ನದಿ ದಾಟಿದರೆ ಮಾತ್ರ ಶಾಲೆಗೆ ಹೋಗೋಕೆ ಸಾಧ್ಯ. ಅಯ್ಯೋ, ಈ ಹುಡುಗ ಅದೇಕೆ ಹೀಗೆ ಹೇಳ್ತಿದ್ದಾನೆ ಅಂತ ವಿಚಿತ್ರವಾಗಿ ನೋಡ್ಬೇಡಿ. ನನ್ನೂರಿಗೆ ರಸ್ತೆ ಇಲ್ಲ ಕಂಡ್ರೀ.
Advertisement
ನಮ್ಮ ಗೋಳು ಕೇಳ್ಳೋರಿಲ್ಲ. ಭದ್ರಾನದಿಯ ಒಂದು ಮಗುಲಲ್ಲಿ ನನ್ನ ಹಳ್ಳಿ. ಇನ್ನೊಂದು ಮಗುಲಲ್ಲಿ ಮಾಗುಂಡಿ ರಸ್ತೆಯಿದೆ. ನನ್ನ ಅಪ್ಪ-ಅಮ್ಮ ದಿನಸಿ ಸಾಮಾನು ತರಬೇಕು, ಸೊಸೈಟಿಗೆ ಹೋಗ್ಬೇಕು, ಹುಷಾರಿಲ್ಲ ಆಸ್ಪತ್ರೆ ಮುಖ ನೋಡ್ಬೇಕು ಅಂದ್ರೂ ಈ ಹೊಳೆ ದಾಟಲೇ ಬೇಕು. ಈಗ ಎರಡು ವರ್ಷದ ಹಿಂದೆ ಆಗ… ನಲ್ಲಿ ಮಹಾಮಳೆ ಬಂದಿತ್ತು. ಒಂದು ವಾರ ಎಡಬಿಡದೆ ಮಳೆ ಸುರಿಯುತ್ತಲೇ ಇತ್ತು. ಅದೇ ಸಮಯಕ್ಕೆ ಸರಿಯಾಗಿ ನನ್ನ ಅಜ್ಜ ರುದ್ರಯ್ಯನಿಗೆ ಉಬ್ಬಸ ಜೋರಾಯಿತು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಅಂದ್ರೆ ರಸ್ತೆಯಿಲ್ಲ.ತೆಪ್ಪದಲ್ಲಿ ನದಿ ದಾಟೋಣ ಅಂದ್ರೆ ಪ್ರವಾಹ ಬಂದುಬಿಟ್ಟಿದೆ.
Related Articles
ನಿಮ್ಮೂರಿಗೆ ರಸ್ತೆ ಮಾಡೋಕಾಗೊಲ್ಲ ಅಂತಾರೆ. ನಂಗೆ ಈ ಕೋರ್ಟ್, ತಡೆಯಾಜ್ಞೆ ಏನೂ ಅರ್ಥವಾಗಲ್ಲ. ಒಟ್ಟಿನಲ್ಲಿ ನನ್ನೂರಿಗೆ ರಸ್ತೆ
ಇಲ್ಲ. ಬೇರೆಯ ಊರಂತೆ ನನಗೂ ರಸ್ತೆ ಬೇಕು ಅಷ್ಟೇ. ನನ್ನೂರು ಕೂವೆ ಗ್ರಾಮ ಪಂಚಾಯಿತಿಗೆ ಸೇರುತ್ತೆ. ಇಲ್ಲಿನ ಸಮಸ್ಯೆ ಬಗ್ಗೆ ಪೇಪರ್, ಟೀವಿಲಿ ಎಲ್ಲಾ ಬಂದು ಎ.ಸಿ, ತಹಶೀಲ್ದಾರ್, ಪಿಡಿಒ ಯಾರ್ಯಾರೋ ಆಫೀಸರ್‌ಗಳೆಲ್ಲಾ ಬಂದು ಹೋದ್ರು. ರಾಜಕಾರಣಿಗಳು ಈ ವರ್ಷದ ಎಲೆಕ್ಷನ್ನಿಗೆ ಬಂದ್ರೆ ಮತ್ತೆ ಮುಂದಿನ ಚುನಾವಣೆಗೇ ಬರೋದು.
