ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬುಧವಾರ 16 ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರಲ್ಲಿ 15 ಮಂದಿಯನ್ನು ಹೋಂ ಐಸೋಲೇಷನ್ ಮಾಡಲಾಗಿದ್ದು, ಓರ್ವ ವ್ಯಕ್ತಿಯನ್ನು ಕೊರೊನಾ ಕೇರ್ ಸೆಂಟರ್‌ಗೆ ದಾಖಲಿಸಲಾಗಿದೆ.
ಕಡೂರು ತಾಲೂಕಿನಲ್ಲಿ ಇಬ್ಬರು, ಚಿಕ್ಕಮಗಳೂರು 8, ಮೂಡಿಗೆರೆ 4 ಹಾಗೂ ಕಡೂರು ಇಬ್ಬರಲ್ಲಿ ಸೋಂಕು ಕಂಡು ಬಂದಿದೆ. ಇಂದು ಪತ್ತೆಯಾದ ಸೋಂಕಿತರು ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 129ಕ್ಕೆ ಏರಿಕೆಯಾಗಿದೆ. ಬುಧವಾರ 5 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಚಿಕ್ಕಮಗಳೂರು ನೆಹರು ನಗರದ 58 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದವರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಇದುವರೆಗೂ 14,249 ಮಂದಿಗೆ ಸೋಂಕು ತಗುಲಿದ್ದು, 13,974 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಎರಡನೇ ಅಲೆ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಸೋಂಕಿಗೆ ಇಬ್ಬರು ಬಲಿಯಾಗಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಚಿಕ್ಕಮಗಳೂರು ನಗರದ ಬಸವನಹಳ್ಳಿ ಬಾಲಿಕ ಪ್ರೌಢಶಾಲೆಯ ವಿದ್ಯಾರ್ಥಿನಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಬಳಿಕ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಲ್ಲಿ ಆತಂಕ ಮೂಡಿಸಿದ ಹಿನ್ನೆಲೆಯಲ್ಲಿ ಬುಧವಾರ ಶಾಲೆಗೆ ಹಾಜರಾಗಿದ್ದ 284 ವಿದ್ಯಾರ್ಥಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಯಿತು. ಪ್ರೌಢಶಾಲೆ ವಿಭಾಗದ ಉಪ ಪ್ರಾಂಶುಪಾಲೆ ಚಂದ್ರಮ್ಮ ಮಾತನಾಡಿ, ಶಾಲೆಯಲ್ಲಿ 419 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 380 ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುತ್ತಿದ್ದಾರೆ. ಆರೋಗ್ಯ ಸರಿಯಿಲ್ಲದ ವಿದ್ಯಾರ್ಥಿಗಳಿಗೆ ಶಾಲೆಗೆ ಬರದಂತೆ ಮೊದಲೇ ತಿಳಿಸಲಾಗಿದೆ. 10ನೇ ತರಗತಿ ವಿದ್ಯಾರ್ಥಿಯಲ್ಲಿ ಸೋಂಕು ಪತ್ತೆಯಾಗಿದ್ದು, ವಿದ್ಯಾರ್ಥಿನಿ ಹಾಸ್ಟೆಲ್‌ನಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು. ಮೂರು ದಿನಗಳಿಂದ ಆಕೆ ಶಾಲೆಗೆ ಬಂದಿಲ್ಲ, ಮಂಗಳವಾರ ಆಕೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಪೋಷಕರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾ ಧಿಕಾರಿಗಳ ಗಮನಕ್ಕೆ ತರಲಾಯಿತು ಎಂದರು. ಕ್ಷೇತ್ರ ಶಿಕ್ಷಣಾಧಿ ಕಾರಿಗಳು ಆರೋಗ್ಯ ಇಲಾಖೆ ಗಮನಕ್ಕೆ ತಂದಿದ್ದು, 419 ವಿದ್ಯಾರ್ಥಿಗಳಲ್ಲಿ ಬುಧವಾರ ಹಾಜರಾದ 284 ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆಯಿಂದ ಕೊರೊನಾ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದರು.