ಚಿಕ್ಕಮಗಳೂರು: ಕಾಫಿನಾಡು ಪ್ರಕೃತಿ ಸೌಂದರ್ಯದ ಜೊತೆ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಿದ್ದು ಶ್ರದ್ಧಾಭಕ್ತಿಯ ಕೇಂದ್ರವಾಗಿದೆ. ಪ್ರಕೃತಿ ಸೌಂದರ್ಯದ ಜೊತೆಯ ಭಕ್ತಿಯ ಪರಾಕಷ್ಠೆಯ ರಸಾನುಭೂತಿಯನ್ನು ಉಣ ಬಡಿಸುತ್ತಿದೆ.
ನಗರದಿಂದ 15 ಕಿಮೀ ದೂರದಲ್ಲಿರುವ ಆಂಜನೇಯ ಗುಡ್ಡವು ಅಂತಹ ಸ್ಥಳಗಳಲ್ಲಿ ಒಂದಾಗಿದೆ. ಆಂಜನೇಯ ಗುಡ್ಡ ಬಾಚಿಗನಹಳ್ಳಿ ಮತ್ತು ಮೆಣಸಿನ ಮಲ್ಲೇದೇವರಹಳ್ಳಿಯ ನಡುವೆ ಇದೆ. ಬೆಟ್ಟದ ನೆತ್ತಿಯಲ್ಲಿ ಕಲ್ಲಿನಲ್ಲಿ ಒಡಮೂಡಿರುವ ವೀರಾಂಜನೇಯ ಸ್ವಾಮಿಯ ಕಲ್ಲಿನ ವಿಗ್ರಹವಿದ್ದು ಈ ಕಾರಣದಿಂದ ಈ ಗುಡ್ಡವನ್ನು ಆಂಜನೇಯ ಗುಡ್ಡ ಎಂದು ಕರೆಯಲಾಗುತ್ತಿದೆ.
ಈ ಗುಡ್ಡ ಸುತ್ತಮುತ್ತಲ ಗ್ರಾಮದವರಿಗೆ ಚಿರಪರಿಚಿತವಾಗಿದ್ದು, ವರ್ಷಪೂರ್ತಿ ಆಂಜನೇಯ ಮೂರ್ತಿಗೆ ಪೂಜೆ ಸಲ್ಲಿಸಲಾಗುತ್ತದೆ. ಶಕ್ತಿದೇವರು ಎಂಬ ನಂಬಿಕೆ ಭಕ್ತರಲ್ಲಿದೆ. ಆದರೆ, ಈ ಸ್ಥಳ ಅಷ್ಟೊಂದು ಬೆಳಕಿಗೆ ಬಾರದಿರುವುದರಿಂದ ಇಂದಿಗೂ ಈ ಸ್ಥಳ ಅಪರಿಚಿತವಾಗಿದೆ. ಮುಂದೊಂದು ದಿನ ಪ್ರವಾಸಿ ತಾಣ ಮತ್ತು ಶ್ರದ್ಧಾಭಕ್ತಿ ಕೇಂದ್ರವಾಗಿ ಮಾರ್ಪಟ್ಟರೆ ಆಶ್ವರ್ಯ ಪಡಬೇಕಾಗಿಲ್ಲ. ಬಾಚಿಗನಹಳ್ಳಿಯಿಂದ ಈ ಬೆಟ್ಟಕ್ಕೆ ಕಾಲುದಾರಿಯಲ್ಲಿ ನಡೆದು ಸಾಗಬೇಕು. ಕಲ್ಲುಮುಳ್ಳು, ಕೊರಕಲು, ಸುತ್ತಲೂ ಹಚ್ಚಹಸಿರಿನ ಕಿರಿದಾದ ಕಾಲುದಾರಿಯಲ್ಲಿ ನಡೆದು ಸಾಗಬೇಕು.
