ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ಇಳಿಮುಖವಾಗಿದ್ದು, ಸರ್ಕಾರ ಈಗಾಗಲೇ ಅನ್‌ಲಾಕ್ ಘೋಷಣೆ ಮಾಡಿದೆ. ಸೋಮವಾರದಿಂದ (ಜೂ.28) ಜಿಲ್ಲೆ ಸಂಪೂರ್ಣ ಅನ್‌ಲಾಕ್ ಆಗಲಿದೆ. ಲಾಕ್‌ಡೌನ್ ನಿಂದ ಕಾರ್ಯಚಟುವಟಿಕೆ ಇಲ್ಲದೇ ಬೇಸತ್ತು ಕುಳಿತಿದ್ದ ಜನರಲ್ಲಿ ಮುಖದಲ್ಲಿ ಮಂದಹಾಸ ಮೂಡಿಸಿದ್ದು, ಜನರು ಎಚ್ಚರ ತಪ್ಪಿದ್ದರೆ ಸೋಂಕು ಮತ್ತೆ ಉಲ್ಬಣಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ.
ಕೊರೊನಾ ಪಾಸಿಟಿವಿಟಿ ರೇಟ್‌ನಲ್ಲಿ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನವನ್ನು ಪಡೆದುಕೊಂಡು ಇಡೀ ರಾಜ್ಯದ ಗಮನ ಸೆಳೆದಿತ್ತು. ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿದ್ದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್ ಜಿಲ್ಲೆಗೆ ಭೇಟಿ ನೀಡಿ ಕೊರೊನಾ ಸೆಂಟರ್‌ಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಅಧಿಕಾರಿಗಳ ಸಭೆ ನಡೆಸಿ ಸೋಂಕು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಜಿಲ್ಲಾಡಳಿತ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳಿಂದ ಸದ್ಯ ಜಿಲ್ಲೆಯಲ್ಲಿ ಸೋಂಕು ಇಳಿಮುಖಗೊಂಡು ರಾಜ್ಯ ಸರ್ಕಾರ ಜು.5ರ ವರೆಗೂ ಅನ್‌ಲಾಕ್ ಘೋಷಣೆ ಮಾಡಿದೆ. ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯ ಕರ್ಫ್ಯೂಗಳಿಗೆ ಮಾತ್ರ ಜಿಲ್ಲೆಯನ್ನು ಸೀಮಿತಗೊಳಿಸಲಾಗಿದೆ. ಕಳೆದ ಮೂರು ತಿಂಗಳಿಂದ ಜಿಲ್ಲೆಯಲ್ಲಿ ಸ್ತಬ್ಧವಾಗಿದ್ದ ಎಲ್ಲಾ ಚಟುವಟಿಕೆಗಳು ಪುನರ್ ಆರಂಭಗೊಳ್ಳಲಿದೆ.
ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಕೆಲವೊಂದು ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಚಟುವಟಿಕೆಗಳು ಆರಂಭಗೊಳ್ಳಲಿವೆ. ಜನರು ಮತ್ತೆ ಸಹಜ ಸ್ಥಿತಿಗೆ ಮರಳಲಿದ್ದಾರೆ. ಜನರ ಜೀವನ ಶೈಲಿ ಸಹಜ ಸ್ಥಿತಿಗೆ ಮರಳುವುದರಿಂದ ಗ್ರಾಮೀಣ ಪ್ರದೇಶ ಸೇರಿದಂತೆ ನಗರ ಪ್ರದೇಶಗಳಲ್ಲೂ ಜನಸಂಚಾರ, ವಾಹನ ಸಂಚಾರ, ವ್ಯಾಪಾರ- ವಹಿವಾಟು ಸೇರಿದಂತೆ ಇತರೆ ಚಟುವಟಿಕೆಗಳು ಹೆಚ್ಚಳಗೊಳ್ಳಲಿವೆ. ಇದರಿಂದ ಜಿಲ್ಲೆ ಸಹಜ ಸ್ಥಿತಿಯತ್ತ ಮರಳಿದರೂ ಜನರು ಎಚ್ಚರ ತಪ್ಪಿದರೆ ಮತ್ತೆ ಸಮಸ್ಯೆ ಕಟ್ಟಿಟ್ಟ ಬುತ್ತಿಯಾಗಿದೆ. ಜಿಲ್ಲೆಯಲ್ಲಿ ಸ್ವತ್ಛಂದವಾಗಿ ಜೀವನ ನಡೆಸುತ್ತಿದ್ದ ಜನರನ್ನು ಕಳೆದ 2 ವರ್ಷಗಳಿಂದ ಕಣ್ಣಿಗೆ ಕಾಣದ ಕೊರೊನಾ ಬದುಕನ್ನು ಹಿಂಡಿ ಹಿಪ್ಪೆ ಮಾಡಿದೆ. ಜಿಲ್ಲೆಯಲ್ಲಿ ಸಾಕಷ್ಟು ಸಾವು- ನೋವುಗಳು ಸಂಭವಿಸಿವೆ. ಕುಟುಂಬಗಳ ಆಧಾರಸ್ತಂಭಗಳನ್ನೇ ಕಳೆದುಕೊಂಡಿದ್ದಾರೆ.
ಜನರು ಆರ್ಥಿಕವಾಗಿ ಜರ್ಝರಿತರಾಗಿದ್ದಾರೆ. ಉದ್ಯೋಗ ಕಳೆದುಕೊಂಡಿದ್ದಾರೆ. ಅದೆಷ್ಟೋ ಜನರು ಹೊತ್ತಿನ ಊಟಕ್ಕೂ ಪರದಾಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆಯ ನಿರಂತರ ಪರಿಶ್ರಮದಿಂದ ಸದ್ಯ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗಿದೆ. ಸೋಮವಾರದಿಂದ ಜಿಲ್ಲೆಯಲ್ಲಿ ಅನ್‌ಲಾಕ್ ನಿಯಮಗಳು ಜಾರಿಯಾಗಲಿವೆ.
ಜಿಲ್ಲೆಯಲ್ಲಿ ಸೋಂಕು ಹರಡುವಿಕೆ ಕಡಿಮೆಯಾಗಿದೆ. ಸೋಂಕು ಸಂಪೂರ್ಣ ನಾಶವಾಗಿಲ್ಲ, ಆದ್ದರಿಂದ ಅನ್‌ಲಾಕ್ ಆಗಿದೆ ಎಂದು ಜನರು ಮೈಮರೆಯಬಾರದು. ಜನಜಂಗುಳಿ ಸೇರಬಾರದು. ಸರ್ಕಾರ ರೂಪಿಸಿರುವ ನಿಯಮಗಳನ್ನು ಕಟ್ಟುನಿಟ್ಟಾ ಗಿ ಪಾಲಿಸಬೇಕೆಂದು ಜಿಲ್ಲಾ ಆರೋಗ್ಯ ಇಲಾಖೆಯ ತಜ್ಞ ವೈದ್ಯರು ಜನರಲ್ಲಿ ಮನವಿ ಮಾಡಿದ್ದಾರೆ.