ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್ ಕ್ರಮೇಣ ಕ್ಷೀಣಿಸಿದೆ. ಕೋವಿಡ್ ಲಸಿಕೆ ಪಡೆದುಕೊಳ್ಳುವವರ ಸಂಖ್ಯೆ ಏರಿಕೆಯಾಗುತ್ತಿದೆ. ಸಮರ್ಪಕವಾಗಿ ಲಸಿಕೆ ಪೂರೈಕೆಯಾಗದ ಹಿನ್ನೆಲೆಯಲ್ಲಿ ಲಸಿಕಾ ಕೇಂದ್ರಗಳಲ್ಲಿ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ನಗರದ ಜೂನಿಯರ್ ಕಾಲೇಜಿನಲ್ಲಿ ತೆರೆಯಲಾಗಿದ್ದ ಕೋವಿಡ್ ಲಸಿಕಾ ಕೇಂದ್ರವನ್ನು ಬಂದ್ ಮಾಡಿ ಪೆಕ್ಷನ್ ಮೊಹಲ್ಲಾ ಆರೋಗ್ಯ ಕೇಂದ್ರ ಮತ್ತು ಮುನ್ಸಿಪಲ್ ಆಸ್ಪತ್ರೆಯಲ್ಲಿ ಲಸಿಕಾ ಕೇಂದ್ರವನ್ನು ತೆರೆಯಲಾಗಿದೆ.
ಮೊದಲ ಹಂತದ ಲಸಿಕೆ ಪಡೆದವರಿಗೆ 2ನೇ ಹಂತದ ಲಸಿಕೆ ಪಡೆದುಕೊಳ್ಳಲು ಮೊಬೈಲ್ ಗಳಿಗೆ ಸಂದೇಶ ಬರುತ್ತಿದ್ದು, ಮುಂಜಾನೆಯಿಂದಲೇ ಲಸಿಕೆ ಪಡೆ ದುಕೊಳ್ಳಲು ಕೇಂದ್ರಗಳಿಗೆ ಬಂದು ಸಾಲುಗಟ್ಟಿ ನಿಂತವರಿಗೆ ಇಂದು ನಿಮಗೆ ಲಸಿಕೆ ಇಲ್ಲ ನಾಳೆ ಬನ್ನಿ ಎನ್ನಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿದೆ. ಲಸಿಕೆ ಪಡೆದುಕೊಳ್ಳಲು ಸರತಿ ಸಾಲಿನಲ್ಲಿ ನಿಂತವರು ಲಸಿಕೆ ಇಲ್ಲ ಎನ್ನುತ್ತಿದ್ದಂತೆ ಕೆಲವರು ಮನೆಯ ದಾರಿ ಹಿಡಿದರೆ ಮತ್ತೆ ಕೆಲವರು ಇಂದು ಲಸಿಕೆ ಇಲ್ಲವೆಂದ ಮೇಲೆ ಯಾಕೆ ಮೊಬೈಲ್ ಸಂದೇಶಗಳನ್ನು ಕಳಿಸಲಾಗುತ್ತದೆ. ಲಸಿಕಾ ಕೇಂದ್ರಗಳ ಸಿಬ್ಬಂದಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುವ ಘಟನೆಗಳು ದಿನಂ ಪ್ರತೀ ನಡೆಯುತ್ತಿದೆ.
ಇದರಿಂದ ಪ್ರತೀ ದಿನ ಸಿಬ್ಬಂದಿ ಮತ್ತು ಲಸಿಕೆ ಪಡೆಯುವರ ಮಧ್ಯೆ ಗೊಂದಲ ಸೃಷ್ಟಿಯಾಗುತ್ತಿದೆ. ಕೋವಿಡ್ ಸೋಂಕಿನಿಂದ ರಕ್ಷಣೆ ಪಡೆದುಕೊಳ್ಳಲು ಜನರು ಲಸಿಕೆ ಪಡೆದುಕೊಳ್ಳಲು ಮುಂದಾಗುತ್ತಿದ್ದು, ಜಿಲ್ಲೆಗೆ ಬೇಡಿಕೆಗೆ ತಕ್ಕಂತೆ ಸಮರ್ಪಕವಾಗಿ ಲಸಿಕೆ ವಿತರಣೆಯಾಗದಿರುವುದು ಈ ಎಲ್ಲಾ ಗೊಂದಲಕ್ಕೆ ಕಾರಣವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಲಸಿಕೆ ವಿತರಣೆ ಪ್ರಗತಿ: ಜಿಲ್ಲೆಯಲ್ಲಿ 8,47,798 ಮಂದಿಗೆ ಲಸಿಕೆ ನೀಡುವ ಗುರಿ ಜಿಲ್ಲಾ ಆರೋಗ್ಯ ಇಲಾಖೆ ಮುಂದಿದ್ದು, 3,45,336 ಮಂದಿಗೆ ಮೊದಲ ಹಂತದ ಲಸಿಕೆ ನೀಡಲಾಗಿದ್ದು ಶೇ.40.73ರಷ್ಟು ಪ್ರಗತಿ ಸಾಧಿಸಿದೆ.
