Advertisement

ಕೊರೊನಾ ಕಠಿಣ ಕರ್ಫ್ಯೂ: ಕಾಫಿನಾಡು ಸ್ತಬ್ಧ

09:43 PM May 11, 2021 | Team Udayavani |

ಚಿಕ್ಕಮಗಳೂರು: ಕೋವಿಡ್‌ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ಕಠಿಣ ನಿಯಮ ವಿಧಿಸಿದ್ದು ಲಾಕ್‌ಡೌನ್‌ನ ಮೊದಲ ದಿನವಾದ ಸೋಮವಾರ ಇಡೀ ಕಾಫಿನಾಡು ಸ್ತಬ್ಧಗೊಂಡಿತ್ತು. ಸರ್ಕಾರದ ಆದೇಶ ಉಲ್ಲಂಘಿಸಿ ವಾಹನಗಳಲ್ಲಿ ಸಂಚರಿಸುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದರು. ಸರ್ಕಾರ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದು, ವಾಹನ ಬಳಸದೆ ನಡೆದುಕೊಂಡು ಬಂದು ಅಗತ್ಯ ವಸ್ತುಗಳನ್ನು ಖರೀದಿಸಬೇಕೆಂದು ಸೂಚಿಸಿದೆ.

Advertisement

ಈ ಹಿನ್ನೆಲೆಯಲ್ಲಿ ಬಹುತೇಕ ಜನರು ಮಾರುಕಟ್ಟೆಗೆ ನಡೆದುಕೊಂಡು ಬಂದು ಅಗತ್ಯ ವಸ್ತುಗಳನ್ನು ಖರೀದಿಸಿ ಮನೆ ಕಡೆಗೆ ಮರಳಿದರು. ಬೆಳಗ್ಗೆಯಿಂದಲೇ ರಸ್ತೆಗಳಿದ ಪೊಲೀಸರು, ಹೋಮ್‌ಗಾರ್ಡ್ಸ್‌ ಮತ್ತು ಎನ್‌ಸಿಸಿ ತರಬೇತಿ ಪಡೆದ ವಿದ್ಯಾರ್ಥಿಗಳು ಅನಗತ್ಯವಾಗಿ ಸಂಚರಿಸುತ್ತಿದ್ದ ನೂರಾರು ವಾಹನಗಳನ್ನು ತಡೆದು ಪರಿಶೀಲನೆ ನಡೆಸಿ ವಾಹನಗಳನ್ನು ಮಾಡಿ ದಂಡ ವಿಧಿಸಿದರು.

ನಿಗದಿತ ಅವ ಧಿ ಮುಗಿಯುತ್ತಿದ್ದಂತೆ ಜೀವರಕ್ಷಕ ಔಷ ಧ, ಆಸ್ಪತ್ರೆ, ಸರ್ಕಾರಿ ಕಚೇರಿ, ಬ್ಯಾಂಕ್‌ ಸೇವೆ ಎಂದಿನಂತೆ ಕಾರ್ಯ ನಿರ್ವಹಿಸಿದವು. ಉಳಿದಂತೆ ಎಲ್ಲಾ ಅಂಗಡಿ- ಮುಂಗಟ್ಟುಗಳನ್ನು ಪೊಲೀಸರು ಮುಚ್ಚಿಸಿದರು.

11 ಗಂಟೆ ಬಳಿಕ ಇಡೀ ಚಿಕ್ಕಮಗಳೂರು ನಗರವೇ ಸ್ತಬ್ಧಗೊಂಡು ಜನರಿಂದ ತುಂಬಿರುತ್ತಿದ್ದ ರಸ್ತೆಗಳೆಲ್ಲ ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.

