ಬಾಳೆಹೊನ್ನೂರು: ಜೀವವೈವಿಧ್ಯ ನಿರ್ವಹಣಾ ಸಮಿತಿ ವ್ಯಾಪ್ತಿಯಲ್ಲಿ ಜೀವವೈವಿಧ್ಯ, ಪಾರಂಪರಿಕ ತಾಣ, ನೀರಿನ ಮೂಲ ಸೇರಿದಂತೆ ಹಲವಾರು ವಿಷಯಗಳ ಕುರಿತು ಗ್ರಾಪಂ ಮಟ್ಟದಲ್ಲಿ ಸಭೆ ನಡೆಸಿ ನಿರ್ಣಯ ಕೈಗೊಂಡು ಅನುಷ್ಠಾನಗೊಳಿಸುವ ಬಗ್ಗೆ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ತಿಳಿಸಿದರು.
ಬಿ. ಕಣಬೂರು ಗ್ರಾಪಂ ಸಭಾಗಂಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಜು. 15 ರಿಂದ ಆ. 15 ರ ವರೆಗೆ ಜೀವವೈವಿಧ್ಯ ದಿನಾಚರಣೆ ಅಭಿಯಾನ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು. ಮಂಡಳಿಯ ಸದಸ್ಯೆ ಐಶ್ವರ್ಯ ಮಾತನಾಡಿ, ರಾಜ್ಯಾದ್ಯಂತ ಸುಮಾರು 6000ಕ್ಕೂ ಹೆಚ್ಚು ಗ್ರಾಪಂಗಳಲ್ಲಿ ಜೀವವೈವಿಧ್ಯ ಸಮಿತಿ ರಚನೆ ಬಗ್ಗೆ ಮಾಹಿತಿಯೇ ಇಲ್ಲ, ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು, ಪರಿಸರಾಸಕ್ತರ ಸಹಕಾರದೊಂದಿಗೆ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಪಶ್ಚಿಮಘಟ್ಟ ಕಾರ್ಯಪಡೆಯ ಸದಸ್ಯ ಗಜೇಂದ್ರ ಗೊರಸುಕುಡಿಗೆ ಮಾತನಾಡಿ, ಮೇರುತಿ ಪರ್ವತವನ್ನು ಪಾರಂಪರಿಕ ತಾಣ ಎಂದು ಘೋಷಣೆ ಮಾಡಬೇಕು ಎಂದರು. ಮೂಲ ಆದಿವಾಸಿ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎನ್.ವಿಠಲ್ ಮಾತನಾಡಿ, ಮೂಲ ವಾಸಿಗಳಿಗೆ ತೊಂದರೆಯಾಗದಂತೆ ಸಂರಕ್ಷಣೆ ಮಾಡಬೇಕೆಂದು ತಿಳಿಸಿದರು.
ಯಜ್ಞಪುರುಷ ಭಟ್ ಮಾತನಾಡಿ, ಕಳೆದ 25 ವರ್ಷಗಳ ಹಿಂದೆ ಕೆರೆ ಒತ್ತುವರಿ ಮಾಡದಂತೆ ಒತ್ತುವರಿದಾರರಿಂದ ಅ ಧಿಕಾರಿಗಳು ಮುಚ್ಚಳಿಕೆ ಬರೆಸಿಕೊಂಡಿದ್ದರೂ ಸಹ ಕಿರು ಅರಣ್ಯ ಹಾಗೂ ಕೆರೆ ಹೋಗುವ ದಾರಿಗೆ ಗೇಟ್ ಅಳವಡಿಸಿದ್ದು, ಇದುವರೆಗೂ ತೆರವುಗೊಳಿಸದೇ ಇರುವುದು ಅ ಧಿಕಾರಿಗಳ ಕರ್ತವ್ಯ ಲೋಪಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಬಿ. ಕಣಬೂರು ಗ್ರಾಪಂ ಅಧ್ಯಕ್ಷೆ ಅಂಬುಜಾ, ಉಪಾಧ್ಯಕ್ಷ ಎಂ.ಜೆ. ಮಹೇಶಾಚಾರ್, ತಾಪಂ ಕಾರ್ಯ ನಿರ್ವಹಣಾಧಿ ಕಾರಿ ನಯನಾ, ಎಸಿಎಫ್ ಮಂಜುನಾಥ್, ಬನ್ನೂರು ಗ್ರಾಪಂ ಅಧ್ಯಕ್ಷೆ ಮಧುರಾ, ಗೋಪಾಲ್ ಮತ್ತಿತರರು ಇದ್ದರು.