ಶೃಂಗೇರಿ: ಸಾಹಿತಿ ಲಕ್ಷ್ಮೀ ನಾರಾಯಣ ಭಟ್ಟರು ಅಪಾರವಾದ ಜ್ಞಾನ ಸಂಪತ್ತನ್ನು ಹೊಂದಿ ಸಾಹಿತ್ಯದಲ್ಲಿ ವಿವಿಧ ರೀತಿಯ ಪ್ರಯೋಗ ನಡೆಸಿದ್ದರು ಎಂದು ಪತ್ರಕರ್ತ ರಾಘವೇಂದ್ರ ಹೇಳಿದರು.
ಪಟ್ಟಣಕ್ಕೆ ಸಮೀಪದ ಅಕ್ರವಳ್ಳಿಯ ಭಾರತೀನಗರ ಬಡಾವಣೆಯಲ್ಲಿ ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನ ಕೇಂದ್ರ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಏರ್ಪಡಿಸಿದ್ದ ಭಾವಪ್ರಣತಿ – ಲಕ್ಷ್ಮೀ ನಾರಾಯಣ ಭಟ್ಟರಿಗೆ ಅರ್ಪಿಸಿದ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬದುಕು ಮತ್ತು ಬರಹದಲ್ಲಿ ಸಾಮ್ಯತೆಯನ್ನು ಸ್ಥಾಪಿಸಿದ್ದ ಭಟ್ಟರು ಓರ್ವ ಆದರ್ಶವಾದಿ ಸಾಹಿತಿಯಾಗಿ ಸಾರಸ್ವತ ಲೋಕಕ್ಕೆ ಮಾದರಿಯಾಗಿದ್ದಾರೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಂಗ ಕಲಾವಿದ ಬಿ. ಎಲ್. ರವಿಕುಮಾರ್, ಶೃಂಗೇರಿ ಮತ್ತು ಲಕ್ಷ್ಮೀ ನಾರಾಯಣ ಭಟ್ಟರ ನಡುವೆ ಅನ್ಯೋನ್ಯವಾದ ಸಾಂಸ್ಕೃತಿಕ ಸಂಬಂಧವಿತ್ತು. ಕಾಳಿಂಗ ನಾವಡ ಸಾಂಸ್ಕೃತಿಕ ಪ್ರತಿಷ್ಠಾನದ ಜೊತೆಗೆ ನಿಕಟವಾದ ನಂಟನ್ನು ಹೊಂದಿ ನಮ್ಮ ಕಿರುತೆರೆ ಕಾರ್ಯಕ್ರಮಗಳಿಗೆ ಅವರ ಸಾಹಿತ್ಯವನ್ನು ನೀಡಿ ಗ್ರಾಮೀಣ ಪ್ರದೇಶದ ಕಲಾವಿದರಿಗೆ ಪ್ರೋತ್ಸಾಹ ನೀಡಿ ತಮ್ಮ ಸರಳ ಸಜ್ಜನಿಕೆಯನ್ನು ಮೆರೆದಿದ್ದರು ಎಂದರು.
ರಮೇಶ್ ಬೇಗಾರ್, ಕಾಡ ಹಕ್ಕಿಯಾಗಿದ್ದ ಗರ್ತಿಕೆರೆ ರಾಘಣ್ಣ ಮತ್ತು ಅಜ್ಞಾತವಾಗಿ ಉಳಿದಿರುವ ಸಂತ ಶಿಶುನಾಳ ಷರೀಫರನ್ನು ಬೆಳಕಿಗೆ ತಂದ ಅನನ್ಯ ಸಾಹಿತ್ಯ ಕಾಯಕ ಅವರದಾಗಿತ್ತು ಎಂದರು. ಇದೇ ಸಂದರ್ಭದಲ್ಲಿ ಚನ್ನಗಿರಿಯ ಶಶಿಕಿರಣ್, ಶ್ರಾವಣಿ ಕೊಪ್ಪ, ಶ್ರೀದೇವ್ ಮತ್ತು ಆಹ್ವಾನಿತ ಗಾಯಕರು ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟರ ವಿವಿಧ ಗೀತೆಗಳನ್ನು ಪ್ರಸ್ತುಪಡಿಸಿದರು.
ಬಾರೆ ನನ್ನ ದೀಪಿಕಾ, ಬನ್ನಿ ಭಾವಗಳೆ, ಈ ಭಾನು ಈ ಚುಕ್ಕಿ, ಎಂಥ ಮರುಳಯ್ಯ ಮೊದಲಾದ ಗೀತೆಗಳು ಪ್ರೇಕ್ಷಕರನ್ನು ಸೆಳೆದವು. ಭಟ್ಟರ ರಚನೆಯ ವಿಶ್ವರೂಪವನ್ನು ಈ ಸುಗಮ ಸಂಗೀತ ಕಾರ್ಯಕ್ರಮ ಬಿಂಬಿಸುವಲ್ಲಿ ಯಶಸ್ವಿಯಾಯಿತು. ರಾಮು ರಂಗದೊಳ್, ರಾಘವೇಂದ್ರ ರಂಗೊಳ್, ರಂಜಿತ್ ಉಡುಪಿ, ಚೈತನ್ಯ ಪಕ್ಕವಾದ್ಯದಲ್ಲಿ ಸಹಕರಿಸಿದರು. ವಿದ್ವಾನ್ ಶ್ರೀನಿಧಿ ಕೊಪ್ಪ ಸಂಯೋಜನೆ ನೆರವೇರಿಸಿದರು.