ಬೆಳ್ಳಂ ಬೆಳಗ್ಗೆಯೇ ರಸ್ತೆಗಿಳಿದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ: ಕಳೆದ ಕೊರೊನಾ ಕರ್ಫ್ಯೂ ಸಂದರ್ಭದಲ್ಲಿ ಕುಂಟುನೆಪಗಳನ್ನು ಹೇಳಿಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ವಾಹನ ಸವಾರರಿಗೆ ಬಿಗ್‌ ಶಾಕ್‌ ಕಾದಿತ್ತು. ಸೋಮವಾರದಿಂದ ಅನಗತ್ಯವಾಗಿ ವಾಹನ ಸಂಚಾರ ನಡೆಸಬಾರದು ಎಂದು ಎಷ್ಟೇ ಮನವರಿಕೆ ಮಾಡಿಕೊಟ್ಟರೂ ಸುಖಾ ಸುಮ್ಮನೆ ತಿರುಗಾಡುವರ ಸಂಖ್ಯೆಗೇನು ಕಮ್ಮಿ ಇರಲಿಲ್ಲ, ಹಾಗೆ ತಿರುಗಾಡುವರಿಗೆ ಬಿಸಿಮುಟ್ಟಿಸಲು ಖುದ್ದಾಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ರಸ್ತೆಗಿಳಿದು ವಾಹನ ತಪಾಸಣೆ ನಡೆಸಿದರು.

Advertisement

ನಗರದ ಬಸ್‌ ನಿಲ್ದಾಣ ಸೇರಿದಂತೆ ವಿವಿಧೆಡೆ ವಾಹನ ತಪಾಸಣೆ ನಡೆಸಿದ ಜಿಲ್ಲಾ ಧಿ ಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಕಾರಣವಿಲ್ಲದೇ ಸುಖಾಸುಮ್ಮನೆ ವಾಹನ ಗಳಲ್ಲಿ ತಿರುಗಾಡುವರಿಗೆ ದಂಡ ವಿಧಿಸಿ ವಾಹನಗಳನ್ನು  ಮಾಡಿದರು.

ನಗರಾದ್ಯಂತ ಪೊಲೀಸರ ಸರ್ಪಗಾವಲು: ವಾಹನ ಸವಾರರ ಕಳ್ಳಾಟ ತಡೆಗಟ್ಟಲು ಪೊಲೀಸರು ಫುಲ್‌ ಅಲರ್ಟ್‌ ಆಗಿದ್ದರು. ನಗರದ ಎಐಟಿ ವೃತ್ತ, ಮಲ್ಲಂದೂರು ಸರ್ಕಲ್‌, ಬೋಳರಾಮೇಶ್ವರ ದೇವಸ್ಥಾನ, ಹಿರೇಮಗಳೂರು ಮತ್ತು ರಾಂಪುರದಲ್ಲಿ ಚೆಕ್‌ಪೋಸ್ಟ್‌ಗಳನ್ನು ಬಿಗಿಗೊಳಿಸಲಾಗಿತ್ತು. ನಗರದ ಒಳ ಪ್ರವೇಶಿಸುವ ಮತ್ತು ನಗರದಿಂದ ಹೊರಹೋಗುವ ಪ್ರತಿಯೊಂದು ವಾಹನಗಳನ್ನು ತಡೆದು ತಪಾಸಣೆ ನಡೆಸಿದರು. ಸಕಾರಣವಿಲ್ಲದೆ ತಿರುಗಾಡುತ್ತಿದ್ದರೆ ಅಂತವರ ವಾಹನಗಳನ್ನು ವಶಕ್ಕೆ ಪಡೆದರು.

ಮಧ್ಯಾಹ್ನದ ವೇಳೆಗೆ 317ಕ್ಕೂ ಹೆಚ್ಚು ದ್ವಿಚಕ್ರ ವಾಹನ ಮತ್ತು 35ಕ್ಕೂ ಹೆಚ್ಚು ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನು ವಶಕ್ಕೆ ಪಡೆದರು. ಮುಖ್ಯ ರಸ್ತೆಗಳನ್ನು ಹೊರತುಪಡಿಸಿ ಗಲ್ಲಿ ರಸ್ತೆಗಳನ್ನು ಬಂದ್‌ ಮಾಡಿದ್ದರು. ಪೊಲೀಸರ ಕಾರ್ಯಕ್ಕೆ ಗೃಹ ರಕ್ಷಕದಳ ಮತ್ತು ಎನ್‌ಸಿಸಿ ತರಬೇತಿ ಪಡೆದ ವಿದ್ಯಾರ್ಥಿಗಳು ಕೈ ಜೋಡಿಸಿದರು.

