ಚಿಕ್ಕಮಗಳೂರು: ಜಿಲ್ಲಾದ್ಯಂತ ಕಳೆದೊಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಮಲೆನಾಡು ಈಗ ಮಳೆನಾಡಾಗಿ ಪರಿವರ್ತನೆಯಾಗಿದೆ. ಮಳೆಗಾಲದಲ್ಲಿ ಮಲೆನಾಡು ನೋಡುವುದೇ ಒಂದು ಹಿತಕರ ಅನುಭವ. ಹಚ್ಚ ಹಸಿರಿನ ಗಿರಿ ಪರ್ವತ ಶ್ರೇಣಿ. ಅಂಕುಡೊಂಕಿನ ರಸ್ತೆ, ಆಕಾಶದತ್ತ ನರ್ತಿಸುತ್ತ ಸಾಗುವ ಮಂಜು, ಮೈ ಬಳುಕಿಸಿ ವೈಯ್ನಾರದಿಂದ ಧುಮ್ಮಿಕ್ಕುವ ಜಲಪಾತ, ಝರಿ ತೊರೆಗಳು ಕಣ್ಮನ ಸೆಳೆಯುತ್ತಿವೆ.
ಈ ಎಲ್ಲಾ ವೈಭವಗಳು ಜಿಲ್ಲೆಯ ಮಲೆನಾಡು ಭಾಗದಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದು, ಪ್ರವಾಸಿಗರು ಪ್ರಕೃತಿಯ ವೈಭವ ಕಣ್ತುಂಬಿಕೊಳ್ಳಲು ಕೊರೊನಾ ಶಾಪವಾಗಿ ಬಿಟ್ಟಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಬರದಂತೆ ಜಿಲ್ಲಾಡಳಿತ ನಿರ್ಬಂಧ ವಿ ಧಿಸಿದ್ದು, ಮಳೆಗಾಲದ ವೈಭವ ಸವಿಯಲು ಪ್ರವಾಸಿಗರಲಿಲ್ಲದೇ ಪ್ರವಾಸಿ ಕೇಂದ್ರಗಳು ಭಣಗುಡುತ್ತಿವೆ. ಕಾನಾಡಿನಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಭರ್ಜರಿ ಮಳೆಯಾಗುತ್ತಿದೆ. ಬತ್ತಿ ಹೋಗಿದ್ದ ಹಳ್ಳಕೊಳ್ಳ, ಝರಿ, ಜಲಪಾತಗಳು ಮಳೆಯಿಂದ ಜೀವಕಳೆ ಪಡೆದುಕೊಂಡಿವೆ. ಮಾಣಿಕ್ಯಧಾರಾ, ಹೆಬ್ಬೆ ಜಲಪಾತ, ಸಿರಿಮನೆ ಜಲಪಾತ, ತೀರ್ಥಕೆರೆ ಫಾಲ್ಸ್ ಮೈದುಂಬಿ ಧುಮ್ಮಿಕ್ಕುತ್ತಿವೆ.
ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠದ ಗಿರಿಶ್ರೇಣಿ, ಪರ್ವತಗಳಲ್ಲಿ ಮಂಜು ಆವರಿಸಿದ್ದು ನೋಡುಗರನ್ನು ಮನ ಸೆಳೆಯುತ್ತಿವೆ. ಕೆಮ್ಮಣ್ಣುಗುಂಡಿ ಪರ್ವತ ಪ್ರದೇಶದಲ್ಲಿ ಚುಮು ಚುಮು ಚಳಿಯೊಂದಿಗೆ ಇಡೀ ಪರ್ವತ ಶ್ರೇಣಿಗಳು ಮಂಜಿನಿಂದ ಆವರಿಸಿವೆ. ಕಾತೋಟಗಳ ಮಧ್ಯೆ ಗಿರಿಶ್ರೇಣಿಗೆ ಸಾಗುವ ರಸ್ತೆ ಬದಿಗಳಲ್ಲಿ ಮಳೆಗಾಲದಲ್ಲಿ ಮೈದುಂಬಿ ಹರಿಯುವ ಝರಿಗಳು ಹಾಲ್ನೊರೆಯನ್ನು ಸೂಸುತ್ತಾ ವೈಯ್ನಾರದಿಂದ ಬಳುಕುತ್ತಿವೆ. ಮಳೆಗಾಲದ ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಪ್ರವಾಸಿಗರು ಈ ಸಂದರ್ಭದಲ್ಲಿ ಜಿಲ್ಲೆಗೆ ಲಗ್ಗೆ ಇಡುತ್ತಿದ್ದರು.
ಆದರೆ ಈ ವರ್ಷ ಮಹಾಮಾರಿ ಕೋವಿಡ್ ಈ ಸುಂದರ ಕ್ಷಣಗಳನ್ನು ಕಿತ್ತುಕೊಂಡು ಬಿಟ್ಟಿದೆ. ಬತ್ತಿ ಹೋಗಿದ್ದ ತುಂಗಾ, ಭದ್ರಾ, ಹೇಮಾವತಿ ನದಿಗಳು ತನ್ನೊಡಲಿನಲ್ಲಿ ಓಕುಳಿ ನೀರು ತುಂಬಿಕೊಂಡು ಆರ್ಭಟಿಸಿ ಹರಿಯುತ್ತಿದ್ದು, ಈ ನದಿಗಳ ನರ್ತನ ನೋಡುವುದಕ್ಕೆ ಒಂದು ಚಂದದ ಅನುಭವ ನೀಡುತ್ತಿವೆ. ಚಿಕ್ಕಮಗಳೂರು- ಮಂಗಳೂರು ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿಯ ಮಳೆಗಾಲದ ವೈಭವವೇ ಬೇರೆ. ಮಳೆಗಾಲದಲ್ಲಿ ಸ್ವರ್ವವೇ ಧರೆಗಿಳಿದು ಬಂದಂತೆ.
ಸುತ್ತಲೂ ಹಚ್ಚಹಸಿರಿನ ಸೊಬಗು, ಅಂಡುಕೊಂಡಿನ ರಸ್ತೆ, ಅಲ್ಲಲ್ಲಿ ಪರ್ವತ ಪ್ರದೇಶದಿಂದ ಧುಮ್ಮಿಕ್ಕುವ ಝರಿಗಳು ಇಡೀ ಪರ್ವತದ ತುಂಬ ಯಾರೋ ಹಾಲು ಚೆಲ್ಲಿದ್ದಾರಂಬ ಅನುಭವ ನೀಡುತ್ತವೆ. ಪರ್ವತ ಪ್ರದೇಶದ ತುಂಬ ಹರಡಿರುವ ಮಂಜು ಎಂಥವರನ್ನೂ ಮೂಕ ವಿಸ್ಮಿತರನ್ನಾಗಿ ಮಾಡುತ್ತದೆ. ಮಳೆಗಾಲದ ಸಂದರ್ಭದಲ್ಲಿ ಈ ದಾರಿಯಲ್ಲಿ ಸಾಗುವ ಸಾವಿರಾರು ಜನರು ತಮ್ಮ ವಾಹನ ನಿಲ್ಲಿಸಿ ಜೀವಜಲದೊಂದಿಗೆ ಒಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳದೆ ಮುಂದೆ ಸಾಗುವುದಿಲ್ಲ. ಆದರೆ, ಈ ವರ್ಷ ಪ್ರವಾಸಿಗರು ಮಳೆಗಾಲದ ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಸಾಧ್ಯವಾಗದೆ ಕೊರಗುವಂತಾಗಿದೆ.