ಚಿಕ್ಕಮಗಳೂರು: ಬಡಜನರ ಸಮಸ್ಯೆಗಳನ್ನು ಆಲಿಸಿ ಇತ್ಯರ್ಥ ಪಡಿಸುವ ಉದ್ದೇಶದಿಂದ ಸರ್ಕಾರ ತೆರೆದಿದ್ದ ಕುಂದು ಕೊರತೆ ಪ್ರಾ ಧಿಕಾರ ವಿಭಾಗಕ್ಕೆ ಮುಖಸ್ಥರಿಲ್ಲದೇ ಜನ ತಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕೆಂಬ ಪ್ರಶ್ನೆ ಎದ್ದಿದೆ. ನ್ಯಾಯಾಲಯದ ಮೆಟ್ಟಿಲೇರಲು ಅಶಕ್ತರಾಗಿರುವ ಮತ್ತು ಸಾಮಾನ್ಯ ಜನರ ಕುಂದು ಕೊರತೆಗಳನ್ನು ಆಲಿಸಿ ಇತ್ಯರ್ಥಪಡಿಸಲು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಪ್ರತ್ಯೇಕ ಕುಂದು ಕೊರತೆ ಪ್ರಾಧಿಕಾರ ವಿಭಾಗವನ್ನು ತೆರೆಯಲಾಗಿದೆ. ಆದರೆ ಮುಖ್ಯಸ್ಥರಿಲ್ಲದೆ ಕುಂದು ಕೊರತೆ ಪ್ರಾಧಿಕಾರ ವಿಭಾಗ ಜನರ ಪ್ರಯೋಜನಕ್ಕೆ ಬಾರದಂತಾಗಿದೆ.
ರಾಜ್ಯ ಸರ್ಕಾರ 2017ರಲ್ಲಿ ಕುಂದು ಕೊರತೆ ಪ್ರಾಧಿಕಾರ ತೆರೆಯಲು ಆದೇಶ ನೀಡಿದ ಬಳಿಕ ಬೆಳಗಾವಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಆರಂಭಗೊಂಡಿತು. ಮೊದಲ ಮುಖ್ಯಸ್ಥರಾಗಿ ನಿವೃತ್ತ ನ್ಯಾಯಾಧೀಶ ಬಾ.ಭೀ. ಪತ್ತುರ ಅವರನ್ನು ನಿಯೋಜನೆ ಮಾಡಲಾಗಿತ್ತು. ತದ ನಂತರ ಸಾರ್ವಜನಿಕರು ಹೊತ್ತು ತರುತ್ತಿದ್ದ ದೂರುಗಳನ್ನು ಪರಿಶೀಲನೆ ಮಾಡಿ ಅವುಗಳನ್ನು ಇತ್ಯರ್ಥಪಡಿಸಲಾಗುತ್ತಿತ್ತು. ಇಂತಹ ನೂರಾರು ಸಮಸ್ಯೆಗಳು ಇತ್ಯರ್ಥಗೊಂಡು ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿತ್ತು.
ಬಡವರು ಹಾಗೂ ಸಾಮಾನ್ಯ ಜನ ಸಣ್ಣಪುಟ್ಟ ಪ್ರಕರಣಗಳಿಗೂ ನ್ಯಾಯಾಲಯದ ಮೆಟ್ಟಿಲೇರಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಕುಂದು ಕೊರತೆ ಪ್ರಾಧಿಕಾರ ವಿಭಾಗದಲ್ಲಿ 10 ರೂ. ನೀಡಿ ಅರ್ಜಿ ಪಡೆದು ಸಲ್ಲಿಸಿದಲ್ಲಿ ದೂರು ಸಂಬಂಧ ಕುಂದು ಕೊರತೆ ವಿಭಾಗದ ಮುಖ್ಯಸ್ಥರ ನೇತೃತ್ವದಲ್ಲಿ ಪರಿಶೀಲನೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸಲಾಗುತ್ತಿತ್ತು. ನಗರದ ಜಿಲ್ಲಾ ಪಂಚಾಯತ್ ಕುಂದು ಕೊರತೆ ಪ್ರಾ ಧಿಕಾರ ಆರಂಭಗೊಂಡ ಬಳಿಕ ಜಿ.