ಇಡೀ ಕಾಫಿನಾಡು ಸ್ತಬ್ಧ: ಬೆಳಗ್ಗೆ 10 ಗಂಟೆಯ ಬಳಿಕ ಸಾರ್ವಜನಿರ ಓಡಾಟಕ್ಕೆ ಜಿಲ್ಲಾಡಳಿತ ಬ್ರೇಕ್‌ ಹಾಕಿದ್ದರಿಂದ ಅಲ್ಲೊಂದು ಇಲ್ಲೊಂದು ಓಡಾಡುತ್ತಿದ್ದ ವಾಹನಗಳ ಸಂಚಾರವೂ ಸ್ತಬ್ಧಗೊಂಡಿತು. ಚಿಕ್ಕಮಗಳೂರು ನಗರ ಸೇರಿದಂತೆ ತಾಲೂಕು ಕೇಂದ್ರಗಳಲ್ಲೂ ಜನಸಂಚಾರ ಮತ್ತು ವಾಹನ ಸಂಚಾರ ಸ್ತಬ್ಧಗೊಂಡಿತ್ತು. ನಗರದ ಪ್ರಮುಖ ರಸ್ತೆಗಳೆಲ್ಲಿ ಸಂಚಾರವಿಲ್ಲದೇ ಬಿಕೋ ಎನ್ನುತ್ತಿದ್ದವು. ಸರ್ಕಾರಿ ಕಚೇರಿಯಲ್ಲಿ ಶೇ.50ರಷ್ಟು ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದರು.

ಗ್ರಾಮಗಳಲ್ಲೇ ಉಳಿದ ಜನರು: ಗ್ರಾಮಗಳಿಂದ ನಿತ್ಯ ಸಾವಿರಾರು ಮಂದಿ ತಮ್ಮ ಕೆಲಸ ಕಾರ್ಯಗಳಿಗಾಗಿ ಪಟ್ಟಣಕ್ಕೆ ಬರುತ್ತಿದ್ದರು. ಸರ್ಕಾರ ಬಿಗಿ ಲಾಕ್‌ಡೌನ್‌ ವಿಧಿ ಸಿದ್ದರಿಂದ ವಾಹನ ಸಂಚಾರಕ್ಕೆ ಬ್ರೇಕ್‌ ಹಾಕಿದ್ದರಿಂದ ಗ್ರಾಮಸ್ಥರು ಪಟ್ಟಣದ ಕಡೆ ಮುಖ ಮಾಡದೇ ಗ್ರಾಮಗಳಲ್ಲೇ ಉಳಿದುಕೊಂಡರು.

ಊಟಕ್ಕೆ ಪರದಾಟ: ಕೊರೊನಾ ಕರ್ಫ್ಯೂ ಅವಧಿಯಲ್ಲಿ ಹೊಟೇಲ್‌ಗ‌ಳಲ್ಲಿ ಪಾರ್ಸೆಲ್‌ ನೀಡಲು ಅವಕಾಶ ನೀಡಿತ್ತು. ಸರ್ಕಾರ ಇಂದಿನಿಂದ ಜಾರಿಗೆ ತಂದ ಲಾಕ್‌ಡೌನ್‌ ಅವಧಿಯಲ್ಲಿ ಹೊಟೇಲ್‌ಗ‌ಳಲ್ಲಿ ಪಾರ್ಸೆಲ್‌ ನೀಡಲು ಅವಕಾಶ ನೀಡದಿದ್ದರಿಂದ ಸರ್ಕಾರಿ ಇಲಾಖೆ ಸಿಬ್ಬಂದಿ, ಪೊಲೀಸ್‌ ಸಿಬ್ಬಂದಿ ಸೇರಿದಂತೆ ಇತರರು ಮಧ್ಯಾಹ್ನದ ಊಟಕ್ಕೂ ಪರದಾಡುವ ಸ್ಥತಿ ಏರ್ಪಟ್ಟಿತ್ತು. ಇಂದಿರಾ ಕ್ಯಾಟೀನ್‌ನಲ್ಲಿ ಊಟ- ಉಪಾಹಾರ ನೀಡಲು ಅವಕಾಶ ನೀಡಿದ್ದು, ಬಹುತೇಕ ಮಂದಿ ಊಟ, ಉಪಹಾರವನ್ನು ಇಂದಿರಾ ಕ್ಯಾಟೀನ್‌ ಮೂಲಕ ಪಾರ್ಸೆಲ್‌ ಪಡೆದುಕೊಂಡು ತಮ್ಮ ಹಸಿವು ನೀಗಿಸಿಕೊಂಡರು.