ಪ್ರಕೃತಿಯ ಮಡಿಲಿನಲ್ಲಿ ನಡೆದು ಸಾಗುತ್ತಿದ್ದರೆ ಒಂದು ರೀತಿ ಟ್ರಕಿಂಗ್ ಮಾಡಿದ ಅನುಭವ ನೀಡುತ್ತದೆ. ಆಂಜನೇಯ ಮೂರ್ತಿ ಇರುವ ಸ್ಥಳಕ್ಕೆ ಬಾಚಿಗನಹಳ್ಳಿಯಿಂದ ಸುಮಾರು ಒಂದೂವರೆ ಕಿಮೀನಷ್ಟು ದೂರ ಕಾಲುದಾರಿಯಲ್ಲಿ ನಡೆದು ಸಾಗಬೇಕು. ಆಂಜನೇಯ ದೇವರ ಇತಿಹಾಸವನ್ನು ಗ್ರಾಮದ ಹಿರಿಯರನ್ನು ಕೇಳಿದರೆ ಒಬ್ಬೊಬ್ಬರು ಒಂದೊಂದು ಕಥೆಯನ್ನು ಹೇಳುತ್ತಾರೆ. ಇದು ಸತ್ಯದೇವರು ಆಂಜನೇಯಸ್ವಾಮಿ ಮೂರ್ತಿಗೆ ಅನೇಕ ವರ್ಷಗಳ ಹಿಂದೇ ಸಿಡಿಲುಬಡಿದು ಮೂರ್ತಿಯ ಎಡಗೈ ಭಾಗದಲ್ಲಿ ಮೇಲಿಂದ ಕೆಳಗೆ ಸೀಳಲ್ಪಟ್ಟಿತ್ತು. ನಾವು ಚಿಕ್ಕವರಿದ್ದಾಗಿನಿಂದ ನೋಡಿದ್ದೇವೆ ಎನ್ನುತ್ತಾರೆ.
ಮೂರ್ತಿ ಬಿರುಕುಬಿಟ್ಟ ಜಾಗದಲ್ಲಿ ಬೆರಳುಗಳು ತೂರುವಷ್ಟು ಬಿರುಕು ಬಿಟ್ಟಿತ್ತು. ಕ್ರಮೇಣ ಆ ಬಿರುಕು ಕೂಡುತ್ತಿದ್ದು ಮೂರ್ತಿಯ ನೆತ್ತಿಯ ಮೇಲೆ ಸ್ವಲ್ಪ ಬಿರುಕು ಮಾತ್ರ ಕಾಣಿಸುತ್ತಿದೆ. ಯಾವುದೇ ಮೂರ್ತಿ ವಿಘ್ನಗೊಂಡ ಬಳಿಕ ಕೂಡುವುದಿಲ್ಲ. ಆದರೆ ಈ ಮೂರ್ತಿ ಬಿರುಕು ಕೂಡಿದ್ದು ಇದು ಸತ್ಯವಂತ ದೇವರು ಎಂಬುದು ಸುತ್ತಮುತ್ತಲ ಜನರ ನಂಬಿಕೆಯಾಗಿದೆ.ಸುತ್ತಮುತ್ತಲ ಗ್ರಾಮಗಳಾದ ವಸ್ತಾರೆ, ಆಲದಗುಡ್ಡೆ, ಬಾಚಿಗನಹಳ್ಳಿ, ಮಾರಿಕಟ್ಟೆ, ತೊಂಡವಳ್ಳಿ, ವಳಗೇರಹಳ್ಳಿ, ಕೆಸವಿನಮನೆ, ಮೆಣಸಿನಮಲ್ಲೇದೇವರಹಳ್ಳಿ, ದುಮ್ಮಗೆರೆ, ಶಿರಗುಂದ, ದಂಬದಹಳ್ಳಿಯ ಗ್ರಾಮಸ್ಥರು ವರ್ಷಕ್ಕೊಮ್ಮೆಯಾದರೂ ದೇವರ ದರ್ಶನ ಪಡೆಯುತ್ತಾರೆ.
ಇಲ್ಲಿ ಯಾರಾದರೂ ಪೂಜೆ ಸಲ್ಲಿಸಬಹುದಾಗಿದ್ದು ಯಾವುದೇ ಕಟ್ಟುಪಾಡುಗಳಿಲ್ಲದಿರುವುದು ಒಂದು ವಿಶೇಷ. ಸುತ್ತಮುತ್ತಲ ಗ್ರಾಮಗಳಲ್ಲಿ ಹಸು-ಕರುಗಳು ಕಳೆದು ಹೋದರೆ ಬೆಟ್ಟದ ಆಂಜನೇಯ ಸ್ವಾಮಿಯನ್ನು ಬೇಡಿಕೊಂಡರೆ ಹಸು-ಕರುಗಳು ಮರಳಿ ಮನೆಗೆ ಬರುತ್ತವೆ ಎಂಬ ನಂಬಿಕೆ ಇದ್ದು, ಹಸು ಕರುವಿಗೆ ಜನ್ಮ ನೀಡಿದ ನಂತರ ಹಾಲಿನ ಮತ್ತು ಮೊಸರು ಅಭಿಷೇಕವನ್ನು ವೀರಾಂಜನೇಯನಿಗೆ ಅರ್ಪಿಸುತ್ತಾರೆ ಎನ್ನುತ್ತಾರೆ ಗ್ರಾಮದ ಹಿರಿಯರು.