Advertisement

ಸಚಿವರೆದುರೇ ಅಧಿಕಾರಿಗಳ ವಾಗ್ವಾದ

10:17 PM Jun 24, 2021 | Team Udayavani |

ಚಿಕ್ಕಮಗಳೂರು: ಕಡೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂದರ್ಭದಲ್ಲಿ 916 ಮೀ. ನಗರ ನೀರು ಸರಬರಾಜು ಮತ್ತು ಒಳಚರಂಡಿ ಹಾಗೂ ಅಮೃತ್‌ ಯೋಜನೆಗೆ ಅಳವಡಿಸಿದ್ದ ಪೈಪ್‌ಗ್ಳು ಒಡೆದು ಹೋಗಿದ್ದು, ಅದನ್ನು ಸರಿಪಡಿಸುವ ವಿಚಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಮತ್ತು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಿರಿಯ ಅಧಿ ಕಾರಿಗಳು ಹಾಗೂ ಜನಪ್ರತಿನಿ ಧಿಗಳ ಎದುರೇ ವಾದ-ವಿವಾದ ನಡೆಸಿದರು.

Advertisement

ಬುಧವಾರ ನಗರದ ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಅಂಗಾರ ಅಧ್ಯಕ್ಷತೆಯಲ್ಲಿ ಒಳಚರಂಡಿ, ಅಮೃತ್‌ ಕುಡಿಯುವ ನೀರು ಯೋಜನೆ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಾಗೂ ಎಐಟಿ ರಸ್ತೆ ಅಭಿವೃದ್ಧಿ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಿರಿಯ ಅಧಿ ಕಾರಿಗಳು ಆರೋಪ ಪ್ರತ್ಯಾರೋಪ ನಡೆಸಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂದರ್ಭದಲ್ಲಿ 916 ಮೀ. ನಷ್ಟು ಕೆಎಂಆರ್‌ಪಿ ಮತ್ತು ಅಮೃತ್‌ ಯೋಜನೆಯಿಂದ ಅಳವಡಿಸಿದ್ದ ಪೈಪ್‌ಗ್ಳನ್ನು ಒಡೆದು ಹಾಕಲಾಗಿದೆ. ಗುತ್ತಿಗೆದಾರರು ಡ್ಯಾಮೇಜ್‌ಗೂ ತಮ್ಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ರಸ್ತೆಯ ನಿರ್ಮಾಣ ಅಂದಾಜು ಪಟ್ಟಿಯಲ್ಲಿ ಡ್ಯಾಮೇಜ್‌ ಭರಿಸಬೇಕೆಂದು ಇಲ್ಲ ಎನ್ನುತ್ತಾರೆ. ಯಾಕೆ ಸೇರಿಸಿಲ್ಲ ಎಂದು ಪ್ರಶ್ನಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿ  ಕಾರಿ ಸದಾನಂದ್‌ ಬಾಬು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಪಟ್ಟ ಜಾಗದಲ್ಲಿ ಇಲಾಖೆ ಅನುಮತಿ ಇಲ್ಲದೇ ಪೈಪ್‌ಗ್ಳನ್ನು ಅಳವಡಿಸಲಾಗಿದೆ. ಪೈಪ್‌ಗ್ಳನ್ನು 1.6ಮೀ. ಭೂಮಿಯ ಕೆಳಭಾಗದಲ್ಲಿ ಹಾಕಬೇಕೆಂಬ ನಿಯಮವಿದ್ದರು ಸಹ ಮೇಲ್ಭಾಗದಲ್ಲಿ ಪೈಪ್‌ಗ್ಳನ್ನು ಅಳವಡಿಸಿದ್ದಾರೆ.

