ಚಿಕ್ಕಮಗಳೂರು: ರಸ್ತೆ ಸಾರಿಗೆ ನೌಕರರ ಪ್ರತಿಭಟನೆ 6ನೇ ದಿನಕ್ಕೆ ಕಾಲಿಟ್ಟಿದ್ದು, ಸೋಮವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ತಟ್ಟೆ- ಲೋಟ ಬಡಿಯುವ ಮೂಲಕ ವಿಭಿನ್ನ ಪ್ರತಿಭಟನೆ ನಡೆಸಿದರು.
ನೌಕರರು ತಮ್ಮ ಕುಟುಂಬಸ್ಥರು ಹಾಗೂ ಮಹಿಳೆಯರು ಮಕ್ಕಳೊಂದಿಗೆ ಬೀದಿಗಿಳಿದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ನಡೆಯನ್ನು ಖಂಡಿಸಿ, ತಮ್ಮ ಬೇಡಿಕೆಗಳನ್ನು ಈಡೇರಿಸುವರೆಗೂ ಹೋರಾಟ ಕೈಬಿಡುವ ಮಾತೇ ಇಲ್ಲವೆಂದು ಸ್ಪಷ್ಟಪಡಿಸಿದರು.
ಆಜಾದ್ ಪಾರ್ಕ್ ವೃತ್ತದಲ್ಲಿ ಡಾ| ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ನಡೆಸಿದ ನೌಕರರು, ದಿನದಲ್ಲಿ 10 ರಿಂದ 14ಗಂಟೆ ದುಡಿಯುತ್ತಿದ್ದೇವೆ. ನಮ್ಮ ಬದುಕು ಸಾರ್ವಜನಿಕರ ಸೇವೆಗೆ ಮುಡಿಪಾಗಿಟ್ಟಿದ್ದೇವೆ. ಆದರೆ, ನಮ್ಮ ಸೇವೆಗೆ ತಕ್ಕ ವೇತನ ಮತ್ತು ಸವಲತ್ತುಗಳನ್ನು ಸರ್ಕಾರ ನೀಡದೆ ವಂಚಿಸುತ್ತಿದೆ. ನಮ್ಮ ಶ್ರಮಕ್ಕೆ ತಕ್ಕ ವೇತನ, ಸವಲತ್ತು ಸಿಗಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಬಹುಜನ ವಿದ್ಯಾರ್ಥಿ ಸಂಘದ ಮುಖಂಡ ಚಿದಂಬರ ಮಾತನಾಡಿ, ಕೊರೊನಾವನ್ನು ದೇಶದಿಂದ ಓಡಿಸಲು ದೇಶದ ಜನತೆ ತಟ್ಟೆ ಬಾರಿಸಿದ್ದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಂಡು, ದೇಶದ ಬಹುತೇಕ ಜನರು ದಡ್ಡರೆಂದು ತಿಳಿದು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂದರು.
ಕೆಎಸ್‌ಆರ್‌ಟಿಸಿ ನೌಕರರಾದ ನಾಗರತ್ನ ಮಾತನಾಡಿ, ನಮ್ಮ ಹೊಟ್ಟೆಪಾಡಿಗಾಗಿ ಬೀದಿಗೆ ಬಂದಿದ್ದೇವೆ. ಸರ್ಕಾರ ಇದನ್ನು ಮನಗಾಣಬೇಕು. ನಮಗೆ ನೀಡುವ ಅಲ್ಪಸ್ವಲ್ಪ ಸಂಬಳದಿಂದ ಕುಟುಂಬ ನಿರ್ವಹಣೆ ಅಸಾಧ್ಯವಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ, ಕೂಡಲೇ ನೌಕರರ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರು ಮುಂದಾಗಬೇಕೆಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್. ಎಚ್.ದೇವರಾಜ್, ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ. ರೇಣುಕಾರಾಧ್ಯ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ಎಚ್.ಎಸ್.ಪುಟ್ಟಸ್ವಾಮಿ, ಕ್ಷೇತ್ರ ಸಮಿತಿ ಅಧ್ಯಕ್ಷ ಹಂಪಾಪುರ ಮಂಜೇಗೌಡ, ಅಸಂಘಟಿತ ಕಾರ್ಮಿಕ ಸಂಘದ ಮುಖಂಡ ರಸೂಲ್‌ಖಾನ್, ಸಂವಿಧಾನ ಸಂರಕ್ಷಣಾ ಸಮಿತಿ ಮುಖಂಡ ಗೌಸ್ ಮೊಹಿಯುದ್ದೀನ್, ನಸ್ರುಲ್ ಷರೀಫ್ ಇದ್ದರು.