Advertisement

ವಲಸೆ ಹಕ್ಕಿಗಳ ಕಲರವ ಇಳಿಮುಖ

09:39 PM May 14, 2021 | Team Udayavani |

ಚಿಕ್ಕಮಗಳೂರು: ಜಿಲ್ಲಾದ್ಯಂತ ವಲಸೆ ಹಕ್ಕಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಮುಖವಾಗಿದೆ ಎಂದು ವೈಲ್ಡ್‌ ಕ್ಯಾಟ್‌-ಸಿ ಹಾಗೂ ಭದ್ರಾ ವನ್ಯಜೀವಿ ಸಂರಕ್ಷಣಾ ತಂಡದ ಸದಸ್ಯ ಡಿ.ವಿ. ಗಿರೀಶ್‌ ತಿಳಿಸಿದ್ದಾರೆ.

Advertisement

2020-21ರಲ್ಲಿ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಿಂದ ಫೆಬ್ರವರಿ ಮತ್ತು ಮಾರ್ಚ್‌ ತಿಂಗಳವರೆಗೆ ಪಕ್ಷಿ ವೀಕ್ಷಕರು ನಡೆಸಿದ ವೀಕ್ಷಣೆ ಹಾಗೂ ದಾಖಲಾತಿಯಿಂದ ಈ ಮಾಹಿತಿ ತಿಳಿದು ಬಂದಿದೆ ಎಂದು ತಿಳಿಸಿರುವ ಅವರು, ಮಧ್ಯ ಏಷ್ಯಾ, ಹಿಮಾಲಯದಿಂದ ಚಿಕ್ಕಮಗಳೂರು ತಾಲೂಕಿನ ಕೋಟೆ, ಬಸವನಹಳ್ಳಿ, ಮಾಗಡಿ, ಅಂಬಳೆ, ಹಿರೇಮಗಳೂರು ಹೆಜ್ಜಿಗೇನಹಳ್ಳಿ ಸೇರಿದಂತೆ ವಿವಿಧ ಕೆರೆಗಳಿಗೆ ಬರುತ್ತಿದ್ದ ಜಾಲಪಾದದ ಹಕ್ಕಿಗಳು ಹಾಗೂ ಕೆರೆಯಂಚಿನಲ್ಲಿ ಓಡಾಡುವ, ಕೆರೆಯ ಸುತ್ತಲ ಮರಗಿಡ, ಪೊದೆಗಳಲ್ಲಿ ಕಾಣ ಸಿಗುತ್ತಿದ್ದ ಹಕ್ಕಿಗಳ ಎಣಿಕೆಯಲ್ಲಿ ವಲಸೆ ಪಕ್ಷಿಗಳ ಸಂಖ್ಯೆ ಕಡಿಮೆಯಾಗಿವೆ ಎಂದು ಹೇಳಿದ್ದಾರೆ.

ಹಲವು ಪ್ರಬೇಧದ ಹಕ್ಕಿಗಳು ಚಳಿಗಾಲದಲ್ಲಿ ತಮ್ಮ ಮೂಲ ನೆಲೆಯಿಂದ ಸಾವಿರಾರು ಮೈಲು ದೂರದ ಪ್ರದೇಶಗಳಿಗೆ ವಲಸೆ ಹೋಗಿ, ಸಂತಾನ ಬೆಳೆಸಿಕೊಂಡು ಹಿಂತಿರುಗುತ್ತವೆ. ಇವುಗಳಲ್ಲಿ ನೀರುಹಕ್ಕಿಗಳದೇ ಸಿಂಹಪಾಲು. ಕರೆಯ ಸಮೀಪದ ಮರಗಳಲ್ಲಿ ತಮ್ಮ ಸಂತಾನ ಬೆಳೆಸಲು ಸಿದ್ಧತೆ ನಡೆಸಿ, ಕೆರೆಗಳಲ್ಲಿ ಒಟ್ಟಾಗಿ ಆಹಾರದ ಬೇಟೆ ನಡೆಸುತ್ತಾ 2ರಿಂದ 3 ಅಥವಾ 4 ತಿಂಗಳ ಕಾಲ ವಾಸ ಮಾಡಿ ಹಿಂತಿರುಗುತ್ತವೆ. ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ನಿರತರಾಗಿರುವ ವೈಲ್ಡ್‌ ಕ್ಯಾಟ್‌-ಸಿ ಹಾಗೂ ಭದ್ರಾ ವನ್ಯಜೀವಿ ಸಂರಕ್ಷಣಾ ತಂಡದ ಸದಸ್ಯರು 2020ರ ಸೆಪ್ಪೆಂಬರ್‌ನಿಂದ 2021ರ ಫೆಬ್ರವರಿವರೆಗೆ ಪಕ್ಷಿವೀಕ್ಷಣೆ ಹಾಗೂ ಎಣಿಕೆ ಕಾರ್ಯಕ್ರಮದಲ್ಲಿ 273 ವಿವಿಧ ಪ್ರಭೇದಗಳ ಹಕ್ಕಿಗಳನ್ನು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.

44 ಮಂದಿ ಆಸಕ್ತ ಪಕ್ಷಿ ವೀಕ್ಷಕರು ಈ ಕಾರ್ಯಕ್ರಮದಲ್ಲಿ ವನ್ಯಜೀವಿ ತಜ್ಞ ಡಿ.ವಿ. ಗಿರೀಶ್‌ ನೇತೃತ್ವದಲ್ಲಿ ಈ ವೀಕ್ಷಣೆ ಹಾಗೂ ಎಣಿಕೆ ಕಾರ್ಯಕ್ರಮ ಕೈಗೊಂಡಿದ್ದು ಹಿಂದಿನ ವರ್ಷಗಳಲ್ಲಿ ವಲಸೆ ಬಂದ ಹಕ್ಕಿಗಳ ಸಂಖ್ಯೆಗೆ ಹೋಲಿಸಿದರೆ ಈ ವರ್ಷ ಬಂದು ಕೆರೆಗಿಳಿದ, ಕೆರೆಯ ಸುತ್ತಲಲ್ಲಿ ಓಡಾಡುತ್ತಿದ್ದ ಈ ರೆಕ್ಕೆಯ ದ್ವಿಪಾದಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.

ಹಕ್ಕಿವೀಕ್ಷಣೆ ಹಾಗೂ ಎಣಿಕೆಯಲ್ಲಿ ಡಿ.ವಿ.ಗಿರೀಶ್‌ ನೇತೃತ್ವದಲ್ಲಿ ಶ್ರೀದೇವ್‌ ಹುಲಿಕೆರೆ, ಮನೀಶ್‌, ಗಿರಿಜಾಶಂಕರ್‌, ಚೇತನ್‌, ಸುಸ್ಮಿತಾ, ಸನ್ನಿಧಿ , ಜಿ.ಸಿ. ಘನಶ್ಯಾಮ್‌, ಚಂದನ, ಮನಸ್ವಿ, ಸ್ನೇಹನಾ, ತೇಜಸ್ವಿ, ರಮ್ಯಾ, ಝಬ್ಬಿಉಲ್ಲಾ, ಡಾ| ಸುಹಾಸ್‌, ಡಾ| ಸೂರ್ಯ, ಕೀರ್ತಿಕುಮಾರ್‌ ಸೇರಿದಂತೆ 44 ಮಂದಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next