಬಳಕೆಯನ್ನು ಅನ್ಯ ಉದ್ದೇಶಕ್ಕೆ ಬಳಸುವುದರಿಂದ ನೀರಿನ ಸಮರ್ಪಕ ಬಳಕೆಯಾಗುತ್ತಿಲ್ಲ. ಪಪಂ ಶುದ್ಧೀಕರಿಸಿ ನೀರನ್ನು ಸಾರ್ವಜನಿಕರಿಗೆ ಒದಗಿಸುತ್ತಿದ್ದು, ಕುಡಿಯುವ ನೀರನ್ನು ತಮ್ಮ ಕೈತೋಟ, ವಾಹನ ತೊಳೆಯಲು ಮತ್ತಿತರ ಬಳಕೆಗೂ ಬಳಸುತ್ತಾರೆ. ಇದರಿಂದ ಸಾರ್ವಜನಿಕರಿಗೆ ನೀರಿನ ಸರಬರಾಜಿನಲ್ಲಿ ಇಳಕೆಯಾಗುತ್ತದೆ. ಕುಡಿಯುವ ನೀರನ್ನು ಹಿತ- ಮಿತವಾಗಿ ಬಳಸಬೇಕು ಎಂದು ಪಪಂ ಅಧ್ಯಕ್ಷ ಹರೀಶ್ ಶೆಟ್ಟಿ ವಿನಂತಿಸಿದ್ದಾರೆ. ವಾಟರ್‌ಮ್ಯಾನ್‌ಗಳು ಕುಡಿಯುವ ನೀರಿನ ಘಟಕದ ನಿರ್ವಹಣೆ ಮಾಡುತ್ತಿದ್ದು, ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಾಟರ್ ಮ್ಯಾನ್ ಪ್ರತಿ ದಿನವೂ ಕರ್ತವ್ಯದಲ್ಲಿರಬೇಕಾಗಿದ್ದು,ರಜೆ ಎಂಬುದೇ ಇಲ್ಲ. ಕುಡಿಯುವ ನೀರಿನ ಸರಬರಾಜು ಮಾಡುವ ಮೋಟಾರ್‌ಗಳಿಗೆ ರಾತ್ರಿ ಹಾಗೂ ಹಗಲಿನಲ್ಲಿ ತ್ರೀಫೇಸ್ ವಿದ್ಯುತ್ ದೊರಕುವುದರಿಂದ ಆ ಸಮಯಕ್ಕೆ ಮೋಟಾರ್ ಚಾಲನೆಗೊಳಿಸುವುದು ಅಗತ್ಯವಾಗಿದೆ. ವೋಲ್ಟೆàಜ್ ಕಡಿಮೆಯಾದರೆ ಮೋಟರ್ ಸ್ಥಬ್ಧಗೊಳಿಸಬೇಕು.ನಿರಂತರ ಸಮರ್ಪಕ ವಿದ್ಯುತ್ ಪೂರೈಕೆ ಇದ್ದರೆ ಈ ಸಮಸ್ಯೆ ಪರಿಹಾರವಾಗಬಲ್ಲದು.