ಚಿಕ್ಕಮಗಳೂರು: ಕೋಮುದ್ವೇಷದ ಮಾತಾಡಿದ ಮತ್ತು ಸರ್ಕಾರಿ ಅಧಿ ಕಾರಿಯನ್ನು ನಿಂದಿಸಿದ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ಸತೀಶ್ ರೆಡ್ಡಿಯನ್ನು ಶೀಘ್ರವೇ ಬಂಧಿಸಬೇಕೆಂದು ಒತ್ತಾಯಿಸಿ ಸರ್ವಪಕ್ಷಗಳ ಮುಖಂಡರು ನಗರದ ಮಹಾತ್ಮ ಗಾಂ ಧಿ ಉದ್ಯಾನವನದಲ್ಲಿ ಧರಣಿ ನಡೆಸಿದರು.
ಮಹಾತ್ಮ ಗಾಂ ಧೀಜಿ ಉದ್ಯಾನವನದಲ್ಲಿ ಸಮಾವೇಶಗೊಂಡ ಕಾಂಗ್ರೆಸ್, ಸಿಪಿಐ, ಜೆಡಿಎಸ್, ಬಿಎಸ್‌ಪಿ ಮುಖಂಡರು ತೇಜಸ್ವಿ ಸೂರ್ಯ ಮತ್ತು ಸತೀಶ್ ರೆಡ್ಡಿಯನ್ನು ಬಂಧಿಸಬೇಕು ಮತ್ತು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಹಾಗೂ ಬೆಡ್ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು. ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಎಂ.ಎಲ್. ಮೂರ್ತಿ ಮಾತನಾಡಿ, ಸಂಸದ ತೇಜಸ್ವಿ ಸೂರ್ಯ ತಮಗೆ ಕಡಿಮೆಯಾಗುತ್ತಿರುವ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಒಂದು ಸಮುದಾಯದ ಯುವಕರ ಹೆಸರನ್ನು ಹೇಳುವ ಮೂಲಕ ಅವರ ತಲೆ ಮೇಲೆ ಕಲ್ಲು ಎತ್ತಿ ಹಾಕಿಕೊಂಡಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೋವಿಡ್ ನಿಯಂತ್ರಿಸಲು ವಿಫಲವಾಗಿದ್ದು, ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ರಾಜ್ಯದ ಜನರ ಗಮನ ಬೇರೆಡೆ ಸೆಳೆಯಲು ರಾಜಕೀಯ ದುರುದ್ದೇಶದಿಂದ ಕೋಮುದ್ವೇಷ ಎಬ್ಬಿಸಲು ಕೈ ಹಾಕಿದೆ ಎಂದರು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್. ದೇವರಾಜ್ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರನ್ನು ಖುರ್ಚಿಯಿಂದ ಇಳಿಸುವ ಹುನ್ನಾರ ಅವರ ಪಕ್ಷದಿಂದ ನಡೆಯುತ್ತಿದ್ದು, ಟೈಬಾಂಬ್ ಕ್ಸ್ ಮಾಡಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಬೆಡ್‌ಬ್ಲಾಕ್ ಧಂದೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು. ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ ಮಾತನಾಡಿ, ಕೋವಿಡ್ ವಾರ್ ರೂಂನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಒಂದು ಸಮುದಾಯದ 17 ಯುವಕರನ್ನು ಕೆಲಸದಿಂದ ತೆಗೆದುಹಾಕಿದ್ದು ಮತ್ತೆ ಅವರನ್ನು ಕೆಲಸಕ್ಕೆ ನೇಮಿಸಿಕೊಳ್ಳಬೇಕು ಎಂದರು. ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್, ಸಿಪಿಐನ ಬಿ. ಅಮ್ಜದ್ ಮಾತನಾಡಿದರು.
ಧರಣಿಯಲ್ಲಿ ವಿವಿಧ ಪಕ್ಷ ಮತ್ತು ಸಂಘಟನೆ ಮುಖಂಡರಾದ ಚಂದ್ರಪ್ಪ, ಪರಮೇಶ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಅಣ್ಣಯ್ಯ, ಹುಣಸೆಮಕ್ಕಿ ಲಕ್ಷ್ಮಣ್, ಕೆ.ಆರ್. ಗಂಗಾಧರ, ಸಹೋದರ ಸಮಿತಿ ಕೆ.ಬಿ. ಸುಧಾ ಇದ್ದರು.