ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಲಾಕ್‌ಡೌನ್ ನಿಯಮಗಳನ್ನು ಸಡಿಲಿಸಿ ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ವ್ಯಾಪಾರ- ವಹಿವಾಟು ನಡೆಸಲು ಅವಕಾಶ ನೀಡಿ ಜಿಲ್ಲಾ ಧಿಕಾರಿ ಕೆ.ಎನ್. ರಮೇಶ್ ಆದೇಶ ಹೊರಡಿಸಿದ್ದಾರೆ.
ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಆದೇಶವು ಜೂ.28ರಿಂದ ಜು.5ರ ವರೆಗೆ ಜಾರಿಯಲ್ಲಿದ್ದು ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುತ್ತದೆ. ಕೈಗಾರಿಕೆ ಮತ್ತು ಉತ್ಪಾದನಾ ಘಟಕಗಳು ಶೇ.50ರಷ್ಟು ಸಿಬ್ಬಂದಿಗಳನ್ನು ಬಳಸಿಕೊಂಡು ಕಾರ್ಯ ನಿರ್ವಹಿಸಬಹುದಾಗಿದೆ. ಜಿಲ್ಲೆಯಲ್ಲಿನ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಎಲ್ಲಾ ಅಂಗಡಿ- ಮುಂಗಟ್ಟುಗಳು ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ತೆರೆಯಲು ಅವಕಾಶ ನೀಡಲಾಗಿದೆ.
ಆದರೆ ಹವಾ ನಿಯಂತ್ರಿತ ಶಾಪ್ ಗಳು, ಮಾಲ್‌ಗಳು ಕಾರ್ಯ ನಿರ್ವಹಿಸುವುದನ್ನು ನಿರ್ಬಂ ಧಿಸಲಾಗಿದೆ ಎಂದು ತಿಳಿಸಿದ್ದಾರೆ. ಸಾರ್ವಜನಿಕರು ವಿನಾಕಾರಣ ಮನೆಯಿಂದ ಹೊರಬರುವುದನ್ನು ತಪ್ಪಿಸಲು ದಿನದ 24 ಗಂಟೆಯೂ ಹೋಮ್ ಡೆಲಿವರಿಗೆ ಅವಕಾಶ ನೀಡಲಾಗಿದೆ. ಹೊಟೇಲ್, ರೆಸ್ಟೋರೆಂಟ್ ಬಾರ್, ಕ್ಲಬ್‌ಗಳು ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಕಾರ್ಯ ನಿರ್ವಹಿಸಲು ಅವಕಾಶ ನೀಡಿದ್ದು ಶೇ.50ರಷ್ಟು ಸಾಮರ್ಥ್ಯದಷ್ಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಕುಳಿತು ಆಹಾರ, ಪಾನೀಯಗಳ ಸೇವನೆಯನ್ನು ನಿರ್ಬಂಧಿ ಸಲಾಗಿದೆ ಎಂದು ಹೇಳಿದ್ದಾರೆ.
ಲಾಡ್ಜ್, ರೆಸಾರ್ಟ್‌ಗಳಲ್ಲಿ ಶೇ.50ರಷ್ಟು ಬಳಕೆಗೆ ಅವಕಾಶವಿದೆ. ಎಲ್ಲಾ ರೀತಿಯ ಕಾಮಗಾರಿ ನಡೆಸಲು ಅನುಮತಿಸಲಾಗಿದೆ. ನಿರ್ಮಾಣ ಕಾಮಗಾರಿ ಸಲಕರಣೆಗಳಿಗೆ ಸಂಬಂಧಿಸಿದ ಅಂಗಡಿ- ಮುಂಗಟ್ಟುಗಳಲ್ಲಿ ವ್ಯವಹಾರ ನಡೆಸಬಹು ದಾಗಿದೆ. ಬೆಳಗ್ಗೆ 5 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ವಾಯು ವಿಹಾರ ಉದ್ದೇಶಕ್ಕಾಗಿ ಉದ್ಯಾನವನಗಳನ್ನು ತೆರೆಯಲು ಅವಕಾಶ ನೀಡಿದ್ದು, ಗುಂಪು ಚಟುವಟಿಕೆಗಳನ್ನು ನಿರ್ಬಂ ಧಿಸಲಾಗಿದೆ. ಹವಾ ನಿಯಂತ್ರಿತವಲ್ಲದ ವ್ಯಾಯಾಮ ಶಾಲೆಗಳಲ್ಲಿ ಶೇ.50ರಷ್ಟು ಬಳಕೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಟ್ಯಾಕ್ಸಿ ಮತ್ತು ಆಟೋರಿûಾಗಳು ಗರಿಷ್ಟ ಎರಡು ಪ್ರಯಾಣಿಕರಿಗೆ ಸೀಮಿತಗೊಳಿಸಿ ಕಾರ್ಯ ನಿರ್ವಹಿಸಲು ಅನುಮತಿಸಿದೆ. ಅದರೊಂದಿಗೆ ಎಲ್ಲ ಹೊರಾಂಗಣ ಕ್ರೀಡಾ ಚಟುವಟಿಕೆಗಳನ್ನು ಪ್ರೇಕ್ಷಕರು ಹೊಂದಿಲ್ಲದಂತೆ ನಿಯಮಾನುಸಾರ ನಡೆಸಬಹುದಾಗಿದೆ. ಎಲ್ಲಾ ರೀತಿಯ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಶೇ.50 ಸಿಬ್ಬಂದಿಗಳನ್ನು ಒಳಗೊಂಡು ಕಾರ್ಯ ನಿರ್ವಹಿಸಬಹುದಾಗಿದೆ ಎಂದು ಹೇಳಿದ್ದಾರೆ.
ರಾತ್ರಿ ಕರ್ಫ್ಯೂ ವೇಳೆಯಲ್ಲಿ ರಾತ್ರಿ 7 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ಅಗತ್ಯ ಚಟುವಟಿಕೆ ಹೊರತುಪಡಿಸಿ ಸಾರ್ವಜನಿಕರ ಸಂಚಾರವನ್ನು ಕಟ್ಟುನಿಟ್ಟಾಗಿ ನಿರ್ಬಂಧಿ ಸಲಾಗಿದೆ. ರಾತ್ರಿ ವೇಳೆ ಕಾರ್ಯ ನಿರ್ವಹಿಸುವ ಕೈಗಾರಿಕೆಗಳು, ಕಂಪೆನಿಗಳು, ಸಂಸ್ಥೆಗಳು ಕಾರ್ಯ ನಿರ್ವಹಿಸಲು ಅನುಮತಿಸಲಾಗಿದೆ ಎಂದು ತಿಳಿಸಿದ್ದಾರೆ.