ಚಿಕ್ಕಮಗಳೂರು: ಕೋವಿಡ್ ಹಬ್ಬುವುದನ್ನು ನಿಯಂತ್ರಿಸಲು ಹಳ್ಳಿಯ ಜನರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ಮುನ್ನೆಚರಿಕೆ ಕ್ರಮ ಕೈಗೊಳ್ಳಬೇಕೆಂದು ಶಾಸಕ ಸಿ.ಟಿ.ರವಿ ಆಯಾ ಗ್ರಾಪಂ ಪಿಡಿಒ ಮತ್ತು ಅಧ್ಯಕ್ಷರಿಗೆ ತಿಳಿಸಿದರು.
ಬುಧವಾರ ನಗರದ ತಾಪಂ ಆವರಣದಲ್ಲಿ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 34 ಗ್ರಾಪಂಗಳಲ್ಲಿ ಕೋವಿಡ್ ನಿರ್ವಹಣೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪಿಡಿಒ ಮತ್ತು ಅಧ್ಯಕ್ಷರೊಂದಿಗೆ ವಿಡಿಯೋ ಸಂವಾದ ನಡೆಸಿದರು.
ಗ್ರಾಮೀಣ ಭಾಗದಲ್ಲಿ ಕೋವಿಡ್ ಬಗ್ಗೆ ಜನಜಾಗೃತಿ ಮೂಡಿಸಬೇಕು. ಮನೆಯಿಂದ ಅನಗತ್ಯವಾಗಿ ಹೊರಬಾರದಂತೆ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ನಡೆಸುವ ಜತೆಗೆ ಲಕ್ಷಣ ಕಂಡು ಬಂದವರಿಗೆ ಹೆಲ್ತ್ ಕಿಟ್‌ಗಳನ್ನು ವಿತರಿಸಬೇಕು ಎಂದರು.
ಬೇರೆ ಜಿಲ್ಲೆ ಮತ್ತು ರಾಜ್ಯದಿಂದ ಬಂದವರನ್ನು ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ಗೆ ಒಳಪಡಿಸಬೇಕು. ಸೋಂಕು ಪಾಸಿಟಿವ್ ಕಂಡು ಬಂದರೆ ಅವರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಿನ ತಿಂಗಳಿಂದ ಪ್ರತಿ ಕುಟುಂಬದ ವ್ಯಕ್ತಿಗೆ 10ಕೆ.ಜಿ. ಪಡಿತರ ನೀಡಲು ಕ್ರಮ ವಹಿಸಿದ್ದು, ಅರ್ಹ ಪಡಿತರದಾರರಿಗೆ ಸಲ್ಲುವಂತೆ ಕ್ರಮ ವಹಿಸಬೇಕೆಂದರು.
ಗ್ರಾಪಂ ಭಾಗದಲ್ಲಿ ನೀರಿನ ಅಭಾವವಾಗದಂತೆ ನೋಡಿಕೊಳ್ಳಬೇಕು. ವೈದ್ಯಕೀಯ ತುರ್ತು ಪರಿಸ್ಥಿತಿ ಇರುವ ಹಿನ್ನೆಲೆ ಗ್ರಾಮ ಮಟ್ಟದಲ್ಲಿ ಎಲ್ಲರೂ ಸಮನ್ವಯತೆಯಿಂದ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿ ಕಾರಿ ತಾರಾನಾಥ್, ತಾಲೂಕು ವೈದ್ಯಾ ಧಿಕಾರಿ ಡಾ| ಸೀಮಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.