ಚಿಕ್ಕಮಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಗ್ರಾಮೀಣ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಅಂಕ ನೀಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಒಕ್ಕೂಟ ಮತ್ತು ರಾಜ್ಯ ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಂಗಳವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಮುಖಂಡರು ಕೋವಿಡ್ ಹಿನ್ನೆಲೆಯಲ್ಲಿ ದೇಶದಲ್ಲಿ 10ನೇ ತರಗತಿ ಪರೀಕ್ಷೆಯನ್ನು ರದ್ದುಪಡಿಸಿದ್ದರೂ ಕರ್ನಾಟಕದಲ್ಲಿ ಮಾತ್ರ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಹಠಕ್ಕೆ ಬಿದ್ದು ಪರೀಕ್ಷೆ ನಡೆಸಿದ್ದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದರು.
ಕಳೆದೆರೆಡು ವರ್ಷಗಳಿಂದ ಕೋವಿಡ್ ಸೋಂಕಿನ ನಡುವೆ ಶಿಕ್ಷಣ ಇಲಾಖೆ ಮತ್ತು ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ನಡೆಸಿದರು. ಆದರೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯವಾಗಿಲ್ಲ, 2 ವರ್ಷಗಳ ಶೂನ್ಯ ಕಲಿಕೆ ವರ್ಷಗಳಾಗಿವೆ. ಡಿಜಿಟಲ್ ಮತ್ತು ದೂರದರ್ಶನ ಮೂಲಕ ನೀಡಿದ ಶಿಕ್ಷಣ ಗ್ರಾಮೀಣ ಮತ್ತು ನಗರ ಬಡ ವಿದ್ಯಾರ್ಥಿಗಳಿಗೆ ತಲುಪಿಸಲು ಸಾಧ್ಯವಾಗಲಿಲ್ಲ ಎಂದರು.
ಫಲಿತಾಂಶ ಹೊರ ಬಂದಾಗ ಫಲಿತಾಂಶದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ ನಡುವೆ ಅಂತರ ಹೆಚ್ಚಾಗುತ್ತಿದೆ. 10ನೇ ತರಗತಿ ವಿದ್ಯಾರ್ಥಿಗಳಿಗೆ ಅಸೈನ್‌ಮೆಂಟ್ ಬರೆಸಿ ಗ್ರೇಡ್‌ಗಳನ್ನು ನೀಡುವ ಮೂಲಕ ಮುಂದಿನ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುವ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ. ಜಿಲ್ಲಾ ಸಂಘಟನಾ ಸಂಚಾಲಕ ಶಿವನಿ ಮಹೇಂದ್ರಸ್ವಾಮಿ, ಕಾಂಗ್ರೆಸ್ ಮುಖಂಡ ರವೀಶ್ ಬಸಪ್ಪ, ಸಿಪಿಐ ಮುಖಂಡ ಬಿ.ಅಮ್ಜದ್, ಜಾತ್ಯತೀತ ಜನತಾದಳದ ಹುಣಸೆಮಕ್ಕಿ ಲಕ್ಷ್ಮಣ್, ರೈತಸಂಘದ ಜಿಲ್ಲಾಧ್ಯಕ್ಷ ಎಂ.ಸಿ. ಬಸವರಾಜ್, ದಸಂಸ ತಾಲೂಕು ಸಂಚಾಲಕರಾದ ರಮೇಶ್, ರಾಮಚಂದ್ರ, ರೈತಸಂಘದ ತಾಲೂಕು ಅಧ್ಯಕ್ಷ ಕೃಷ್ಣಮೂರ್ತಿ, ಮಂಜುನಾಥ, ನಾಗರಾಜ್, ಮಹಿಳಾ ಸಂಚಾಲಕಿ ಅಂತೋಣಿಯಮ್ಮ ಇದ್ದರು.