ಚಿಕ್ಕಮಗಳೂರು: ಕೋವಿಡ್ ಸೋಂಕು ನಿಯಂತ್ರಿಸಲು ಜಿಲ್ಲಾಡಳಿತ ಶ್ರಮಿಸುತ್ತಿದ್ದು ಸೋಂಕು ನಿಧಾನಗತಿಯಲ್ಲಿ ಇಳಿಮುಖವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ತಿಳಿಸಿದರು. ಗುರುವಾರ ನಗರದ ಜಿಲ್ಲಾ ಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 22ರಂದು ಜಿಲ್ಲೆಯಲ್ಲಿ 7,250 ಸೋಂಕು ಪ್ರಕರಣ ಸಕ್ರಿಯವಾಗಿದ್ದವು. ಮೇ 30ಕ್ಕೆ 6,267ಕ್ಕೆ ಇಳಿಮುಖವಾಗಿದೆ. ಜೂ.9ಕ್ಕೆ 4,422 ಸಕ್ರಿಯ ಪ್ರಕರಣಗಳಿದ್ದು, ಸೋಂಕು ನಿಧಾನವಾಗಿ ಕ್ಷೀಣಿಸುತ್ತಿದೆ.
ಜಿಲ್ಲೆಯಲ್ಲಿ ಶೇ.54ರಷ್ಟು ಕೋವಿಡ್ ಮುಕ್ತ ಗ್ರಾಮಗಳಿವೆ. ಸೋಂಕು ಕಾಣಿಸಿಕೊಂಡ ವ್ಯಕ್ತಿಯನ್ನು ಕಡ್ಡಾಯವಾಗಿ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗುತ್ತಿದೆ ಎಂದರು. “ವೈದ್ಯರ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಡಿ 129 ಗ್ರಾಮಗಳನ್ನು ವೈದ್ಯರು ಸಂಪರ್ಕಿಸಿದ್ದು, 4,547 ಜನರ ಗಂಟಲ ದ್ರವ ಸಂಗ್ರಹಿಸಿದ್ದು 106 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ವಿಡಿಯೋ ಸಂವಾದದಲ್ಲಿ ಜಿಲ್ಲೆಯ ಕೋವಿಡ್ ಮಾಹಿತಿಯನ್ನು ನೀಡಲಾಗಿದೆ. ಸೋಂಕು ಹತೋಟಿಗೆ ಕೈಗೊಂಡ ಕ್ರಮಗಳನ್ನು ವಿವರಿಸಿದ್ದೇವೆ ಎಂದು ಹೇಳಿದರು.
ಜಿಲ್ಲಾ ಧಿಕಾರಿ ಕೆ.ಎನ್. ರಮೇಶ್ ಮಾತನಾಡಿ, ರಾಜ್ಯದಲ್ಲಿ ಲಾಕ್‌ಡೌನ್ ವಿಧಿ ಸಿದ ಬಳಿಕ (ಮೇ 1) ಬೆಂಗಳೂರಿನಿಂದ ಜಿಲ್ಲೆಗೆ 17,955 ಮಂದಿ ಆಗಮಿಸಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಂದ 17,687 ಮಂದಿ ಆಗಮಿಸಿದ್ದಾರೆ ಹಾಗೂ ಬೇರೆ ರಾಜ್ಯಗಳಿಂದ 268 ಮಂದಿ ಬಂದಿದ್ದಾರೆ. ಅವರು ಕೆಲವು ದಿನಗಳು ಮನೆಯಲ್ಲಿ ಪ್ರತ್ಯೇಕವಾಗಿರದೆ ಮನೆಮಂದಿಯೊಂದಿಗೆ ಬೆರೆತ್ತಿದ್ದರಿಂದ ಹೆಚ್ಚು ಜನರಿಗೆ ಸೋಂಕು ಹರಡಲು ಕಾರಣವಾಗಿದೆ. ಸದ್ಯ ಕೋವಿಡ್ ಸೋಂಕಿತರನ್ನು ಕೋವಿಡ್ ಆರೈಕೆ ಕೇಂದ್ರದಲ್ಲಿ ಇರಿಸಲಾಗುತ್ತಿದ್ದು ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದೆ ಎಂದರು.