ಪಂ. ಹಾಗೂ ಕಂದಾಯ ವಿಭಾಗಕ್ಕೆ ಸಂಬಂಧಿ ಸಿದ ಸಾರ್ವಜನಿಕ ನೀರು ಸರಬರಾಜು, ಆರೋಗ್ಯ ನಿರ್ವಹಣೆ, ರಸ್ತೆ ನಿರ್ವಹಣೆ, ಬೀದಿದೀಪ ನಿರ್ವಹಣೆ, ಯೋಜನೆಗಳಡಿಯಲ್ಲಿ ಫಲಾನುಭವಿಗಳ ಗುರುತಿಸುವಿಕೆ, ಯೋಜನೆಯಡಿಯಲ್ಲಿ ಫಲಾನುಭವಿಗಳ ಹಂಚಿಕೆ, ನೈರ್ಮಲಿಕರಣ, ದಸ್ತಾವೇಜು ಪ್ರಮಾಣ ಪತ್ರಗಳ ಮಂಜೂರು, ಇತರೆ ವಿಷಯಗಳ ಸಂಬಂಧ ಬರುತ್ತಿದ್ದ ದೂರುಗಳನ್ನು ಪರಿಶೀಲಿಸಲಾಗುತ್ತಿತ್ತು. ಜಿಲ್ಲೆಯಲ್ಲಿ 2017-18ನೇ ಸಾಲಿನಲ್ಲಿ 122 ಸಾರ್ವಜನಿಕರಿಂದ ಅಹವಾಲು ಅರ್ಜಿಗಳು ಬಂದಿದ್ದರೆ, 2018-19ನೇ ಸಾಲಿನಲ್ಲಿ 139 ಅರ್ಜಿಗಳು ಬಂದಿದ್ದವು. 2020-21ನೇ ಸಾಲಿನಲ್ಲಿ ಕೇವಲ 8 ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗಿದೆ.
ಈ ಹಿಂದೆ ಬಂದ ಒಟ್ಟು 546 ಅರ್ಜಿಗಳಲ್ಲಿ 482 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಸಾರ್ವಜನಿಕರು ಕುಂದು ಕೊರತೆ ವಿಭಾಗದಿಂದ ತಮಗಾಗುತ್ತಿದ್ದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಿದ್ದರು. ಇದರಿಂದ ಅನೇಕ ಸಮಸ್ಯೆಗಳು ಇತ್ಯರ್ಥಗೊಂಡಿದ್ದವು. ಆದರೆ, 2020ರಲ್ಲಿ ಈ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿವೃತ್ತ ನ್ಯಾಯಾ ಧೀಶರ ಅವ ಧಿ ಮುಗಿದ ಬಳಿಕ ಸರ್ಕಾರ ಆ ಸ್ಥಾನಕ್ಕೆ ಯಾರನ್ನು ನೇಮಕ ಮಾಡದಿರುವುದರಿಂದ ಸಮಸ್ಯೆಗಳನ್ನು ಹೊತ್ತು ತರಲು ಸಾರ್ವಜನಿಕರು ಮುಂದಾಗುತ್ತಿಲ್ಲ, ಕಚೇರಿಯಲ್ಲಿ ಅರ್ಜಿಗಳನ್ನು ಪಡೆದುಕೊಳ್ಳುತ್ತಿಲ್ಲ. ಜಿ.ಪಂ. ಸಿಇಒ ಅವರೇ ಇನ್‌ಚಾರ್ಜ್ ಪಡೆದು ಕೊಂಡಿದ್ದು, ಸಿಇಒ ಅವರಿಗೆ ಅರ್ಜಿಗಳನ್ನು ಟಪಾಲು ಮೂಲಕ ಕಳಿಸಿಕೊಡಲಾಗುತ್ತಿದೆ. ಸಿಇಒ ಅವರು ಇನ್‌ಚಾರ್ಜ್ ಪಡೆದುಕೊಂಡರು ಕುಂದು ಕೊರತೆ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸಲು ಸರ್ಕಾರ ಅಧಿಕಾರ ನೀಡದ ಕಾರಣ ಕುಂದುಕೊರತೆ ವಿಭಾಗ ಇದ್ದೂ ಇಲ್ಲದಂತಾಗಿದೆ.
ಈ ಹಿನ್ನೆಲೆಯಲ್ಲಿ ಕುಂದುಕೊರತೆ ವಿಭಾಗಕ್ಕೆ ಶೀಘ್ರವೇ ನಿವೃತ್ತ ನ್ಯಾಯಾ ಧೀಶರನ್ನು ನೇಮಕ ಮಾಡಬೇಕೆಂಬುದು ಸಾರ್ವಜನಿಕರ ಕೋರಿಕೆಯಾಗಿದೆ