ಚಿಕ್ಕಮಗಳೂರು:ಚಿಕ್ಕಮಗಳೂರು ನಲ್ಲಿ ಕೋವಿಡ್ 2ನೇ ಆರಂಭವಾಗುತ್ತಿದ್ದಂತೆ ಸೋಂಕಿತರನ್ನು ಕಾಡಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆ ಸಮಸ್ಯೆ, ಗ್ರಾಮೀಣ ಮತ್ತು ನಗರದ ಜನತೆ ಒಂದು ಬೆಡ್‌ಗಾಗಿ ಆಸ್ಪತ್ರೆಯಿಂದ ಮತ್ತೂಂದು ಆಸ್ಪತ್ರೆಗೆ ಅಲೆದಾಡಬೇಕಿತ್ತು. ಒಂದು ಬೆಡ್ ಗಾಗಿ ಹರಸಾಹಸ ಪಡಬೇಕಿತ್ತು. ಜನರ ಅಲೆದಾಟವನ್ನು ತಪ್ಪಿಸುವ ಉದ್ದೇಶದಿಂದ ಜಿಲ್ಲಾಡಳಿತ ಬೆಂಗಳೂರಿನ ಬಿಬಿಎಂಪಿ ಮಾದರಿಯಲ್ಲಿ ವೆಬ್‌ಸೈಟ್ ಆರಂಭಿಸಿದೆ.
ಈ ವೆಬ್‌ಸೈಟ್‌ನಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಬೆಡ್ ಲಭ್ಯವಿದೆಯೇ, ಯಾವ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಇದೆ. ಜನರಲ್ ಬೆಡ್ ವ್ಯವಸ್ಥೆ ಇದೆ. ಎಷ್ಟು ಬೆಡ್ ಭರ್ತಿಯಾಗಿದೆ. ಎಷ್ಟು ಬೆಡ್ ಖಾಲಿ ಇವೆ ಎಂಬುದನ್ನು ತಮ್ಮ ಮೊಬೈಲ್ ಫೋನ್‌ನಲ್ಲೇ ತಿಳಿದು ಕೊಳ್ಳಬಹುದಾಗಿದ್ದು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವುದು ತಪ್ಪುತ್ತದೆ. ಕೋವಿಡ್ ವ್ಯಾಪಕವಾಗಿ ಜಿಲ್ಲೆಯಲ್ಲಿ ವ್ಯಾಪಿಸುತ್ತಿದ್ದಂತೆ ಬೆಡ್ ವ್ಯವಸ್ಥೆಯ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಕೆಲವು ಆಸ್ಪತ್ರೆಗಳಲ್ಲಿ ಬೆಡ್ ಲಭ್ಯವಿದ್ದರೂ ಬೆಡ್ ಖಾಲಿ ಇಲ್ಲ ಎಂದು ಸಬೂಬು ಹೇಳುತ್ತಿದ್ದರು.
ಆಸ್ಪತ್ರೆಯಲ್ಲಿ ಬೆಡ್ ಲಭ್ಯವಾಗುಷ್ಟರಲ್ಲಿ ಸೋಂಕಿತರು ಉಸಿರು ಚೆಲ್ಲುವಂತಹ ಪರಿಸ್ಥಿತಿ ಇತ್ತು. ಸೋಂಕಿತರು ಬೆಡ್ ಗಾಗಿ ಅಲೆದಾಡುವುದನ್ನು ತಪ್ಪಿಸಲು ಜಿಲ್ಲಾ ಧಿಕಾರಿ ಕೆ.ಎನ್. ರಮೇಶ್ ಅವರು ಬೆಡ್‌ಗಾಗಿ ವೆಬ್‌ಸೈಟ್ ಆರಂಭಿಸಿದ್ದು ಅದು ಗುರುವಾರದಿಂದ ಕಾರ್ಯಾರಂಭಗೊಂಡಿದೆ. ಈ ವೆಬ್ ಸೈಟ್ ಅನ್ನು ಕೆಪ್ಯುಲಸ್ ಟೆಕ್ನಾಲಜೀಸ್ ಪ್ರೈ.ಲಿ ಸಂಸ್ಥೆಯ ಅರ್ಜುನ್ ಮತ್ತು ನಿತಿನ್ ಕಾಮತ್ ನೇತೃತ್ವದ ತಂಡ ಅಭಿವೃದ್ಧಿಪಡಿಸಿದ್ದು, ವೆಬ್‌ಸೈಟ್ ಗೆ ಲಾಗಿನ್ ಆಗುತ್ತಿದ್ದಂತೆ ಕೋವಿಡ್ ಬೆಡ್ ಅಲೋಕೇಶನ್ ಮಾನಿಟರಿಂಗ್ ಸಿಸ್ಟಂ ಎಂದು ತೆರೆದುಕೊಳ್ಳುತ್ತದೆ. ಯಾವ ಆಸ್ಪತ್ರೆಯಲ್ಲಿ ಖಾಲಿಬೆಡ್ ಇದೆ.
