ಚಿಕ್ಕಮಗಳೂರು: ರಾಜ್ಯ ರಸ್ತೆಸಾರಿಗೆ ಸಂಸ್ಥೆ ನೌಕರರ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ನಗರದ ಗಾಂ ಧಿ ಪಾರ್ಕ್ ಆವರಣದಲ್ಲಿ ಮುಷ್ಕರ ನಿರತ ನೌಕರರು ಸರ್ಕಾರ 6ನೇ ವೇತನ ಆಯೋಗ ಜಾರಿ ಮಾಡಬೇಕು. ಇಲ್ಲವೇ ನಮಗೆ ದಯಾಮರಣ ನೀಡಬೇಕೆಂದು ಕಣ್ಣೀರಿಟ್ಟರು.
ಶನಿವಾರ ನಗರದ ಗಾಂ ಧಿ ಪಾರ್ಕ್ ಆವರಣದಲ್ಲಿ ಕುಟುಂಬಸ್ಥರೊಂದಿಗೆ ಪ್ರತಿಭಟನೆ ನಡೆಸಿದ ನೌಕರರು, ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವರನ್ನು ವರ್ಗಾವಣೆ ಮಾಡಿ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಸರ್ಕಾರದ ಇಂತಹ ಗೊಡ್ಡು ಬೆದರಿಕಗೆ ನಾವು ಜಗ್ಗುವುದಿಲ್ಲ, 6ನೇ ವೇತನ ಆಯೋಗ ಜಾರಿಯಾಗುವರೆಗೂ ನಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ನಾವೂ ಮನುಷ್ಯರೇ. ಕಡಿಮೆ ವೇತನಕ್ಕೆ ದಿನದಲ್ಲಿ 10 ರಿಂದ 15 ಗಂಟೆಗಳ ಕಾಲ ಕೆಲಸ ನಿರ್ವಹಿಸುತ್ತಿದ್ದೇವೆ. ಸಂಸ್ಥೆ ನೀಡುವ ವೇತನದಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ. ಒಂದು ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಷ್ಟದ ಜೀವನ ನಡೆಸುತ್ತಿದ್ದೇವೆ. ನೌಕರರ ಕಟುಂಬಗಳು ಬೀದಿಗೆ ಬಂದಿವೆ. ಇದರ ಬದಲು ಸರ್ಕಾರ ನಮಗೆ ವಿಷ ನೀಡಲಿ. ಇಲ್ಲವೇ ದಯಾಮರಣ ನೀಡಲಿ ಎಂದು ಕಣ್ಣೀರು ಸುರಿಸಿದರು.
ನೌಕರರ ಆತ್ಮಸ್ಥೈರ್ಯ ಕುಗ್ಗಿಸಲು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕೆಲವು ನೌಕರರನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ಇದೆಲ್ಲವನ್ನು ಜನರು ನೋಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರು ಸರ್ಕಾರಕ್ಕೆ ತಕ್ಕಪಾಠ ಕಲಿಸುತ್ತಾರೆ ಎಂದು ತಮ್ಮ ಅಸಮಾಧಾನ ಹೊರಹಾಕಿದರು. ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರನ್ನು ಎಂದೂ ವರ್ಗಾವಣೆ ಮಾಡಿ ಆದೇಶ ಹೊರಡಿಸಿರಲಿಲ್ಲ, ಆದರೆ ಈಗ ಮಹಿಳಾ ನೌಕರರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವುದು ದುರಾದೃಷ್ಟಕರ. ನಾವೇನು ಐಷಾರಾಮಿ ಜೀವನಕ್ಕಾಗುವಷ್ಟು ವೇತನ ನೀಡಿ ಎಂದು ಕೇಳುತ್ತಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ, ಕುಟುಂಬ ನಿರ್ವಹಣೆಗಾಗುಷ್ಟು ವೇತನವನ್ನು ಹೆಚ್ಚಳ ಮಾಡಿ ಎಂದು ಕೇಳುತ್ತಿದ್ದೇವೆ ಎಂದರು.
ನೌಕರರಿಗೆ 6ನೇ ವೇತನ ಆಯೋಗ ಜಾರಿ ಮಾಡಿ ಎಂದರೆ ಸರ್ಕಾರ ಚುನಾವಣೆ ನೀತಿ ಸಂಹಿತೆಯ ಕುಂಟು ನೆಪ ಹೇಳುತ್ತಿದೆ. ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ನೌಕರರನ್ನು ವರ್ಗಾವಣೆ ಮಾಡಲು ನೀತಿಸಂಹಿತೆ ಅಡ್ಡಿಯಾವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಜೀವನದಲ್ಲಿ ಅನೇಕ ಹೋರಾಟಗಳನ್ನು ಮಾಡಿ ಇಂದು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ನಮ್ಮ ನೋವು ಅವರಿಗೆ ಅರ್ಥವಾಗುತ್ತದೆ ಎಂದುಕೊಂಡಿದ್ದೇವೆ ಎಂದರು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೂಟದ ಜಿಲ್ಲಾಧ್ಯಕ್ಷ ಪ್ರಸನ್ನ, ಕಾಂಗ್ರೆಸ್ ಮುಖಂಡ ರವೀಶ್ ಕ್ಯಾತನಬೀಡು, ರಾಜು, ದಲಿತ ಸಂಘರ್ಷ ಸಮಿತಿ ಮುಖಂಡ ಮೋಹನ್ ಕುಮಾರ್ ಹಾಗೂ ನೌಕರರು ಹಾಗೂ ನೌಕರರ ಕುಟುಂಬಸ್ಥರು ಇದ್ದರು.