Advertisement

ತುರ್ತುಸೇವೆಗಾಗಿ ಆಕ್ಸಿಜನ್‌ ಬಸ್‌ ಬಳಕೆ

09:25 PM May 18, 2021 | Team Udayavani |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್‌ ಎರಡನೇ ಅಲೆ ಹೆಚ್ಚಳವಾಗುತ್ತಿದ್ದು ಸೋಂಕಿತರಿಗೆ ಆಕ್ಸಿಜನ್‌, ವೆಂಟಿಲೇಟರ್‌ಗಳ ಸಮಸ್ಯೆಯಾಗದಂತೆ ತುರ್ತುಸೇವೆ ಒದಗಿಸಲು ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ನಿಗಮದ ಸಹಯೋಗದಿಂದ ಆಕ್ಸಿಜನ್‌ ಹೊಂದಿದ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

Advertisement

ಅದರಂತೆ ಜಿಲ್ಲೆಯಲ್ಲಿ ಆಕ್ಸಿಜನ್‌ ಒಳಗೊಂಡಿರುವ ಬಸ್‌ ಸೇವೆ ಆರಂಭಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಅಂಗಾರ ತಿಳಿಸಿದರು. ಸೋಮವಾರ ನಗರದ ಜಿಲ್ಲಾಧಿ ಕಾರಿ ಕಚೇರಿ ಮುಂಭಾಗ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ವತಿಯಿಂದ ಆನ್‌ವೀಲ್‌ ಯೋಜನೆಯಡಿ ತುರ್ತುಸೇವೆ ಸಲ್ಲಿಸಲು ಆರಂಭಿಸಿದ ಆಕ್ಸಿಜನ್‌ ಬಸ್‌ ಉದ್ಘಾಟಿಸಿ ಅವರು ಮಾತನಾಡಿದರು.

ದಿನದಿಂದ ದಿನಕ್ಕೆ ಕೋವಿಡ್‌ ಸೋಂಕು ಉಲ್ಬಣಗೊಳ್ಳುತ್ತಿದೆ. ಸೋಂಕಿತರಿಗೆ ಆಕ್ಸಿಜನ್‌ ಮತ್ತು ವೆಂಟಿಲೇಟರ್‌ ಸಮಸ್ಯೆಯಿಂದ ಯಾರೂ ಮೃತಪಡಬಾರದು ಎಂಬ ಉದ್ದೇಶದಿಂದ ಕೆಎಸ್‌ ಆರ್‌ಟಿಸಿ ಸಂಸ್ಥೆ ಸಹಯೋಗದೊಂದಿಗೆ ಬಸ್‌ಗಳಿಗೆ ಆಕ್ಸಿಜನ್‌ ಕಾನ್ಸನೆóಟರ್‌ಗಳನ್ನು ಅಳವಡಿಸಿ ಕೋವಿಡ್‌ ಸೋಂಕಿತರಿಗೆ ತುರ್ತು ಆರೋಗ್ಯ ಸೇವೆ ನೀಡಲು ಸಹಕಾರಿಯಾಗಲಿದೆ ಎಂದರು.

ಸೋಂಕಿಗೆ ಒಳಗಾದವರಿಗೆ ತುರ್ತುಸೇವೆ ನೀಡಲು ರಾಜ್ಯಾದ್ಯಂತ ಬಸ್‌ಗಳಲ್ಲಿ ಆಕ್ಸಿಜನ್‌ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಈ ಸೇವೆಯನ್ನು ವಿಸ್ತರಿಸಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಆಮ್ಲಜನಕ, ವೆಂಟಿಲೇಟರ್‌ ಸಮಸ್ಯೆ ಇರುವ ತುರ್ತು ಸಂದರ್ಭದಲ್ಲಿ ಈ ಬಸ್‌ ಗಳು ಸೇವೆ ಒದಗಿಸಲಿದ್ದು 4 ಜನ ಸೋಂಕಿತರನ್ನು ಏಕ ಕಾಲದಲ್ಲಿ ಆಸ್ಪತ್ರೆಗೆ ಕರೆತರಬಹುದಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಲಾಕ್‌ಡೌನ್‌ ಮುಂದುವರಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮಂತ್ರಿಗಳೊಂದಿಗೆ ಹಾಗೂ ಕೋವಿಡ್‌ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು. ಶಾಸಕ ಸಿ.ಟಿ. ರವಿ ಮಾತನಾಡಿ, ಕೋವಿಡ್‌ ಸೋಂಕಿತರಿಗೆ ತುರ್ತು ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಆಕ್ಸಿಜನ್‌ ಬಸ್‌ ಬಳಕೆ ಮಾಡಿಕೊಂಡು 4 ಮಂದಿ ಸೋಂಕಿತರನ್ನು ಏಕಕಾಲದಲ್ಲಿ ಆಸ್ಪತ್ರೆಗೆ ಕರೆತರಲು ಅನುಕೂಲವಾಗುತ್ತದೆ ಎಂದರು.

