Advertisement

ಕಠಿಣ ಕರ್ಫ್ಯೂ; ಮನೆಯಲ್ಲೇ ಜನ ಲಾಕ್‌!

07:35 PM May 12, 2021 | Team Udayavani |

ಚಿಕ್ಕಮಗಳೂರು: ಕೊರೊನಾ ನಿಯಂತ್ರಣಕ್ಕೆ ಸರ್ಕಾರ ವಿ ಧಿಸಿರುವ ಕಠಿಣ ಕರ್ಫ್ಯೂ ಎರಡನೇ ದಿನ ಜಿಲ್ಲಾದ್ಯಂತ ಯಶಸ್ವಿಯಾಗಿದ್ದು, ಬಹುತೇಕ ಜನರು ಮನೆಯಲ್ಲೇ ಇದ್ದು ಕಾಲ ಕಳೆದರು. ಮೊದಲ ದಿನ ಕೆಲವೊಂದಿಷ್ಟು ಗೊಂದಲ, ಗಲಿಬಿಲಿಗೆ ಎಡೆಮಾಡಿಕೊಟ್ಟ ರೆ ಮಂಗಳವಾರ ಜನರು ಸ್ವಯಂಪ್ರೇರಿತವಾಗಿ ಮನೆಯಲ್ಲೇ ಉಳಿದರು.

Advertisement

ನಗರದ ಪ್ರಮುಖ ರಸ್ತೆಗಳೆಲ್ಲ ಖಾಲಿಯಾಗಿದ್ದವು.ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೂ ಮನೆಯ ಸಮೀಪದ ಮಾರುಕಟ್ಟೆ ಅಥವಾ ಅಂಗಡಿ- ಮುಂಗಟ್ಟುಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದು, ಎಂದಿನಂತೆ ಅಗತ್ಯ ವಸ್ತುಗಳ ಖರೀದಿ ನಡೆಸಿದರು.

ಬೇರೆ ದಿನಗಳಿಗೆ ಹೋಲಿಸಿದರೆ ಮಂಗಳವಾರ ಅಂಗಡಿಗಳತ್ತ ಮುಖ ಮಾಡಿದ ಜನರ ಸಂಖ್ಯೆಯೂ ಕಡಿಮೆಯಾಗಿತ್ತು. ಪೆಟ್ರೋಲ್‌ ಬಂಕ್‌, ಮೆಡಿಕಲ್‌ ಶಾಪ್‌, ಸರ್ಕಾರಿ ಕಚೇರಿ ಹಾಗೂ ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದ್ದು, ಸಮಯ ಮೀರುತ್ತಿದ್ದಂತೆ ಎಲ್ಲಾ ಅಂಗಡಿ- ಮುಂಗಟ್ಟುಗಳನ್ನು ಪೊಲೀಸರು ಮುಚ್ಚಿಸಿದರು. ವಾಹನಗಳಲ್ಲಿ ತೆರಳಿ ಅಗತ್ಯ ವಸ್ತುಗಳನ್ನು ತರಲು ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಜನರು ತಲೆಯ ಮೇಲೆ ಹೊತ್ತು ಮನೆಯ ಕಡೆ ಹೆಜ್ಜೆ ಹಾಕಿದರು.

ಸೋಮವಾರ ಪೊಲೀಸರ ಬಿಗಿ ನಿಲುವಿನಿಂದ ಕಂಗೆಟ್ಟ ಜನರು ಮಂಗಳವಾರ ಮನೆಯಿಂದ ಹೊರ ಬರಲು ಭಯಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸುಖಾಸುಮ್ಮನೆ ಹೊರ ಹೋಗಿ ದಂಡ ಕಟ್ಟೋದ್ಯಾಕೆ, ವಾಹನ ಸೀಜ್‌ ಮಾಡಿಸಿಕೊಳ್ಳುವುದ್ಯಾಕೆ ಎಂದು ಬಹುತೇಕ ಮಂದಿ ವಾಹನಗಳನ್ನು ಬದಿಗಿಟ್ಟು ಕಾಲ್ನಡಿಗೆಯಲ್ಲೇ ತೆರಳಿ ಅಗತ್ಯ ವಸ್ತುಗಳನ್ನು ಖರೀದಿಸಿದರು.

ಎಂದಿಗಿಂತ ಮಂಗಳವಾರ ಪಟ್ಟಣ ಪ್ರದೇಶದಲ್ಲಿ ವಾಹನ ಸಂಚಾರವು ಕಡಿಮೆ ಇದ್ದು, ಅಗತ್ಯ ತುರ್ತು ಅವಶ್ಯಕತೆಗಾಗಿ ಮಾತ್ರ ಜನರು ವಾಹನ ಬಳಕೆ ಮಾಡಿದರು. ನಗರದ ಪ್ರವೇಶ ದ್ವಾರಗಳಲ್ಲಿ ತೆರೆದಿರುವ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಬೆಳಗ್ಗೆಯೇ ಹಾಜರಾಗಿ ಅನಗತ್ಯ ಸಂಚಾರದ ಮೇಲೆ ಹದ್ದಿನ ಕಣ್ಣಿಟ್ಟಿದ್ದರು.

Advertisement

ತುರ್ತು ಸಂದರ್ಭದಲ್ಲಿ ವಾಹನಗಳಲ್ಲಿ ತಿರುಗಾಡುವರಿಗೆ ಮಾತ್ರ ಪೊಲೀಸರು ಅವಕಾಶ ಕಲ್ಪಿಸಿದರು. ಉಳಿದಂತೆ ಪೊಲೀಸರು ಜನರೊಟ್ಟಿಗೆ ಸಂಯಮದಿಂದ ವರ್ತಿಸಿ ಸುಖಾಸುಮ್ಮನೆ ಓಡಾಡದಂತೆ ತಿಳಿ ಹೇಳಿ ಕಳಿಸುತ್ತಿದ್ದರು.

ಮಂಗಳವಾರ ಬೆಳಗ್ಗೆ 10 ಗಂಟೆಯ ವೇಳೆಗೆ ಇಡೀ ನಗರದ ಚಿತ್ರಣವೇ ಬದಲಾಗಿ, ಎಲ್ಲಿ ನೋಡಿದರೂ ಖಾಲಿ ರಸ್ತೆಗಳು ಕಾಣಿಸುತ್ತಿದ್ದವು. ಅಲ್ಲೊಂದು ಇಲ್ಲೊಂದು ವಾಹನಗಳನ್ನು ಹೊರತುಪಡಿಸಿ ಸಂಚಾರ ಸಂಪೂರ್ಣ ಸ್ಥಗಿತ ಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next