ಬೆಂಗಳೂರು ನಗರದಲ್ಲಿ ಏ.30ರಂದು ಅತೀ ಹೆಚ್ಚು ಸೋಂಕು ಕಾಣಿಸಿಕೊಂಡಿತ್ತು. ಬೆಂಗಳೂರಿನಲ್ಲಿ ಲಾಕ್‌ಡೌನ್ ವಿಧಿ ಸಿದ ನಂತರ ಬೆಂಗಳೂರಿನಲ್ಲಿ ಆಶ್ರಯ ಪಡೆದವರು ಜಿಲ್ಲೆಯ ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದ ಪರಿಣಾಮ ಮೇ ತಿಂಗಳ ಮೂರನೇ ವಾರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಸೋಂಕು ಇಳಿಮುಖವಾಗುತ್ತಿದ್ದು ಇನ್ನಷ್ಟು ಸೋಂಕು ಇಳಿಮುಖವಾಗಲು 15 ದಿನಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಅಭಿಪ್ರಾಯಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಮತ್ತು ಇತರೆ ಕಾರಣಗಳಿಂದ ಜನರು ಸಾವನ್ನಪ್ಪಿದ್ದಾರೆ. ಅವರೆಲ್ಲರೂ ಸೋಂಕಿನಿಂದಲೇ ಮೃತಪಟ್ಟಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಶೇ.0.88ರಷ್ಟಿದೆ. ದೇಶದಲ್ಲಿ 2.56ರಷ್ಟಿದೆ. ಹಾಗೂ ರಾಜ್ಯದಲ್ಲಿ ಶೇ.2.58ರಷ್ಟಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ ಎಂದರು.
ತಾಲೂಕು ಆಸ್ಪತ್ರೆಗಳಲ್ಲಿ ಅಳವಡಿಸಿರುವ ವೆಂಟಿಲೇಟರ್ ಬಳಕೆಯಾಗುತ್ತಿಲ್ಲ ಎಂಬ ದೂರುಗಳಿದ್ದು, ಆಕ್ಸಿಜನ್ ಸಿಲಿಂಡರ್ ಆಧಾರದ ಮೇಲೆ ಉಪಯೋಗಿಸಲಾಗುತ್ತಿದೆ. ಸೋಂಕು ತಗುಲಿದ ವ್ಯಕ್ತಿಗಳಿಗೆ 24 ಗಂಟೆಯಲ್ಲಿ 10ರಿಂದ 12 ಸಿಲಿಂಡರ್ ಬೇಕಾಗುತ್ತದೆ. ಮತ್ತೆ ಕಲವರು 6ಕ್ಕೂ ಹೆಚ್ಚು ಇನ್ನೂ ಕೆಲವರು 2ರಿಂದ 6 ಸಿಲಿಂಡರ್‌ನಷ್ಟು ಆಕ್ಸಿಜನ್ ಬೇಕಾಗುತ್ತದೆ. ಈ ಕಾರಣದಿಂದ ವೆಂಟಿಲೇಟರ್ ಬಳಕೆಯಾಗುತ್ತಿಲ್ಲವೆಂದು ಹೇಳಿದರು.
ಮೊದಲ ಲಸಿಕೆ ಪಡೆದವರು ಎರಡನೇ ಲಸಿಕೆ ಪಡೆದುಕೊಳ್ಳುವಂತೆ ದೂರವಾಣಿ ಕರೆ ಮಾಡಿ ತಿಳಿಸಲಾಗುತ್ತಿದೆ. ಅನೇಕರು ಎರಡನೇ ಲಸಿಕೆಯನ್ನು ಈಗಾಗಲೇ ಪಡೆದುಕೊಂಡಿದ್ದಾರೆ. ಕೆಲವರು ವಿವಿಧ ಕಾರಣಗಳಿಂದ ಲಸಿಕೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಆದ್ಯತೆಯ ಮೇಲೆ ಪಟ್ಟಿ ಮಾಡಿದ್ದು ಅವರಿಗೆ ಲಸಿಕೆ ನೀಡಲಾಗುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಎಂ.ಎಚ್. ಅಕ್ಷಯ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾ ಕಾರಿ ಎಸ್. ಪೂವಿತ, ಅಪರ ಜಿಲ್ಲಾಧಿಕಾರಿ ಬಿ.ಆರ್. ರೂಪ ಇದ್ದರು.