ಚಿಕ್ಕಮಗಳೂರು: ತೌಕ್ತೇ ಚಂಡಮಾರುತದ ಪರಿಣಾಮ ಕಾಫಿನಾಡಿನಾದ್ಯಂತ ಶುಕ್ರವಾರ ರಾತ್ರಿಯಿಂದ ಆರಂಭಗೊಂಡ ಮಳೆ ಶನಿವಾರವೂ ಮುಂದುವರಿದಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.
ನಿರಂತರ ಮಳೆಯೊಂದಿಗೆ ಮೋಡ ಕವಿದ ವಾತಾವರಣ ಹಾಗೂ ಶೀತಗಾಳಿಯಿಂದ ಜನರು ಮನೆಯಲ್ಲೇ ಬಂಧಿಯಾಗಿದ್ದಾರೆ. ಜಿಲ್ಲೆಯ ಮಲೆನಾಡು ತಾಲೂಕುಗಳಾದ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಸುತ್ತಮುತ್ತ ನಿರಂತರವಾಗಿ ಧಾರಾಕಾರ ಮಳೆಯಾಗಿದೆ.
ಇಡೀ ದಿನ ಗಾಳಿಯೊಂದಿಗೆ ಮಳೆಯಾಗಿದ್ದು, ಗಾಳಿಯ ರಭಸಕ್ಕೆ ಕೆಲವು ಮರಗಳು ನೆಲಕಚ್ಚಿವೆ. ವಿದ್ಯುತ್ ಕಂಬಗಳು ಧರೆಗುರುಳಿದ್ದು ವಿದ್ಯುತ್ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ನಿರಂತರ ಮಳೆಯಿಂದ ಮಲೆನಾಡು ಭಾಗದಲ್ಲಿ ಕೃಷಿ ಚಟುವಟಿಗೆ ಅಡ್ಡಿಯಾಗಿದೆ.
ಈ ಭಾಗದಲ್ಲಿ ಭಾರೀ ಮಳೆಯಾದ ಪರಿಣಾಮ ಕೆರೆಕಟ್ಟೆಗಳಲ್ಲಿ ನೀರು ತುಂಬಿಕೊಂಡಿದೆ. ಚಿಕ್ಕಮಗಳೂರು ನಗರ ಸೇರಿದಂತೆ ಸುತ್ತಮುತ್ತ ನಿರಂತರ ಸಾಧಾರಣ ಮಳೆಯಾಗಿದೆ. ಕಡೂರು, ತರೀಕೆರೆ ಹಾಗೂ ಬೀರೂರು ಭಾಗದಲ್ಲಿ ಮೋಡ ಕವಿದ ವಾತಾವರಣವಿದ್ದು ಶೀತ ಗಾಳಿಯೊಂದಿಗೆ ಸಾಧಾರಣ ಮಳೆಯಾಗಿದೆ.
ಕಳೆದೆರೆಡು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಚಿಕ್ಕಮಗಳೂರು ನಗರದ ರಾಮೇಶ್ವರ ನಗರದ ರುಕ್ಮಿಣಿಯಮ್ಮ ಎಂಬುವರ ಮನೆಯ ಗೋಡೆ ಕುಸಿದು ಚಾವಣಿಗೆ ಹಾಕಲಾಗಿದ್ದ ಶೀಟುಗಳು ಒಡೆದು ಹೋಗಿವೆ.
ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಂಭವವಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿದೆ. ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುವ ಸಂಭವ ಹೆಚ್ಚಿರುವ ಕಾರಣದಿಂದ ನದಿಪಾತ್ರದಲ್ಲಿ ಯಾರೂ ಓಡಾಡದಂತೆ ಎಚ್ಚರಿಕೆ ನೀಡಿದೆ.