Advertisement

ಸಾಂತರಸರ ಕಾಲದ ವೀರಗಲ್ಲು ಪತ್ತೆ

10:50 PM May 10, 2021 | Team Udayavani |

ಬಾಳೆಹೊನ್ನೂರು: ಸಮೀಪದ ಬನ್ನೂರು ಗ್ರಾಪಂ ವ್ಯಾಪ್ತಿಯ ಹಲಸೂರಿನ ಕೊಳಲೆ ಮರಿಗೌಡರ ಕಾಫಿತೋಟದ ಹಿಂಭಾಗದಲ್ಲಿ ಹೊಯ್ಸಳರ ಮಾಂಡಲಿಕರಾದ ಕಳಸ ರಾಜ್ಯದ ಸಾಂತರ ದೊರೆಗಳ ಆಡಳಿತದ ಹನ್ನೆರಡನೇ ಶತಮಾನದ ಕಾಲದ್ದಾಗಿರಬಹುದಾದ ಮಲ್ಲಯುದ್ಧದ ಚಿತ್ರಣವಿರುವ ಅಪರೂಪದ ಎರಡು ವೀರಗಲ್ಲು ಸ್ಮಾರಕಗಳನ್ನು ಹವ್ಯಾಸಿ ಇತಿಹಾಸ ಸಂಶೋಧಕರಾದ ಎಚ್‌.ಆರ್‌.ಪಾಂಡುರಂಗ ಅವರು ಇತ್ತೀಚೆಗೆ ಸಂಶೋಧನೆ ಮಾಡಿ ಅಧ್ಯಯನ ನಡೆಸಿ ಪ್ರಾಚೀನ ಹಲಸೂರು (ಬಾಳೆಹೊನ್ನೂರು) ಪ್ರದೇಶದ ಇತಿಹಾಸದ ಮೇಲೆ ಹೊಸಬೆಳಕು ಚೆಲ್ಲಿದ್ದಾರೆ.

Advertisement

ಹಲಸೂರಿನ ಜನರು ಗ್ರಾಮದೇವತೆಗಳೆಂದು ಭಯ, ಭಕ್ತಿಯಿಂದ ಆರಾ ಸುವ ಶ್ರೀ ಕನ್ನಮ್ಮ- ಶ್ರೀ ಕಾಳಮ್ಮ ಎಂಬ ಅಕ್ಕ-ತಂಗಿ ದೈವಗಳೇ ಈ ಜೋಡಿ ವೀರಗಲ್ಲುಗಳಾಗಿವೆ. ಲತಾಮಂಟಪದ ವೇದಿಕೆಯ ಮೇಲಿರುವ ಎಡಭಾಗದ ಒಂದನೇ ವೀರಗಲ್ಲು 5.9 ಅಡಿ ಎತ್ತರ,3.00ಅಡಿ ಅಗಲ,0.10 ಅಡಿ ಅಳತೆಯ ಬಳಪದ ಕಲ್ಲಿನ ಈ ವೀರಗಲ್ಲು ನಾಲ್ಕು ಹಂತದ ಚಿತ್ರಣ ಹೊಂದಿದೆ. ಕೆಳಹಂತದಲ್ಲಿ ರಾಜಛತ್ರಿ ಸಹಿತ ವೀರನೊಬ್ಬ ಪಲ್ಲಕ್ಕಿಯಲ್ಲಿ ಕುಳಿತು ಯುದ್ಧಕ್ಕೆ ಹೊರಟ ಬಲಭಾಗದ ಚಿತ್ರಣ ಹಾಗೂ ಎಡಭಾಗದಲ್ಲಿ ಮಲ್ಲಯುದ್ಧದಲ್ಲಿ ತೊಡಗಿದ ಮಲ್ಲರಿಬ್ಬರ ವಿಶಿಷ್ಟ ಹೋರಾಟದ ಭಂಗಿಯ ಚಿತ್ರಣವಿದೆ.

ಎರಡನೇ ಹಂತದಲ್ಲಿ ರಾಜಛತ್ರಿ ಸಹಿತ ಬಿಲ್ಲುಗಾರ ವೀರ ಆನೆಮೇಲೆ ಕುಳಿತು ಯುದ್ಧ ಮಾಡುವ ಚಿತ್ರಣ. ಮೂರನೇ ಹಂತದಲ್ಲಿ ನಾಲ್ಕು ಜನ ದೇವಕನ್ಯೆಯರು ಯುದ್ಧದಲ್ಲಿ ವೀರಮರಣ ಹೊಂದಿದ ಗಜಪಡೆಯ ಬಿಲ್ಗಾರ ಯೋಧನನ್ನು ದೇವಲೋಕ (ಶಿವಸಾನಿಧ್ಯ)ಕ್ಕೆ ಕರೆದೊಯ್ಯುವ ಚಿತ್ರಣ. ವೀರಗಲ್ಲಿನ ಅಗ್ರ ಭಾಗದಲ್ಲಿ ಲಿಂಗಾರ್ಚನೆ ಮಾಡುತ್ತಿರುವ ಜಟಧಾರಿ ಕಾಳಾಮುಖಯತಿ, ಹಸುಕರು, ನಂದಿ ಹಾಗೂ ಮೇಲ್ಭಾಗದಲ್ಲಿ ಸೂರ್ಯಚಂದ್ರರ ಚಿತ್ರಣವಿದೆ.

ಈ ಶಾಸನ ರಹಿತ ವೀರಗಲ್ಲು ಸಾಂತರರ ಕಾಲದಲ್ಲಿ ನಡೆದ ಯಾವುದೋ ಯುದ್ಧದಲ್ಲಿ ಮರಣ ಹೊಂದಿದ ಸೇನಾಪತಿಯೊಬ್ಬನ ವೀರಮರಣದ ವಿಶಿಷ್ಟ ಸ್ಮಾರಕವಾಗಿದೆ ಎಂದು ಸಂಶೋಧಕ ಪಾಂಡುರಂಗ ಹೇಳುತ್ತಾರೆ.

ಬಲಭಾಗದ ಎರಡನೇ ವೀರಗಲ್ಲು: 5.9 ಅಡಿ ಎತ್ತರ 2.9 ಅಡಿ ಅಗಲ, 0.5 ಇಂಚು ದಪ್ಪ ಅಳತೆಯ ಬಳಪದ ಕಲ್ಲಿನ ಈ ವೀರಗಲ್ಲು ಸಹ ನಾಲ್ಕು ಹಂತದ ಚಿತ್ರಣ ಹೊಂದಿದೆ. ಕೆಳಹಂತದ ಬಲಭಾಗದಲ್ಲಿ ಇಬ್ಬರು ಯೋಧರು ಧನುರ್ಧಾರಿಗಳಾಗಿ ಯುದ್ಧಕ್ಕೆ ಹೋಗುತ್ತಿರುವ ಚಿತ್ರಣ ಹಾಗೂ ಎಡಭಾಗದಲ್ಲಿ ಇಬ್ಬರು ಮಲ್ಲರ ಮಲ್ಲಯುದ್ಧದ ವಿಶಿಷ್ಟ ಭಂಗಿಯ ಹೋರಾಟದ ಚಿತ್ರಣ. ಎರಡನೇ ಹಂತದಲ್ಲಿ ರಾಜಛತ್ರಿ ಸಹಿತ ರಾಜಪ್ರಮುಖ ಅಥವಾ ಸೇನಾಪತಿ ಪಲ್ಲಕ್ಕಿಯಲ್ಲಿ ಕುಳಿತು ಯುದ್ಧಕ್ಕೆ ಹೋಗುತ್ತಿರುವ ಚಿತ್ರಣವಿದೆ. ಮೂರನೇ ಹಂತದಲ್ಲಿ ಪಲ್ಲಕ್ಕಿಯಲ್ಲಿ ಕುಳಿತು ಯುದ್ಧಕ್ಕೆ ಹೋಗಿದ್ದ ಧನುರ್ಧಾರಿ ವೀರ ಕಾಳಗದಲ್ಲಿ ವೀರಮರಣ ಹೊಂದಿದ ನಿಮಿತ್ತ ನಾಲ್ವರು ದೇವ ಕನ್ಯೆಯರು ಅವನನ್ನು (ಶಿವಸಾನಿಧ್ಯ) ಕ್ಕೆ ಕರೆದೊಯ್ಯವ ಚಿತ್ರಣವಿದೆ. ವೀರಗಲ್ಲಿನ ಅಗ್ರಭಾಗದಲ್ಲಿ ಲಿಂಗಾರ್ಚನೆ ಮಾಡುತ್ತಿರುವ ಜಟಾಧಾರಿ ಕಾಳಾಮುಖ ಶೈವಯತಿ, ಹಸುಕರು, ಶಿವಗಣ ನಂದೀಶ್ವರ ಹಾಗೂ ಮೇಲೆ ಸೂರ್ಯಚಂದ್ರರ ಚಿತ್ರಣವಿದೆ. ಈ ಶಾಸನರಹಿತ ವೀರಗಲ್ಲೂ ಸಹಾ ಸಾಂತರಸರ ಕಾಲದಲ್ಲಿ ನಡೆದ ಯಾವುದೋ ಯುದ್ಧದಲ್ಲಿ ವೀರಮರಣ ಹೊಂದಿದ ಸೇನಾಪತಿಯೊಬ್ಬನ ವೀರಮರಣದ ವಿಶಿಷ್ಟ ಸ್ಮಾರಕವಾಗಿದೆಯೆಂದು ಸಂಶೋಧಕ ಪಾಂಡುರಂಗ ತಿಳಿಸಿದರು.

Advertisement

ವೀರಗಲ್ಲು ಗಳ ಕ್ಷೇತ್ರಕಾರ್ಯದಲ್ಲಿ ಆಟೋ ಸತೀಶ್‌ ಹಲಸೂರು, ಆಟೋ ಕಿರಣ್‌ ,ಗೊಡ್ಲುಗದ್ದೆ ಲಕ್ಷ್ಮಣ ಗೌಡ, ಆಯೂರು ರಾಘವೇಂದ್ರ ಭಟ್‌, ಅರ್ಚಕ ಎಚ್‌. ಎಸ್‌. ಸುಬ್ರಹ್ಮಣ್ಯ ಭಟ್‌ ಸಹಕಾರ ನೀಡಿದರು. ಇತಿಹಾಸ ವಿದ್ವಾಂಸರಾದ ಡಾ| ಆರ್‌. ಶೇಷಶಾಸ್ತ್ರಿ , ಡಾ| ಎಂ.ಜಿ. ಮಂಜುನಾಥ್‌, ಡಾ| ಎಚ್‌.ಎಸ್‌. ಗೋಪಾಲ ರಾವ್‌ ಅವರು ಅಧ್ಯಯನಕ್ಕೆ ಮಾರ್ಗದರ್ಶನ ನೀಡಿದ್ದಾರೆ ಎಂದು ಸಂಶೋಧಕ ಎಚ್‌.ಆರ್‌. ಪಾಂಡುರಂಗ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next