Advertisement

ಕೋಟೆನಾಡಲ್ಲಿ ಕೈಗೆಟಕುತ್ತಿದೆ ಆಕ್ಸಿಜನ್‌

10:48 PM Jun 11, 2021 | Team Udayavani |

„ತಿಪ್ಪೇಸ್ವಾಮಿ ನಾಕೀಕೆರೆ

Advertisement

ಚಿತ್ರದುರ್ಗ: ಮಹಾಮಾರಿ ಕೊರೊನಾ ಸೋಂಕಿನ ಎರಡನೇ ಅಲೆ ಇಡೀ ವಾತಾವರಣವನ್ನೇ ಉಸಿರುಗಟ್ಟಿಸಿತ್ತು. ಆದರೆ ದಿನ ಕಳೆದಂತೆ ಉಸಿರಾಟ ನಿರಾಳವಾಗುತ್ತಿದೆ. ಪರದಾಟ ಮಾಡಬೇಕಿದ್ದ ಆಕ್ಸಿಜನ್‌ ಈಗ ಸುಲಭವಾಗಿ ಸಿಗುತ್ತಿದೆ. ದಿನವೂ ಆಕ್ಸಿಜನ್‌, ಆಕ್ಸಿನೇಟೆಡ್‌ ಬೆಡ್‌, ರೆಮ್‌ಡಿಸಿವಿರ್‌ ಎಂದು ತಲೆಕೆಡಿಸಿಕೊಳ್ಳಬೇಕಾಗಿದ್ದ ಅ ಧಿಕಾರಿಗಳು ಕೊಂಚ ರಿಲ್ಯಾಕ್ಸ್‌ ಆಗಿದ್ದಾರೆ.

ಜಿಲ್ಲೆಯಲ್ಲಿ ಆಕ್ಸಿಜನ್‌ ಹಾಗೂ ಆಕ್ಸಿನೇಟೆಡ್‌ ಬೆಡ್‌ಗಳ ಬೇಡಿಕೆ ಕಡಿಮೆಯಾಗುತ್ತಿದೆ. ಸರಿಯಾಗಿ ಒಂದು ತಿಂಗಳ ಹಿಂದೆ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ. 5 ರಷ್ಟಿತ್ತು. ಇದು ರಾಜ್ಯದಲ್ಲೇ ಕೊನೆಯ ಸ್ಥಾನವಾಗಿತ್ತು. ಆದರೆ ನಂತರದ ದಿನಗಳಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿ ಪಾಸಿಟಿವಿಟಿ ದರ ಶೇ. 20ಕ್ಕೆ ತಲುಪಿತ್ತು. ಆದರೀಗ ಪಾಸಿಟಿವಿಟಿ ದರ ಇಳಕೆಯಾಗುತ್ತಿದೆ.

ದಿನವಿಡೀ ಆಸ್ಪತ್ರೆ ಬಾಗಿಲಿನಲ್ಲಿ ಜನ ಆಕ್ಸಿಜನ್‌ಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಖಾಸಗಿ ಆಸ್ಪತ್ರೆಗಳಲ್ಲೂ ಬೆಡ್‌ಗೆ ಲಾಭಿ ಮಾಡಬೇಕಾಗಿತ್ತು. ಎಷ್ಟು ಹಣ ಕೊಟ್ಟರೂ ಆಕ್ಸಿಜನ್‌ ಹಾಗೂ ಬೆಡ್‌ ಸಿಗದ ಸ್ಥಿತಿಯಿಂದ ಹೊರಗೆ ಬರುತ್ತಿದ್ದೇವೆ. ಸಾಕಷ್ಟು ಆಕ್ಸಿಜನ್‌ ಹಾಗೂ ಆಕ್ಸಿಜನ್‌ ಕಾನ್ಸ್‌ಂಟ್ರೇಟರ್ ಬಂದಿವೆ.

ಜನರಲ್ಲಿ ಕೋವಿಡ್‌ ಕುರಿತು ಸಾಕಷ್ಟು ಜಾಗೃತಿ ಮೂಡಿದೆ. ರೋಗ ಲಕ್ಷಣ ಕಂಡು ಬಂದ ತಕ್ಷಣ ಚಿಕಿತ್ಸೆ ಪಡೆಯುತ್ತಿರುವ ಕಾರಣ ಆಕ್ಸಿಜನ್‌ ಪಡೆಯುವ ಸ್ಥಿತಿಗೆ ಹೋಗದಂತಾಗಿದೆ.

Advertisement

ಸದ್ಯದ ಪಾಸಿಟಿವಿಡಿ ದರ ಶೇ. 8.50: ಸರಿಯಾಗಿ ತಿಂಗಳ ಹಿಂದೆ ಚಿತ್ರದುರ್ಗ ಜಿಲ್ಲೆಯ ಕೋವಿಡ್‌ ಪಾಸಿಟಿವಿಟಿ ರೇಟ್‌ ಕಳೆದ ಶೇ. 4.9 ರಷ್ಟಿತ್ತು. ಆದರೆ ನಂತರ ಶೇ. 20 ರವರೆಗೆ ತಲುಪಿ ಈಗ ಶೇ. 8.50ಕ್ಕೆ ಇಳಿದಿದೆ. ತಿಂಗಳ ಹಿಂದೆ ಶೇ.1 ರಷ್ಟಿದ್ದ ಸಾವಿನ ಪ್ರಮಾಣ ಈಗ ಶೇ. 0.48ಕ್ಕೆ ಇಳಿಕೆಯಾಗಿದೆ. ಗುಣಮುಖರಾಗುವವರ ಪ್ರಮಾಣ ತಿಂಗಳ ಹಿಂದೆ ಶೇ. 90.22 ರಷ್ಟಿತ್ತು.