ಆಟವಾಡಿ ಕಾಲ ಕಳೆದ ಜನರು: ಕೊರೊನಾ ತಡೆಗೆ ಸರ್ಕಾರ ಬಿಗಿ ಕ್ರಮ ಕೈಗೊಂಡಿ ದ್ದು ಎಲ್ಲಾ ಚಟುವಟಿಕೆಗೂ ನಿರ್ಬಂಧ ವಿ ಧಿಸಿದೆ. ಕೆಲಸವಿಲ್ಲದೆ ಮನೆಯಲ್ಲಿರುವ ಮನೆ ಮಂದಿಯೆಲ್ಲ ಹೇಗಪ್ಪ ಕಾಲ ಕಳೆಯುವುದು ಎಂದು ಗುನುಗುತ್ತಾ, ಮನೆ ಮಂದಿ ಮತ್ತು ಮಕ್ಕಳೊಂದಿಗೆ ಆಟವಾಡಿ ಕಾಲ ಕಳೆದರು.

ಆಸ್ಪತ್ರೆ ಸಿಬ್ಬಂದಿ ಪರದಾಟ: ನಗರದ ಅನೇಕ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ವಾಹನವಿಲ್ಲದೆ ಕೆಲಸಕ್ಕೆ ಹಾಜರಾಗಲು ಪರದಾಡಬೇಕಾಯಿತು. ಬಹುತೇಕ ರು ನಗರದ ಹೊರವಲಯದಲ್ಲಿ ಮನೆ ಮಾಡಿಕೊಂಡಿದ್ದು, ಆಟೋ, ಟ್ಯಾಕ್ಸಿಗಳ ಮೂಲಕ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ಲಾಕ್‌ಡೌನ್‌ ಆರಂಭಗೊಳ್ಳುತ್ತಿದ್ದಂತೆ ಆಟೋ ವೊಂದನ್ನು ಗೊತ್ತುಪಡಿಸಿಕೊಂಡು ಸೇವೆಗೆ ಬಂದು ಮುಗಿದ ಬಳಿಕ ಮನೆಗೆ ಆಟೋದಲ್ಲೆ ತೆರಳುತ್ತಿದ್ದರು. ಸಿಬ್ಬಂದಿಗಳನ್ನು ಹೊತ್ತು ತಂದ ಆಟೋಗೆ ಪೊಲೀಸರು 800ರೂ. ದಂಡ ವಿಧಿ ಸಿದ್ದು ಹೇಗೆ ಓಡಾಡುವುದು ಎಂಬ ಚಿಂತೆ ಅವರನ್ನು ಕಾಡುತ್ತಿದೆ.

ಕಾರ್ಮಿಕರ ಪರದಾಟ: ದುಡಿದು ಅಂದು ತಿನ್ನುವ ಕಾರ್ಮಿಕರ ಪಾಡು ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಕೆಲಸಕ್ಕೆ ಹೋಗದೆ ಬದುಕು ನಡೆಸಲು ಆಗುತ್ತಿಲ್ಲ, ಕೆಲಸಕ್ಕೆ ಹೋಗಲು ವಾಹನವಿಲ್ಲದಂತಹ ಪರಿಸ್ಥಿತಿ ಲಾಕ್‌ಡೌನ್‌ನ ಮೊದಲ ದಿನವೇ ಕಾರ್ಮಿಕರಿಗೆ ಬಿಸಿ ತುಪ್ಪವಾಗಿ ಬಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next