Advertisement
‘ನಿಮಗೆ ರಸ್ತೆ ಮಾಡೋ ಹಾಗೇ ಇಲ್ಲ, ಕೇಸ್ ಕೋರ್ಟಲ್ಲಿ ಇದೆ, ತೂಗುಸೇತುವೆ ಮಾಡಿಕೊಡ್ತೀವಿ’ ಅಂತ ಹೇಳಿ ವರ್ಷ ವರ್ಷವೇ ಉರುಳಿತು. ಅದು ಬರೇ ಭರವಸೆಯಾಗಿ ಇವತ್ತಿಗೂ ಉಳಿದಿದೆ. ಹಾಗೀಗಂತ ಪುನಃ ಮಳೆಗಾಲ ಬರುತ್ತೆ, ಈ ಮಳೆಗಾಲದಲ್ಲೂ ನಾವೆಲ್ಲಾ ಜೀವ ಕೈಯಲ್ಲಿ ಹಿಡಿದು ನದಿಯಲ್ಲಿ ಹುಟ್ಟು ಹಾಕುತ್ತಾ ಶಾಲೆಗೆ ಹೋಗ್ಬೇಕು. ನಾನು ಶಾಲೆಗೆ ಹೋಗಲು ಪಡುವ ಕಷ್ಟ ಯಾರಿಗೂ ಅರ್ಥವಾಗಲ್ಲ. ಅಪ್ಪ ಹೇಳ್ತಾ ಇರ್ತಾರೆ, “ಚತುಷ್ಪಥ ಹೆದ್ದಾರಿ, ರೈಲ್ವೇ ಮಾರ್ಗ, ವಿಮಾನ ನಿಲ್ದಾಣ, ಕೇಬಲ್ ಕಾರು ಅದು ಇದು ಏನೇನೋ ಮಾಡೋಕೆ ಸರ್ಕಾರದ ಹತ್ತಿರ ದುಡ್ಡಿರುತ್ತೆ. ನಮ್ಮಂತಹ ಹಳ್ಳಿಗೆ ಕನಿಷ್ಠ ರಸ್ತೆನೋ, ಸೇತುವೇನೋ ಏನೋ ಒಂದು ಮಾಡೋಕೆ ಅದ್ರ ಹತ್ತಿರ ಹಣವಿರಲ್ಲ.
ನಮ್ಮೂರಲ್ಲಿ ಇರೋದು ಮೂರು ಮತ್ತೂಂದು ಓಟಾಗಿರೋದ್ರಿಂದ ಅವ್ರು ನಮ್ಕಡೆ ಗಮನಹರಿಸೊಲ್ಲ. ಬಡವರು ಅಂದ್ರೆ ಎಲ್ಲರಿಗೂ ತಾತ್ಸಾರ’ ಅಂತ. ಅದೆಲ್ಲಾ ರಾಜಕೀಯ ನಂಗೆ ಅರ್ಥವಾಗಲ್ಲ. ಆದರೆ ನನ್ನ ಫ್ರೆಂಡ್ಸ್ ಎಲ್ಲಾ ಶಾಲೆಗೆ ರಸ್ತೇಲಿ ಬರ್ತಾರೆ. ನಾನು ಮಳೆಗಾಲದಲ್ಲೂ ಜೀವ ಪಣಕ್ಕಿಟ್ಟು ಹುಟ್ಟು ಹಾಕುತ್ತಾ ತೆಪ್ಪದಲ್ಲಿ ನದಿ ದಾಟಿ ಹೋಗ್ಬೇಕು. ನಂಗೆ ಬೇರೇನೂ ಬೇಕಾಗಿಲ್ಲ. ದಯಮಾಡಿ ನಮ್ಮೂರಿಗೊಂದು ರಸ್ತೆನೋ, ನದಿ ದಾಟೋಕೆ ತೂಗು ಸೇತುವೆನೋ ಮಾಡಿಕೊಡಿ ಸ್ವಾಮಿ. ನಿಮ್ಮಂತೆಯೇ ನಾನು ಕೂಡಾ ಮನುಷ್ಯ. ನನಗೂ ಮೂಲಭೂತ ಸೌಕರ್ಯ ಪಡೆಯುವ ಹಕ್ಕಿದೆ.
*ನಾಗರಾಜ ಕೂವೆ
ಓದಿ : ಕಾಪು: ರೈತ ವಿರೋಧಿ, ಬೀಡಿ ಕಾರ್ಮಿಕ ವಿರೋಧಿ ಧೋರಣೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