ಚಿಕ್ಕಮಗಳೂರು: ಮಳೆಯಿಂದ ಸಂಭವಿಸುವ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕು ಮಟ್ಟದಲ್ಲಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ತಿಳಿಸಿದರು.
ಶನಿವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಪತ್ತು ನಿರ್ವಹಣೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಎರಡು ವರ್ಷ ಜಿಲ್ಲೆಯಲ್ಲಿ ಅತಿವೃಷ್ಟಿ ಸಂಭವಿಸಿ ಅಪಾರ ಪ್ರಮಾಣ ಹಾನಿಯಾಗಿದ್ದು, ಆ ಪರಿಸ್ಥಿತಿ ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಹಿಂದಿನ ವರ್ಷ ಹಾನಿಗೊಳಗಾದ ಪ್ರದೇಶಗಳನ್ನು ಗುರುತಿಸಿ ರಸ್ತೆ, ಸೇತುವೆ ಹಾಗೂ ತಿರುವುಗಳನ್ನು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.
ಮಳೆ ಹೆಚ್ಚು ಬೀಳುವ ಪ್ರದೇಶವನ್ನು ಕೆಂಪು ವಲಯ ಎಂದು ಗುರುತಿಸಬೇಕು. ಹಾನಿಗೊಳಗಾದಲ್ಲಿ ತುರ್ತು ಕಾರ್ಯ ನಿರ್ವಹಿಸಲು ಜೆಸಿಬಿ, ಸಂಪರ್ಕ ವ್ಯವಸ್ಥೆ, ಮಾನವ ಸಂಪನ್ಮೂಲ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಮಳೆಯಿಂದ ಸಂಭವಿಸಬಹುದಾದ ವಿಪತ್ತು ಮತ್ತು ಹಾನಿಗಳ ಸಮಗ್ರ ಮಾಹಿತಿಯನ್ನು ಮೂರು ದಿನಗಳಲ್ಲಿ ನೀಡಬೇಕು. ಎಲ್ಲಾ ಸರ್ಕಾರಿ ಅಧಿಕಾರಿಗಳ ದೂರವಾಣಿ ಮೂಲಕ ಸಂಪರ್ಕಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ವಿವಿಧ ಇಲಾಖೆ ಸಿಬ್ಬಂದಿಗಳು ಮತ್ತು ಸ್ವಯಂಸೇವಕರ ಸಹಾಯವನ್ನು ಪದುಕೊಳ್ಳುವಂತೆ ತಿಳಿಸಿದರು. ಜಿಪಂ ಸಿಇಒ ಪೂವಿತಾ ಮಾತನಾಡಿ, ಮಳೆಹಾನಿ ಪ್ರದೇಶದ ಜನರ ರಕ್ಷಣೆಗೆ ನಿರಾಶ್ರಿತರ ಕೇಂದ್ರ ಸ್ಥಾಪಿಸಬೇಕು ಮತ್ತು ಕೋವಿಡ್ ಹಿನ್ನೆಲೆಯಲ್ಲಿ ಜನರು ಗುಂಪು ಸೇರದಂತೆ ತಡೆಯಲು ಮುಂಜಾಗ್ರತೆ ವಹಿಸಬೇಕಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಎಂ.ಎಚ್. ಅಕ್ಷಯ್ ಮಾತನಾಡಿ, ವಿಪತ್ತು ಸಂದರ್ಭದಲ್ಲಿ ಸಂವಹನ- ಸಂಪರ್ಕ ಮುಖ್ಯವಾಗಿದ್ದು, ಸಂವಹನ ಸಂಪರ್ಕ ಕಡಿತವಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಉಪವಿಭಾಗಾ ಧಿಕಾರಿ ಡಾ| ಎಚ್.ಎಲ್. ನಾಗರಾಜ್ ಮಾತನಾಡಿ, ಮಲೆನಾಡು ಭಾಗದಲ್ಲಿ ರಸ್ತೆಗಳ ಸಮೀಪದಲ್ಲಿ ಮರಗಳ ಸಂಖ್ಯೆ ಹೆಚ್ಚಿದ್ದು, ರಸ್ತೆ ಸಂಪರ್ಕಕ್ಕೆ ತೊಡಕಾಗುವ ಮರಗಳನ್ನು ಅರಣ್ಯ ಮುಂಚಿತವಾಗಿ ಅವುಗಳನ್ನು ತೆರವುಗೊಳಿಸುವುರಿಂದ ಮುಂದಿನ ದಿನಗಳಲ್ಲಿ ಸಂಭವಿಸುವ ಅನಾಹುತವನ್ನು ತಡೆಯಲು ಸಾಧ್ಯವಾಗಲಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಆರ್. ರೂಪ, ತಹಶೀಲ್ದಾರ್ ಡಾ| ಕಾಂತರಾಜ್ ಮತ್ತಿತರು ಇದ್ದರು.