ಚಿಕ್ಕಮಗಳೂರು: ಕೊರೊನಾ ಮಹಾಮಾರಿಯಿಂದ ದೇಶದ ಜನತೆಯನ್ನು ರಕ್ಷಿಸಲು ಕೇಂದ್ರ ಸರ್ಕಾರ ಸರ್ವಪ್ರಯತ್ನವನ್ನೂ ಸಮರೋಪಾದಿಯಲ್ಲಿ ಮಾಡುತ್ತಿದೆ ಎಂದು ಶಾಸಕ ಸಿ.ಟಿ. ರವಿ ಹೇಳಿದರು.
ಸೋಮವಾರ ನಗರದ ಲಯನ್ಸ್ ಸೇವಾಭವನದಲ್ಲಿ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಜಾನಪದ ಕಲಾವಿದರಿಗೆ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ನೀಡಿದ ಪಡಿತರ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ಕೊರೊನಾ ಸೋಂಕಿನಿಂದ ಜನರನ್ನು ರಕ್ಷಿಸುವ ನಿಟ್ಟಿನಲ್ಲಿ ಒಂದೇ ವರ್ಷದೊಳಗೆ ಎರಡು ಕೋವಿಡ್ ಲಸಿಕೆಯನ್ನು ಕಂಡು ಹಿಡಿದ ಮೊದಲ ದೇಶ ನಮ್ಮದು. ರಷ್ಯಾ ಮತ್ತು ಅಮೆರಿ ಕಾದಲ್ಲಿ ಕೇವಲ ಒಂದೇ ಲಸಿಕೆಯನ್ನು ಕಂಡು ಹಿಡಿಯಲಾಗಿದೆ. ಮೂರನೇ ಲಸಿಕೆಯನ್ನು ಕಂಡು ಹಿಡಿಯುವಲ್ಲಿ ಕೇಂದ್ರ ಸರ್ಕಾರ ದಾಪುಗಾಲು ಹಾಕಿದೆ ಎಂದು ತಿಳಿಸಿದರು.
ದೇಶದಲ್ಲಿ ಇದುವರೆಗೆ 25 ಕೋಟಿ ಜನರಿಗೆ ಕೋವಿಡ್ ಲಸಿಕೆ ಹಾಕಲಾಗಿದ್ದು, 140 ಕೋಟಿ ಜನರಿಗೂ ಲಸಿಕೆ ಹಾಕುವ ಪ್ರಯತ್ನ ನಡೆದಿದೆ. ಒಂದು ವರ್ಷದ ಹಿಂದೆ ಮಾಸ್ಕ್ ನಮಗೆ ವಿದೇಶದಿಂದ ಬರಬೇಕಿತ್ತು. ಪಿಪಿಇ ಕಿಟ್ ನ್ನು ನಾವು ಕಂಡೇ ಇರಲಿಲ್ಲ ಎಂದ ಅವರು, ಪ್ರಸ್ತುತ ಮಾಸ್ಕ್ ಮತ್ತು ಪಿಪಿಇ ಕಿಟ್‌ಗಳನ್ನು ನಾವೇ ತಯಾರಿಸಿ ವಿದೇಶಗಳಿಗೆ ರಫ್ತು ಮಾಡುತ್ತಿದ್ದೇವೆ ಎಂದು ಹೇಳಿದರು.
ಅಮೆರಿಕಾದಲ್ಲಿ ಆರೂವರೆ ಲಕ್ಷ ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. 74ಕೋಟಿ ಜನಸಂಖ್ಯೆ ಇರುವ ಯುರೋಪ್ ದೇಶಗಳಲ್ಲಿ 10 ಲಕ್ಷ ಜನ ಅಸುನೀಗಿದ್ದಾರೆ. ಆದರೆ ಕೇಂದ್ರ ಸರ್ಕಾರದ ಅವಿರತ ಪ್ರಯತ್ನದಿಂದಾಗಿ ನಮ್ಮಲ್ಲಿ ಸಾವಿನ ಸಂಖ್ಯೆ ಕಡಿಮೆ ಇದೆ. ಜಿಲ್ಲೆಯಲ್ಲೂ ಸಹ ಸಾವಿನ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇದೆ ಎಂದು ತಿಳಿಸಿದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆ ಮುಗುಳಿ ಲಕ್ಷಿ¾àದೇವಮ್ಮ ಮಾತನಾಡಿ, ಲಾಕ್‌ಡೌನ್‌ನಿಂದಾಗಿ ಕಾರ್ಯಕ್ರಮಗಳಿಲ್ಲದೆ ಸಂಕಷ್ಟದಲ್ಲಿರುವ ಜಾನಪದ ಕಲಾವಿದರಿಗೆ ಸರ್ಕಾರದಿಂದ ಹೆಚ್ಚಿನ ನೆರವು ಒದಗಿಸಿಕೊಡುವಂತೆ ಶಾಸಕರಿಗೆ ಮನವಿ ಮಾಡಿದರು. ಕರ್ನಾಟಕ ಜಾನಪದ ಪರಿಷತ್‌ನ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಷತ್‌ನ ರಾಜ್ಯಾಧ್ಯಕ್ಷ ಟಿ. ತಿಮ್ಮೇಗೌಡ ಅವರು ನೀಡಿರುವ 50 ಸಾವಿರ ರೂ. ಅನುದಾನದಿಂದ ಈ ಪಡಿತರ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಹೆಚ್ಚುವರಿ ಪಡಿತರವನ್ನು ಆಶಾಕಿರಣ ಅಂಧಮಕ್ಕಳ ಶಾಲೆಯ ಅಧ್ಯಕ್ಷ ಡಾ| ಜೆ.ಪಿ. ಕೃಷ್ಣೇಗೌಡ ಮತ್ತು ಕಲಾಸೇವಾ ಸಂಘದ ಅಧ್ಯಕ್ಷ ಕೆ. ಮೋಹನ್ ನೀಡಿದ್ದಾರೆ ಎಂದು ತಿಳಿಸಿದರು.
ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹಿರಿಗಯ್ಯ, ಜಾನಪದ ಅಕಾಡೆಮಿ ಮಾಜಿ ಸದಸ್ಯ ರಂಗಸ್ವಾಮಿ, ಹಿರಿಯ ವೀರಗಾಸೆ ಕಲಾವಿದ ಕೆ.ಸಿ. ಬಸವರಾಜಪ್ಪ, ಕಲಾವಿದೆ ಪುಷ್ಪಾ ಇದ್ದರು.