Advertisement

ಜನರ ಅನುಕೂಲಕ್ಕಾಗಿ ಹಳ್ಳಿಕಟ್ಟೆ ಪ್ರಯಾಣ

06:06 PM Jan 25, 2021 | Team Udayavani |

ಚಿಕ್ಕಮಗಳೂರು: ಜನರು ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ “ಹಳ್ಳಿಕಟ್ಟೆ ಪ್ರಯಾಣ’ ವಿಶೇಷ ವ್ಯವಸ್ಥೆಯನ್ನು ರಾಜ್ಯದಲ್ಲಿ ತರಲಾಗುತ್ತಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದರು.

Advertisement

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರು ಇಷ್ಟು ವರ್ಷಗಳ ಕಾಲ ಜಿಲ್ಲಾಧಿಕಾರಿ ಕಚೇರಿ, ಎಸಿ ಕಚೇರಿ ಹಾಗೂ ತಹಶೀಲ್ದಾರ್‌ ಕಚೇರಿಗೆ ಚಪ್ಪಲಿ ಸವೆಸಿದ್ದು, ಇದನ್ನು ತಪ್ಪಿಸಲು ಪ್ರತೀ ತಿಂಗಳ ಮೂರನೇ ಶನಿವಾರ “ಅಧಿಕಾರಿಗಳು ಹಳ್ಳಿಗೆ ನಡೆಯಿರಿ’, “ಜಿಲ್ಲಾ ಧಿಕಾರಿ ನಿಮ್ಮ ಮನೆ ಬಾಗಿಲಿಗೆ’ ಪರಿಕಲ್ಪನೆಯಲ್ಲಿ ಹಳ್ಳಿಕಟ್ಟೆ ಪ್ರಯಾಣ ಜಾರಿಗೊಳಿಸಲಾಗುತ್ತಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಜಿಲ್ಲಾಧಿಕಾರಿ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಹಳ್ಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ಅವರ ಸಮಸ್ಯೆ ಪರಿಹರಿಸಲಿದ್ದಾರೆ ಎಂದರು.
ವೃದ್ಧಾಪ್ಯ ವೇತನ ಸೇರಿದಂತೆ ವಿವಿಧ ಪೆನ್ಶನ್‌ ಸ್ಕೀಮ್‌ಗಳಿಗೆ ಜನರು ಅರ್ಜಿ ಹಿಡಿದು ಸರ್ಕಾರಿ ಕಚೇರಿಗೆ ಅಲೆಯುವುದನ್ನು ತಪ್ಪಿಸುವ ಹಿನ್ನೆಲೆಯಲ್ಲಿ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌, ಬಿಪಿಎಲ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌ಗಳನ್ನು ಕಂದಾಯ ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ಪಡೆದು ಆದೇಶಪತ್ರವನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಲಿದ್ದಾರೆ.

ಅಂಚೆ ಇಲಾಖೆ ಹಣ ಪಾವತಿ ರದ್ದುಪಡಿಸಿ ಆರ್‌ಟಿ ಜಿಎಸ್‌ ಮೂಲಕ ನೇರ ಹಣ ಪಾವತಿಯಾಗಲಿದೆ ಎಂದರು. ಜಿಲ್ಲೆಯಲ್ಲಿ ಆಗಸ್ಟ್‌, ಸೆಪ್ಪೆಂಬರ್‌ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದ ಹಾನಿಯಾದ 19,395 ರೈತರಿಗೆ 27.27 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಮಳೆಯಿಂದ 501 ಮನೆಗಳಿಗೆ ಹಾನಿಯಾಗಿದ್ದು, 94 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದರು.

ಪ್ರವಾಹ ಪೀಡಿತ ಪ್ರದೇಶದಲ್ಲಿ ಮಳೆ ಹಾನಿಗೆ 2.79 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿ ಪಿಡಿ ಅಕೌಂಟ್‌ನಲ್ಲಿ 11.22 ಕೋಟಿ ರೂ. ಹಣ ಇದೆ ಎಂದ ಅವರು ಸ್ಮಶಾನ, ಶಾಲೆ ನಿರ್ಮಾಣಕ್ಕೆ 29 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ರೈತರ ಜೊತೆ ಸರ್ಕಾರ ಇದೆ ಎಂದ ಅವರು, ಪರಿಹಾರ ಯಾರಿಗೆ ಸಿಕ್ಕಿಲ್ಲ ಅವರ ಜಮೀನುಗಳನ್ನು ಸರ್ವೇ ಮಾಡಿ ವರದಿ ನೀಡುವಂತೆ ಕೃಷಿ ಇಲಾಖೆಗೆ ಸೂಚಿಸಲಾಗಿದೆ ಎಂದರು.

ಓದಿ: ಹಳ್ಳಿ ಜನರ ಬದುಕಿನಲ್ಲಡಗಿದೆ ಭಿನ್ನ ಸಂಸ್ಕೃತಿಗಳ ಆಚರಣೆ

Advertisement

 

Advertisement

Udayavani is now on Telegram. Click here to join our channel and stay updated with the latest news.

Next