ಎನ್.ಆರ್.ಪುರ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದಿನಬಳಕೆ ವಸ್ತುಗಳು, ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್
ಬೆಲೆ ನಿರಂತರವಾಗಿ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಬದುಕು ದುಸ್ತರವಾಗಿಸಿದೆ. ಹಾಗಾಗಿ, ದೇಶ ದಿವಾಳಿಯತ್ತ ಸಾಗುತ್ತಿದೆ
ಎಂದು ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದರು.
ತಾಲೂಕು ಕಾಂಗ್ರೆಸ್ ಘಟಕ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ಜಾತಿ,ಜಾತಿಗಳ ನಡುವೆ, ಧರ್ಮ, ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಅಧಿಕಾರಕ್ಕೆ ಬಂದ ಬಿಜೆಪಿಯವರು, ಅನ್ನ ಕೊಡುವ ರೈತ ನೆಮ್ಮದಿಯಿಂದ ಇರದ ಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಬಿಜೆಪಿ ಬೆಲೆ ಏರಿಕೆ ತಡೆಗಟ್ಟಿ ಜನರ ಬದುಕು ರೂಪಿಸುವ ಕೆಲಸ ಮಾಡದೆ ಜನರ ಬದುಕು ನಾಶ ಮಾಡುವ ಕೆಲಸ ಮಾಡುತ್ತಿದೆ ಎಂದರು.
ಕೊಪ್ಪ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಸುಧೀರ್‌ಕುಮಾರ್ ಮೂರೂಳ್ಳಿ, ಕೆಪಿಸಿಸಿ ಸದಸ್ಯ ಶಿವಮೊಗ್ಗದ ರಮೇಶ್ ಹೆಗ್ಡೆ, ತಾಪಂ ಮಾಜಿ ಸದಸ್ಯ ಎಚ್. ಎಂ.ಮನು, ಜಿಪಂ ಸದಸ್ಯ ಪಿ.ಆ. ಸದಾಶಿವ, ರಾಜ್ಯ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚ್ಚಿನ್ ಮೀಗಾ, ಪಪಂ ಸದಸ್ಯರಾದ ಪ್ರಶಾಂತ್ ಶೆಟ್ಟಿ, ಜುಬೇದಾ, ತಾಪಂ ಸದಸ್ಯೆ ಮೀನಾಕ್ಷಿ ಕಾಂತರಾಜ್, ಜನಜಾಗೃತಿ ವೇದಿಕೆ ಅಧ್ಯಕ್ಷ ಸಿ.ಎಲ್.ಮನೋಹರ್ ಮಾತನಾಡಿದರು. ತಾಲೂಕು ಕಾಂಗ್ರೆಸ್ ಅಧ್ಯಕ್ಷ ಗೈರುಬೈಲು ನಟರಾಜ್ ಅಧ್ಯಕ್ಷತೆ ವಹಿಸಿದ್ದರು. ಈ.ಸಿ.ಜೋಯಿ, ಕೆ.ಎಂ. ಸುಂದರೇಶ್, ಭಾನುಶ್ರೀ, ಮುಕುಂದ ಇದ್ದರು.