ಈಗ 68.81 ರಲ್ಲಿದೆ. ಶೇ. 300 ರಷ್ಟು ಹೆಚ್ಚು ಪರೀಕ್ಷೆ: ಜಿಲ್ಲೆಯಲ್ಲಿ ಪ್ರತಿ ದಿನ ಕೋವಿಡ್‌ ಸೋಂಕಿನ ಪರೀಕ್ಷೆಯ ಪ್ರಮಾಣವನ್ನು 1066 ರಷ್ಟು ಮಾಡಬೇಕು ಎಂದು ರಾಜ್ಯ ಆರೋಗ್ಯ ಸಚಿವಾಲಯ ಜಿಲ್ಲಾಡಳಿತಕ್ಕೆ ಸೂಚಿಸಿದೆ. ಆದರೆ, ಜಿಲ್ಲಾಡಳಿತ ಏರುಗತಿಯಲ್ಲಿ ಸಾಗುತ್ತಿರುವ ಸೋಂಕಿಗೆ ಕಡಿವಾಣ ಹಾಕುವ ಉದ್ದೇಶದಿಂದ ಟೆಸ್ಟಿಂಗ್‌ ಪ್ರಮಾಣವನ್ನು 3 ಸಾವಿರಕ್ಕಿಂತ ಹೆಚ್ಚಾಗಿದೆ, ಅಂದರೆ ಶೇ.300 ರಷ್ಟು ಪರೀಕ್ಷೆ ಪ್ರಮಾಣ ಹೆಚ್ಚಾಗಿದೆ. ಶೀಘ್ರ ಪತ್ತೆ, ತ್ವರಿತ ಚಿಕಿತ್ಸೆ ಎನ್ನುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಒಟ್ಟನಲ್ಲಿ ರಾಜ್ಯದಲ್ಲೇ ಕಡಿಮೆ ಇದ್ದ ಸೋಂಕಿನ ಪ್ರಮಾಣ ಒಮ್ಮೆಲೆ ಏರಿಕೆಯಾಗಿ ಆತಂಕಕ್ಕೆ ಕಾರಣವಾಗಿತ್ತು. ಈಗ ಇಳಿಕೆಯಾಗುತ್ತಿರುವುದು ಜನರಲ್ಲಿ ಸಮಾಧಾನ ಮೂಡಿಸಿದೆ.

106 ಆಕ್ಸಿಜನ್‌ ಬೆಡ್‌ಗಳು ಖಾಲಿ!

ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಸೋಂಕಿತರಿಗೆ ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡವರಿಗಾಗಿ 627
ಆಕ್ಸಿನೇಟೆಡ್‌ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಬುಧವಾರದ (ಜೂ.8) ವರದಿಯಂತೆ 521 ಬೆಡ್‌ ಭರ್ತಿಯಾಗಿದ್ದು, 106 ಬೆಡ್‌ ಖಾಲಿ ಇವೆ. ಜಿಲ್ಲಾ ಆಸ್ಪತ್ರೆಯಲ್ಲಿ 185 ಆಕ್ಸಿನೇಟೆಡ್‌ ಬೆಡ್‌ಗಳಿದ್ದು, ಎಲ್ಲವೂ ಭರ್ತಿಯಾಗಿವೆ. ತಾಲೂಕು ಆಸ್ಪತ್ರೆಗಳಲ್ಲಿರುವ 270 ಬೆಡ್‌ಗಳ ಪೈಕಿ 209 ಭರ್ತಿಯಾಗಿದ್ದು, 61 ಖಾಲಿಯಿವೆ. ಖಾಸಗಿ ಆಸ್ಪತ್ರೆಗಳಲ್ಲಿರುವ 202 ಬೆಡ್‌ಗಳ ಪೈಕಿ, 157 ಭರ್ತಿಯಾಗಿದ್ದು, 45 ಆಕ್ಸಿಜನ್‌ಯುಕ್ತ ಬೆಡ್‌ಗಳು ಖಾಲಿ ಇವೆ. 53 ಐಸಿಯು ಬೆಡ್‌ ಗಳಲ್ಲಿ 44 ಭರ್ತಿಯಾಗಿದ್ದು, 11 ಖಾಲಿ ಉಳದಿವೆ. 24 ವೆಂಟಿಲೇಟೆಡ್‌ ಬೆಡ್‌ಗಳ
ಪೈಕಿ 23 ಭರ್ತಿಯಾಗಿ 1 ಖಾಲಿ ಇವೆ.

Advertisement

Udayavani is now on Telegram. Click here to join our channel and stay updated with the latest news.

Next