ಚಿಕ್ಕಮಗಳೂರು: ಸರ್ಕಾರ ಮಹಿಳೆಯರು ಸ್ವಾವಲಂಬಿಗಳಾಗಲು ಅನೇಕ ಯೋಜನೆಗಳನ್ನು ರೂಪಿಸಿದ್ದು ಈ ಯೋಜನೆಗಳ ಸದುಪಯೋಗ ಪಡಿಸಿಕೊಂಡು ಮಹಿಳೆಯರು ಆರ್ಥಿಕವಾಗಿ ಪ್ರಗತಿ ಸಾಧಿ ಸಬೇಕೆಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ ಹೇಳಿದರು. ಗುರುವಾರ ನಗರದ ಜಿಪಂ ಸಭಾಂಗಣದಲ್ಲಿ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ ಮತ್ತು ನಿಗಮದಿಂದ ನೀಡುವ ಕಿರುಸಾಲ ಯೋಜನೆ, ವಸತಿ ಮತ್ತು ಜಮೀನು ಸೇರಿದಂತೆ ಇತರೆ ಸೌಲಭ್ಯಗಳ ಪ್ರಯೋಜನ ಪಡೆದುಕೊಂಡು ಮಹಿಳೆಯರು ಆರ್ಥಿಕವಾಗಿ ಸ್ವಾಲಂಬಿಗಳಾಗಬೇಕೆಂದು ಕಿವಿಮಾತು ಹೇಳಿದರು.
ಮಹಿಳೆಯರು ಆರ್ಥಿಕವಾಗಿ ಸಬಲರಾಗುವುದು ಸರ್ಕಾರದ ಮುಖ್ಯಧ್ಯೇಯವಾಗಿದ್ದು, ಮಹಿಳೆಯರ ಸಮಸ್ಯೆಗಳನ್ನು ಗುರುತಿಸಿ ಅಸಹಾಯಕ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಮಹಿಳೆಯರು ನಿಗಮದ ನೆರವು ಪಡೆದುಕೊಳ್ಳುವುದರ ಜೊತೆಗೆ ಬೇರೆ ಮಹಿಳೆಯರನ್ನು ಒಗ್ಗೂಡಿಸಿ ಯೋಜನೆಗಳ ಬಗ್ಗೆ ಅವರಿಗೂ ತಿಳುವಳಿಕೆ ಮೂಡಿಸಿ ಮಾದರಿಯಾಗಬೇಕು ಎಂದರು.
ಧನಶ್ರೀ ಯೋಜನೆ, ಚೇತನಸಂಸ್ಥೆ ಯೋಜನೆ, ದೇವದಾಸಿಯರ ವಿವಿಧ ಸಾಲ ಸೌಲಭ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆದ ಫಲಾನುಭವಿಗಳ ಜೊತೆ ಸಂವಾದ ನಡೆಸಿ ಸಕಾಲಕ್ಕೆ ಸಾಲ ಮರುಪಾವತಿ ಮಾಡಿದವರನ್ನು ಗುರುತಿಸಿ ಮರುಸಾಲ ಪಡೆಯುವ ಅವಕಾಶ ಕಲ್ಪಿಸಬೇಕೆಂದು ಹೇಳಿದರು. ಮಹಿಳಾ ಅಭಿವೃದ್ಧಿ ನಿಗಮ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ ಆಯೋಜಿಸುವುದರ ಜೊತೆಗೆ ಅವರು ಆರ್ಥಿಕವಾಗಿ ಸದೃಢರಾಗಿ ಇತರರಿಗೂ ಅರಿವು ಮೂಡಿಸುವಂತಾಗಬೇಕು.
ಲಿಂಗತ್ವ ಅಲ್ಪಸಂಖ್ಯಾತರು ಯೋಜನೆಗಳಡಿ ಸ್ವಯಂ ಉದ್ಯೋಗ ಕೌಶಲ್ಯ ತರಬೇತಿ ಪಡೆದುಕೊಂಡು ಸಮಾಜದಲ್ಲಿ ಗೌರವಾನ್ವಿತ ಜೀವನ ನಡೆಸಲು ನೆರವಾಗಬೇಕು. ಜಿಲ್ಲೆಯಲ್ಲಿ ಮಹಿಳೆಯರಿಗೆ ಉದ್ಯೋಗ ಸೃಷ್ಟಿಸುವ ಘಟಕಗಳು ಸ್ಥಾಪನೆಯಾಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಿ. ಮಲ್ಲಿಕಾರ್ಜುನ್ ಮಾತನಾಡಿ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಉದ್ಯೋಗಿನಿ, ಕಿರು ಸಾಲ, ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ, ಚೇತನ, ಮಹಿಳಾ ತರಬೇತಿ, ಸಮೃದ್ಧಿ, ಧನಶ್ರೀ ಯೋಜನೆಗಳ ಸದುಪಯೋಗ ಪಡೆದುಕೊಂಡು ಸ್ವ- ಉದ್ಯೋಗ ಪ್ರಾರಂಭಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಉದ್ಯೋಗಿನಿ ಯೋಜನೆಯಡಿ ಕಿರುಸಾಲ ಸೌಲಭ್ಯ ಪಡೆದುಕೊಂಡ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಎಸ್. ಪೂವಿತಾ, ಸಿಡಿಪಿ ಕೃಷ್ಣಪ್ಪ, ಧನಂಜಯ, ಲೀಡ್‌ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್ ಉದ್ಯೋಗ ತರಬೇತಿ ಕೇಂದ್ರದ ಪ್ರತಿನಿಧಿಗಳು, ಆಶೋದಯ, ಮಡಿಲು ಸಂಸ್ಥೆಯ ಪ್ರತಿನಿಧಿಗಳು, ವಿವಿಧ ಇಲಾಖೆ ಸಿಬ್ಬಂದಿ ಇದ್ದರು.