ಕಡೂರು: ಕೇಂದ್ರ- ರಾಜ್ಯ ಸರಕಾರವು ತೆರಿಗೆ, ಪೆಟ್ರೋಲ್, ಅಡುಗೆ ಅನಿಲ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಬಿಜೆಪಿಯ ಈ ಜನ ವಿರೋಧಿ ನೀತಿಯನ್ನು ಖಂಡಿಸುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಆಕ್ರೋಶ ವ್ಯಕ್ತಪಡಿಸಿದರು.
ಕಡೂರು, ಬೀರೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಪಟ್ಟಣದಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಮೋದಿ ಅಧಿಕಾರಕ್ಕೆ ಬರುವ ಮುಂಚೆ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗಿದೆ ಎಂದು ಬಿಜೆಪಿಯವರು ಪ್ರತಿಭಟನೆ ಮಾಡಿದ್ದರು.
ಆದರೆ ಅ ಧಿಕಾರಕ್ಕೆ ಬಂದ ಮೋದಿ ಪೆಟ್ರೋಲ್, ಅಡುಗೆ ಅನಿಲದ ಬೆಲೆಯನ್ನು ದಾಖಲೆಯಂತೆ ಹೆಚ್ಚಿಸಿ ನೂರರ ಗಡಿ ದಾಟಿಸಿದ್ದಾರೆ ಎಂದು ಆರೋಪಿಸಿದರು. ರಾಜ್ಯ ಬಿಜೆಪಿ ಸರಕಾರ ಭ್ರಷ್ಟಚಾರದಲ್ಲಿ ತೊಡಗಿದೆ. ಇದನ್ನು ಕಾಂಗ್ರೆಸ್ ಹೇಳುತ್ತಿಲ್ಲ. ಸ್ವತಃ ಬಿಜೆಪಿಯ ಶಾಸಕ ಯತ್ನಾಳ್ ಅವರೇ ಹೇಳುತ್ತಿದ್ದಾರೆ. ದೇಶದಲ್ಲಿ ಮೂರೂವರೆ ಲಕ್ಷ ಜನರು ಕೋವಿಡ್‌ನಿಂದ ಸಾವನ್ನಪ್ಪಿದ್ದು ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರವೇ ಹೊಣೆಯಾಗಿದೆ ಎಂದು ಟೀಕಿಸಿದರು. ಎಪಿಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದಾಗ ಕೇವಲ 70 ರೂ. ಇದ್ದ ಪೆಟ್ರೋಲ್ ದರವನ್ನು ಇದೀಗ 107 ರೂ.ಗಳಿಗೆ ಹೆಚ್ಚಿಸಿದ ಸಾಧನೆ ಬಿಟ್ಟರೆ ಬೇರೆ ಏನನ್ನೂ ಸಹ ನೀಡಲಿಲ್ಲ ಎಂದು ಬಿಜೆಪಿ ಸರಕಾರದ ಕಾರ್ಯವೈಖರಿಯ ಕುರಿತು ವ್ಯಂಗ್ಯವಾಡಿದರು.
ರಾಜ್ಯ ಸಭಾ ಮಾಜಿ ಸದಸ್ಯ ಹಾಗೂ ಜಿಲ್ಲಾ ವೀಕ್ಷಕ ಜವರೇಗೌಡ ಮಾತನಾಡಿ, ದೇಶವನ್ನು ಉಳಿಸಲು ಯುವಕರು ಮುಂದೆ ಬರಬೇಕಾಗಿದೆ. ಪ್ರತಿಯೊಬ್ಬ ಯುವಕರು ಸಂಕಲ್ಪ ಮಾಡಿ ಮೋದಿ ಸರಕಾರವನ್ನು ಕಿತ್ತೂಗೆಯುತ್ತೇವೆ ಎಂದು ಪಣ ತೊಡಬೇಕಿದೆ ಎಂದರು. ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ| ಅಂಶುಮಂತ್ ಮಾತನಾಡಿ, ಜನ ಸಾಮಾನ್ಯರು ಜೀವನ ಮಾಡುವುದೇ ಕಷ್ಟಕರವಾಗಿದೆ.
ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆ ಮುಂದಿನ ದಿನಗಳನ್ನು ನೆನೆದು ಆತಂಕದಲ್ಲಿದ್ದಾರೆ. ಭ್ರಷ್ಟ ಬಿಜೆಪಿ ಸರಕಾರಕ್ಕೆ ಜನರ ಕಾಳಜಿಯೇ ಇಲ್ಲದಂತಾಗಿದೆ. ಇದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟದ ಸ್ವರೂಪವನ್ನು ಹೆಚ್ಚಿಸಲಿದ್ದೇವೆ ಎಂದರು. ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್ ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಪ್ರತಿಭಟನೆ ನಡೆಸುತ್ತಿದ್ದು 2021 ನ್ನು ಸಂಘಟನೆ ಮತ್ತು ಸಂಘರ್ಷದ ವರ್ಷವೆಂದು ಡಿಕೆಶಿ ಹೇಳಿದ್ದಾರೆ.
ಅದರಂತೆ ಸಂಘಟನೆ ಮತ್ತು ಜನ ವಿರೋಧಿ ಸರಕಾರದ ವಿರುದ್ಧ ಸಂಘರ್ಷವನ್ನು ಸಹ ಮಾಡಲಾಗುವುದು ಎಂದರು. ಪ್ರತಿಭಟನೆಯಲ್ಲಿ ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಸಂದಿ ಕಲ್ಲೇಶ್, ಜಿಪಂ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜು, ಕೆ.ಎಂ. ವಿನಾಯಕ, ಹಿರಿಯಣ್ಣ, ಪುರಸಭೆ ಸದಸ್ಯ ತೋಟದಮನೆ ಮೋಹನ್, ದಾಸಯ್ಯನಗುತ್ತಿ ಚಂದ್ರಪ್ಪ, ಪಂಚನಹಳ್ಳಿ ಪ್ರಸನ್ನ, ಗುಮ್ಮನಹಳ್ಳಿ ಅಶೋಕ್ ಮತ್ತಿತರರು ಇದ್ದರು.