1,21,671 ಮಂದಿಗೆ 2ನೇ ಹಂತದ ಲಸಿಕೆ ನೀಡಿದ್ದು, ಶೇ.14.35ರಷ್ಟು ಲಸಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಶೇ.55.08ರಷ್ಟು ಲಸಿಕೆ ವಿತರಣೆ ಮಾಡಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ 11,200 ಗುರಿ ಹೊಂದಿದ್ದು, 10,008 ಮಂದಿಗೆ ಮೊದಲ ಹಂತದ ಲಸಿಕೆ ನೀಡಿದ್ದು, ಶೇ.89.36ರಷ್ಟು ಪ್ರಗತಿ ಸಾಧಿಸಲಾಗಿದೆ. 8,122 ಮಂದಿಗೆ 2ನೇ ಹಂತದ ಲಸಿಕೆ ನೀಡಲಾಗಿದ್ದು, ಶೇ.72.52ರಷ್ಟು ಪ್ರಗತಿ ಸಾಧಿಸಿದೆ.
ಫ್ರಂಟ್‌ಲೆçನ್ ವರ್ಕರ್ 6,633 ಗುರಿ ಹೊಂದಿದ್ದು, 7,358 ಮಂದಿಗೆ ಮೊದಲ ಹಂತದ ಲಸಿಕೆ ನೀಡಲಾಗಿದ್ದು ಶೇ.110.93 ಹಾಗೂ 5,379 ಮಂದಿಗೆ 2ನೇ ಹಂತದ ಲಸಿಕೆ ನೀಡಲಾಗಿದ್ದು, ಶೇ.79.59ರಷ್ಟು ಗುರಿ ಸಾಧನೆಯಾಗಿದೆ. 18 ವರ್ಷ ಮೇಲ್ಪಟ್ಟ 5.06,847 ಮಂದಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು, 76,037 ಮಂದಿಗೆ ಮೊದಲ ಹಂತದ ಲಸಿಕೆ ನೀಡಲಾಗಿದೆ. ಶೇ.15. ಮತ್ತು 945 ಮಂದಿಗೆ 2ನೇ ಹಂತದ ಲಸಿಕೆ ನೀಡಲಾಗಿದ್ದು, ಶೇ.0.19ರಷ್ಟು ಗುರಿ ತಲುಪಿದೆ. 45 ವರ್ಷ ಮೇಲ್ಪಟ್ಟ 2,01,012 ಮಂದಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು, 1,40,880 ಮಂದಿಗೆ ಮೊದಲ ಹಂತದ ಲಸಿಕೆ ನೀಡಲಾಗಿದೆ. ಶೇ.70.9ರಷ್ಟು ಲಸಿಕೆ ನೀಡಲಾಗಿದೆ. 79,782 ಮಂದಿಗೆ 2ನೇ ಹಂತದ ಲಸಿಕೆ ನೀಡಲಾಗಿದ್ದು, ಶೇ.24.77 ಗುರಿ ಸಾಧನೆಯಾಗಿದೆ.
60 ವರ್ಷ ಮೇಲ್ಪಟ್ಟ 1,22,108 ಮಂದಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು, 1,11,053 ಮಂದಿಗೆ ಮೊದಲ ಹಂತದ ಲಸಿಕೆ ನೀಡಿದ್ದು, ಶೇ.90.95ರಷ್ಟು ಗುರಿ ಸಾಧನೆಯಾಗಿದೆ. 57,543 ಮಂದಿಗೆ 2ನೇ ಹಂತದ ಲಸಿಕೆ ನೀಡಲಾಗಿದ್ದು, ಶೇ.47.12ರಷ್ಟು ಇದುವರೆಗೂ ಲಸಿಕೆ ನೀಡಲಾಗಿದೆ. ಜಿಲ್ಲೆಗೆ 2 ಸಾವಿರ ಲಸಿಕೆ ಪೂರೈಕೆಯಾಗುತ್ತಿದ್ದು ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಕ್ಕೆ ವಿತರಣೆ ಮಾಡಲಾಗುತ್ತಿದೆ.