ಸಹಾಯವಾಣಿ, ಹೆಲ್ಪ್ಲೈನ್ ನೀಡಲಾಗಿದ್ದು, ಯಾವ ಮಾಹಿತಿ ಬೇಕು ಅದನ್ನು ಪಡೆದುಕೊಳ್ಳಬಹುದಾಗಿದೆ. ಕೋವಿಡ್ ಚಿಕಿತ್ಸೆಗೆ ಆಯ್ಕೆ ಮಾಡಲಾಗಿರುವ ಖಾಸಗಿ ಆಸ್ಪತ್ರೆಗಳಾದ ಆಶ್ರಯ, ಕೆಆರ್ ಎಸ್, ಹೋಲಿಕ್ರಾಸ್, ಚೇತನ ಮತ್ತು ವಾತ್ಸಲ್ಯ ಆಸ್ಪತ್ರೆ ಹಾಗೂ ಸರ್ಕಾರಿ ಮಲ್ಲೇಗೌಡ ಜಿಲ್ಲಾಸ್ಪತ್ರೆ ಸೇರಿದಂತೆ 7 ತಾಲೂಕು ಆಸ್ಪತ್ರೆ, ಚಿಕ್ಕಮಗಳೂರು ನಗರದ ಬಾಲಕಿಯರ ಹಾಸ್ಟೆಲ್, ಗಿರಿಜನ ವಸತಿ ಶಾಲೆ ತುಡಕೂರು, ಪಪೂ ಬಾಲಕರ ವಿದ್ಯಾರ್ಥಿ ನಿಲಯ, ಕಡೂರು ತಾಲೂಕಿನ ಪಪೂ ಬಾಲಕರ ವಿದ್ಯಾರ್ಥಿ ನಿಲಯ, ಕೊಪ್ಪ ತಾಲೂಕಿನ ಎಂಡಿಆರ್ ಎಸ್ ಹರಂದೂರು, ಮೂಡಿಗೆರೆ ತಾಲೂಕಿನ ಎಂಡಿಆರ್ ಎಸ್ ಕೂಳೂರು, ಬಿದರಹಳ್ಳಿ, ನರಸಿಂಹರಾಜಪುರ ತಾಲೂಕಿನ ಎಂಡಿಆರ್‌ಎಸ್ ಅಳಲಗೆರೆ, ಶೃಂಗೇರಿ ತಾಲೂಕಿನ ಎಚಿಡಿ ಆರ್‌ಎಸ್ ಬೇಗಾರು, ತರೀಕೆರೆ ತಾಲೂಕಿನ ಎಂಡಿಆರ್‌ಎಸ್ ಬಾವಿಕೆರೆ, ಅಜ್ಜಂಪುರ ತಾಲೂಕಿನ ಕೆಆರ್‌ಸಿಆರ್ ಎಸ್ ಸೊಕ್ಕೆಯಲ್ಲಿ ತೆರೆಯಲಾಗಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಮಾಹಿತಿ ಲಭ್ಯವಾಗಲಿದೆ. ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಲಭ್ಯವಿರುವ ಜನರಲ್ ಬೆಡ್‌ಗಳು ಐಸಿಯು, ಐಸಿಯು ವೆಂಟಿಲೇಟರ್, ಆಮ್ಲಜನಕ ರಹಿತ ಹಾಸಿಗೆ ಎಷ್ಟು ಲಭ್ಯವಿದೆ.
ಎಷ್ಟು ಬೆಡ್ ಭರ್ತಿಯಾಗಿವೆ. ಎಷ್ಟು ಬೆಡ್ ಗಳು ಖಾಲಿ ಇವೆ ಎಂಬ ಮಾಹಿತಿ ತಕ್ಷಣ ಲಭ್ಯವಾಗಲಿದೆ. ಯಾವ ಆಸ್ಪತ್ರೆಯಲ್ಲಿ ಯಾವ ಮಾದರಿಯ ಹಾಸಿಗೆ ಲಭ್ಯವಿದೆ ಎಂಬ ಬಗ್ಗೆ ಜಿಲ್ಲಾಸ್ಪತ್ರೆ ಮಾಹಿತಿ ಬರುತ್ತದೆ. ನಂತರ ಸಂಬಂಧಪಟ್ಟ ವೈದ್ಯರು ಸೋಂಕಿತರಿಗೆ ಯಾವ ಬೆಡ್ ಬೇಕು ಎಂಬುದನ್ನು ನಿರ್ಧರಿಸಿ ಬಳಿಕ ಆಯಾ ಆಸ್ಪತ್ರೆ ಮತ್ತು ನೋಡೆಲ್ ಅ ಧಿಕಾರಿಗೆ ಹಾಗೂ ಸೋಂಕಿತ ವ್ಯಕ್ತಿಯ ಮೊಬೈಲ್ ಗೆ ಮೆಸೇಜ್ ಹೋಗಲಿದ್ದು, ಮೆಸೇಜ್ ತೋರಿಸಿ ಆಯಾ ಆಸ್ಪತ್ರೆಯಲ್ಲಿ ದಾಖಲಾಗಬಹುದಾಗಿದೆ.
ಸರ್ಕಾರಿ ಮತ್ತು ಖಾಸಗಿ ಕೋವಿಡ್ ಆಸ್ಪತ್ರೆಗೆ ನೋಡೆಲ್ ಅ ಧಿಕಾರಿಯನ್ನು ನೇಮಕ ಮಾಡಲಾಗಿದ್ದು, ಅವರ ಸಂಪರ್ಕ ಸಂಖ್ಯೆಯೂ ಲಭ್ಯವಾಗಲಿದೆ. ಬೆಡ್‌ವ್ಯವಸ್ಥೆ ಪಾರದರ್ಶಕವಾಗಿ ರುವಂತೆ ನೋಡಿಕೊಳ್ಳಲು ಬೆಂಗಳೂರಿನ ಬಿಬಿಎಂಪಿ ಈ ಮಾದರಿಯನ್ನು ಅಳವಡಿಸಿದ್ದು ಅದೇ ಮಾದರಿಯಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ವೆಬ್‌ಸೈಟ್ ಆರಂಭಿಸಿದ್ದು ಆಸ್ಪತ್ರೆಯಲ್ಲಿ ತುರ್ತು ಬೆಡ್ ಅಗತ್ಯವಿದ್ದವರು ಈ ವೆಬ್‌ಸೈಟ್ ಮೊರೆ ಹೋಗಬಹುದಾಗಿದೆ.