ಪೈಪ್‌ಗ್ಳನ್ನು ತೆರವುಗೊಳಿಸುವಂತೆ 2-3 ಬಾರಿ ಪತ್ರ ವ್ಯವಹಾರ ನಡೆಸಿದರು ಪ್ರತಿಕ್ರಿಯಿಸಿಲ್ಲ, ಮೂರು ತಿಂಗಳು ಕಳೆದರು ಅಂದಾಜು ಪಟ್ಟಿ ಸಲ್ಲಿಸುವುದಿಲ್ಲ. ಶಿಫ್ಟ್‌ ಮಾಡಲು ಎಸ್ಟಿಮೇಟ್‌ ಕೊಟ್ಟರೆ ಒಂದು ವರ್ಷ ತಗೆದುಕೊಳ್ಳುತ್ತಾರೆ ಎಂದು ನಗರದ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ಹಿರಿಯ ಅಧಿ ಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ ಮಾತನಾಡಿ, ಪೈಪ್‌ ಡ್ಯಾಮೇಜ್‌ನಿಂದ 20 ಲಕ್ಷ ರೂ. ನಷ್ಟವಾಗಿದ್ದು, ಈ ಸಮಸ್ಯೆ ಬೇಗ ಪರಿಹಾರವಾಗಬೇಕು. ಪ್ಲಾನಿಂಗ್‌ನಂತೆ ಏಕೆ ಪೈಪ್‌ಗ್ಳನ್ನು 1.6ಮೀ. ಆಳಕ್ಕೆ ಜೋಡಿಸಿಲ್ಲ ಎಂದು ನಗರದ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ಹಿರಿಯ ಅ ಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಮಾತನಾಡಿ, ಎರಡು ಕಡೆ ತಪ್ಪಾಗಿರುವುದು ನನ್ನ ಗಮನಕ್ಕೆ ಬಂದಿದೆ. ಈ ಸಮಸ್ಯೆಯನ್ನು ನನ್ನ ಗಮನಕ್ಕೆ ಮುಂಚೆಯೇ ತರಲಿಲ್ಲ. ಎರಡು ಇಲಾಖೆಗಳ ಸಂವಹನ ಸಂಪರ್ಕ ಕೊರತೆಯಿಂದ ಸಾರ್ವಜನಿಕರ ಆಸ್ತಿ ನಷ್ಟವಾಗಿದೆ. ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವಂತೆ ಆಗಬಾರದು. ಈ ಸಮಸ್ಯೆಯಿಂದ ಯೋಜನೆಗೆ ಸಮಸ್ಯೆಯಾಗಬಾರದು ಎಂದರು.

ಶಾಸಕ ಸಿ.ಟಿ.ರವಿ ಮಾತನಾಡಿ, 2ಕಿ.ಮೀ. ಪೈಪ್‌ ಲೈನ್‌ ಡ್ಯಾಮೇಜ್‌ ಆಗಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪೈಪ್‌ಗ್ಳನ್ನು ಕೊಡಿಸಬೇಕು. ನಗರದ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿಯಿಂದ ಪೈಪ್‌ಗ್ಳನ್ನು ಅಳವಡಿಸಬೇಕೆಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ ಮಾತನಾಡಿ, ಕೆಲಸವಿಲ್ಲದೆ ನಾವು ಸಭೆಯಲ್ಲಿ ಬಂದು ಕುಳಿತ್ತಿಲ್ಲ. ಎರಡೂ ಇಲಾಖೆಯವರು ಕುಳಿತು ಚರ್ಚಿಸಿ ಸಮಸ್ಯೆ ಇತ್ಯರ್ಥಪಡಿಸಿಕೊಂಡು ಯೋಜನೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ನನಗೆ ಏನು ಮಾಡಬೇಕೆಂದು ಗೊತ್ತು ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಅಮೃತ್‌ ಕುಡಿಯುವ ನೀರು ಯೋಜನೆ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾಗಿದೆ.

23 ವಲಯಗಳಲ್ಲೂ ಅರ್ಧಂಬರ್ಧ ಕೆಲಸ ಮಾಡಿದ್ದಾರೆ. ಪ್ರತಿ ವಲಯದಲ್ಲಿ ನೂರಕ್ಕೆ ನೂರರಷ್ಟು ಕಾಮಗಾರಿ ಪೂರ್ಣಗೊಳಿಸಲು ಏನು ಸಮಸ್ಯೆ? ಶೀಘ್ರದಲ್ಲೇ ಪೂರ್ಣಗೊಳಿಸಬೇಕೆಂದರು. ಜಿಲ್ಲಾ ಧಿಕಾರಿ ಕೆ.ಎನ್‌.ರಮೇಶ್‌ ಮಾತನಾಡಿ, 35ವಾರ್ಡ್‌ಗಳಲ್ಲಿ 23 ವಲಯಗಳನ್ನು ಮಾಡಲಾಗಿದ್ದು, ಪ್ರತಿ ವಾರ ಗುರಿ ನಿಗದಿಪಡಿಸಿಕೊಂಡು 4ವಲಯಗಳ ಕಾಮಗಾರಿ ಮುಗಿಸಬೇಕು.

ಕಾಮಗಾರಿಗೆ ಚುರುಕು ಮುಟ್ಟಿಸಬೇಕು. ಆಗಸ್ಟ್‌ ಅಂತ್ಯದೊಳಗೆ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next