ಚಿಕ್ಕಮಗಳೂರು: ಕೊರೊನಾ ಪಾಸಿಟಿವಿಟಿ ಹೆಚ್ಚಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊರೊನಾ ನಿರ್ವಹಣೆ ಕುರಿತು ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳೊಂದಿಗೆ ಗುರುವಾರ ನಡೆಸಿದ ಸಭೆ ವೇಳೆ ಸಿಎಂ ಯಡಿಯೂರಪ್ಪ ಹಾಗೂ ಡಿಸಿಎಂ ಡಾ|ಅಶ್ವಥ್ ನಾರಾಯಣ ಅವರು ಜಿಲ್ಲಾಡಳಿತದಿಂದ ಸೂಕ್ತ ಮಾಹಿತಿ ಪಡೆದರು.
ಚಿಕ್ಕಮಗಳೂರಿನಂತಹ ಸಣ್ಣ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಿರುವುದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, ಸೋಂಕು ನಿಯಂತ್ರಣದಲ್ಲಿ ಜಿಲ್ಲಾಡಳಿತದ ಕಾರ್ಯ ಅಷ್ಟೊಂದು ತೃಪ್ತಿಕರವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಿರುವುದು ಹಾಗೂ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ನಲ್ಲೇ ದಾಖಲು ಮಾಡುತ್ತಿರುವುದರಿಂದ ಕಳೆದೊಂದು ವಾರದಿಂದ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. 550 ಗ್ರಾಮಗಳು ಕೊರೊನಾ ಮುಕ್ತವಾಗಿವೆ ಎಂದು ಇದೇ ವೇಳೆ ಉಸ್ತುವಾರಿ ಸಚಿವ ಎಸ್. ಅಂಗಾರ ಹಾಗೂ ಜಿಲ್ಲಾಧಿಕಾರಿ ಕೆ.ಎನ್.ರಮೇಶ ತಿಳಿಸಿದರು.
ಜಿಲ್ಲೆಯಲ್ಲಿ ಪಾಸಿಟಿವಿಟಿ ಹೆಚ್ಚಿರುವುದರಿಂದ ಜೂ.14ರ ಬಳಿಕ ಮತ್ತೆ ಒಂದು ವಾರ ಲಾಕ್‌ಡೌನ್ ಮುಂದುವರಿಸುವಂತೆಯೂ ಸರಕಾರಕ್ಕೆ ಮನವಿ ಮಾಡಿದರು. ಈ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗುರುವಾರ ಕೈಗೊಳ್ಳಬೇಕಿದ್ದ ಜಿಲ್ಲಾ ಪ್ರವಾಸ ಕೊನೆ ಕ್ಷಣದಲ್ಲಿ ರದ್ದಾಯಿತು. ಆದರೆ, ಆರೋಗ್ಯ ಇಲಾಖೆ ಸಚಿವ ಡಾ| ಕೆ. ಸುಧಾಕರ್ ಅವರು ಶುಕ್ರವಾರ ಮತ್ತು ಶನಿವಾರ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ¨