Advertisement

ಸೋಂಕಿತರು ಆಂಬ್ಯುಲೆನ್ಸ್‌ನಿಂದ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಾಗ ಚಿಕಿತ್ಸೆಗೆ ಹಾಸಿಗೆ, ವೆಂಟಿಲೇಟರ್‌ಗಳ ಸಮಸ್ಯೆ ಎದುರಾಗಬಹುದು. ಈ ವೇಳೆ ಬಸ್‌ನಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಬೇಡಿಕೆಗೆ ತಕ್ಕಂತೆ ಬಸ್‌ ಸೌಲಭ್ಯವನ್ನು ಹೆಚ್ಚಿಸಲಾಗುವುದು. ಬಸ್‌ ಸೇವೆಯಿಂದ ತುರ್ತುಚಿಕಿತ್ಸೆ ಪಡೆಯುವರಿಗೆ ಆತಂಕ ಕಡಿಮೆಯಾಗುತ್ತದೆ ಎಂದ ಅವರು, ರಾಜ್ಯದಲ್ಲಿ ಲಾಕ್‌ಡೌನ್‌ ಮುಂದುವರಿಸುವ ಬಗ್ಗೆ ತಜ್ಞರು, ಅಧಿಕಾರಿಗಳ ಸಲಹೆ ಆಧರಿಸಿ ಮುಖ್ಯಮಂತ್ರಿಗಳು ಸಚಿವರೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸೋಂಕಿನ ಪ್ರಮಾಣ ಅಧಿ ಕವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್‌ ಹೆಚ್ಚಳಕ್ಕೆ ಸಂಬಂಧಿಸಿದಂತೆ ಆಕ್ಸಿಜನ್‌ ಪೂರೈಕೆ ಹೆಚ್ಚಳವಾದಲ್ಲಿ ವೆಂಟಿಲೇಟರ್‌ ಹೆಚ್ಚಿಸಲಾಗುವುದು. ಸರ್ಕಾರ 4 ಪಟ್ಟು ಆಕ್ಸಿಜನ್‌ ಪೂರೈಕೆ ಮಾಡುತ್ತಿದ್ದು ಆಸ್ಪತ್ರೆಯಲ್ಲಿ ತಾಂತ್ರಿಕ ತಜ್ಞರ ಕೊರತೆಯೂ ಇದೆ. ಹೋಲಿಕ್ರಾಸ್‌ ಆಸ್ಪತ್ರೆಗೆ ಸರ್ಕಾರದ 6 ವೆಂಟಿಲೇಟರ್‌ಗಳನ್ನು ರೋಗಿಗಳ ಹಿತದೃಷ್ಟಿಯಿಂದ ತಾತ್ಕಾಲಿಕ ಅವಧಿಗೆ ನೀಡಲಾಗಿದ್ದು, ಆಯುಷ್ಮಾನ್‌ ಭಾರತ್‌ ಯೋಜನೆಯ ಫಲಾನುಭವಿಗೆ ಇಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.

ವಿಧಾನ ಪರಿಷತ್‌ ಉಪಸಭಾಪತಿ ಎಂ.ಕೆ. ಪ್ರಾಣೇಶ್‌, ಜಿಲ್ಲಾಧಿಕಾರಿ ಕೆ.ಎನ್‌. ರಮೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಎಂ.ಎಚ್‌. ಅಕ್ಷಯ್‌, ಸಿಇಒ ಎಸ್‌. ಪೂವಿತಾ, ಎಡಿಸಿ ಬಿ.ಆರ್‌. ರೂಪಾ, ಎಸಿ ಡಾ| ಎಚ್‌.ಎಲ್‌. ನಾಗರಾಜ್‌, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಶಿಖಾ, ಕೆಎಸ್‌ ಆರ್‌ಟಿಸಿ ಡಿಸಿ ವೀರೇಶ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಉಮೇಶ್‌, ಜಿಲ್ಲಾ ಸರ್ಜನ್‌ ಮೋಹನ್‌ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next