ಶೃಂಗೇರಿ: ಕಳೆದ ಮೂರು ವರ್ಷದಲ್ಲಿ ಅತಿವೃಷ್ಟಿಯಿಂದ ತಾಲೂಕಿನಾದ್ಯಂತ ಸಾಕಷ್ಟು ಹಾನಿ ಸಂಭವಿಸಿದ್ದು, ಅಧಿಕಾರಿಗಳು ಅತಿವೃಷ್ಟಿಯಿಂದ ಉಂಟಾಗುವ ಯಾವುದೇ ಸಮಸ್ಯೆ ಎದುರಿಸಲು ಸನ್ನದ್ಧರಾಗಿರಬೇಕೆಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ತಾಪಂ ಸಭಾಂಗಣದಲ್ಲಿ ಬುಧವಾರ ಪ್ರಕೃತಿ ವಿಕೋಪದಿಂದ ಉಂಟಾಗಬಹುದಾದ ಸಮಸ್ಯೆಗಳ ಕುರಿತು ಏರ್ಪಡಿಸಿದ್ದ ಅ ಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿವೃಷ್ಟಿ ವೇಳೆ ಭೂ ಕುಸಿತ, ರಸ್ತೆ ಹಾನಿ, ಜಮೀನು, ಮನೆ ಹಾನಿ ಸಂಭವಿಸಿದಲ್ಲಿ ತುರ್ತಾಗಿ ಸಂಬಂಧಿಸಿದ ಇಲಾಖಾ ಅಧಿ ಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ಪ್ರವಾಹ ಉಂಟಾದ ಸಂದರ್ಭದಲ್ಲಿ ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಬೇಕು.
ತೊಂದರೆಗೆ ಒಳಗಾದ ಕುಟುಂಬಗಳಿಗೆ ಗಂಜಿ ಕೇಂದ್ರ ಆರಂಭಿಸಿ, ಅವರಿಗೆ ವಸತಿ ವ್ಯವಸ್ಥೆ ಮಾಡಬೇಕು.ಮೆಸ್ಕಾಂ ಇಲಾಖೆಯು ತ್ವರಿತವಾಗಿ ವಿದ್ಯುತ್‌ಗೆ ಸಂಬಂಧಿಸಿದ ಅವಘಡ ನಿವಾರಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ದಿನವಿಡೀ ಸಮಸ್ಯೆ ಎದುರಿಸಲು ಸಿದ್ಧರಿರಬೇಕು. ಮೊಬೈಲ್ ಸ್ವಿಚ್ ಆಫ್ ಮಾಡಬಾರದು. ಪ್ರವಾಹ ಸಂದರ್ಭ ಎದುರಿಸಲು ಅಗತ್ಯ ಬೋಟ್ ಮತ್ತಿತರ ಪರಿಕರ ಸನ್ನದ್ಧ ಸ್ಥಿತಿಯಲ್ಲಿಡಬೇಕು ಎಂದು ಸೂಚಿಸಿದರು.
ರೈತರಿಗೆ ತೋಟಗಾರಿಕೆ ಬೆಳೆ ಹಾನಿ ಸಂಭವಿಸಿದ ಬಗ್ಗೆ ವರದಿಯಾದಲ್ಲಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ತಾಲೂಕು ಕಚೇರಿಗೆ ಬಂದು ಅರ್ಜಿ ಸಲ್ಲಿಸಲು ರೈತರಿಗೆ ಸಾಧ್ಯವಾಗುವುದಿಲ್ಲ. ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾ ಧಿಕಾರಿಗಳು ರೈತರಿಂದ ನಷ್ಟದ ಮಾಹಿತಿ ಪಡೆದು ಪರಿಹಾರ ನೀಡಲು ಶಿಫಾರಸ್ಸು ಮಾಡಬೇಕು.
ಪರಿಹಾರದ ಮೊತ್ತ ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕೆಂದರು. ಸಭೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು, ತಹಶೀಲ್ದಾರ್ ಅಂಬುಜಾ, ತಾಪಂ ಇಒ ಜಯರಾಂ ಇತರರಿದ್ದರು.