Advertisement

ಕಾಡಾನೆ ದಾಳಿಗೆ ಬಲಿಯಾದ ಅರಣ್ಯ ರಕ್ಷಕನ ಅಂತ್ಯಕ್ರಿಯೆ

10:39 PM May 09, 2021 | Team Udayavani |

ಆಲ್ದೂರು: ಕಾಡಾನೆ ದಾಳಿಗೆ ತುತ್ತಾಗಿ ದುರ್ಮರಣಕ್ಕೀಡಾದ ಆಲ್ದೂರಿನ ಮೇದರ ಬೀದಿಯ ವಾಸಿ ಅರಣ್ಯ ರಕ್ಷಕ ಪುಟ್ಟರಾಜು ಅವರ ಅಂತ್ಯಕ್ರಿಯೆ ಶುಕ್ರವಾರ ರಾತ್ರಿ ಶೋಕಸಾಗರ ನಡುವೆ ಜರುಗಿತು. ಶುಕ್ರವಾರ ಬೆಳಗ್ಗೆ ಹಾಂದಿ ಗ್ರಾಮದ ಸಮೀಪ ಎಸ್ಟೇಟ್‌ ಒಂದರಲ್ಲಿ ಕಾಡಾನೆಯನ್ನು ಓಡಿಸಲು ಹೋದ ಸಂದರ್ಭದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಪುಟ್ಟರಾಜು ಸಾವನ್ನಪ್ಪಿದ್ದರು.

Advertisement

ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಮನೆಗೆ ತಂದಾಗ ಶೋಕದ ಕಟ್ಟೆಯೊಡೆಯಿತು. ತಾಯಿ, ಹೆಂಡತಿ, ತಮ್ಮಂದಿರು, ತಂಗಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು. ಪುಟ್ಟರಾಜು ಅವರ ತಾಯಿ ತನ್ನ ಮಗನ ಶವದ ಮೇಲೆ ಬಿದ್ದು ಕಣ್ಣೀರು ಸುರಿಸಿದ ದೃಶ್ಯ ನೆರೆದಿದ್ದವರ ಕಣ್ಣಂಚಲ್ಲಿ ನೀರು ತರಿಸಿತು. ಪತಿಯನ್ನು ಕಳೆದುಕೊಂಡ ಪುಟ್ಟರಾಜು ಅವರ ಪತ್ನಿ ತನ್ನ 2 ಪುಟ್ಟ ಮಕ್ಕಳೊಂದಿಗೆ ಕಣ್ಣೀರಿಟ್ಟು ಗೋಳಾಡುತ್ತಿದ್ದ ದೃಶ್ಯ ನೆರೆದಿದ್ದವರ ಮನ ಕಲಕಿತು.

ಪುಟ್ಟರಾಜ ಅವರ ಅಕಾಲಿಕ ನಿಧನದಿಂದ ಅವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದ್ದು, ಶೋಕಸಾಗರ ನಡುವೆ ಶುಕ್ರವಾರ ರಾತ್ರಿ ಅಂತ್ಯಕ್ರಿಯೆ ಜರುಗಿತು. ಚಿಕ್ಕಮಗಳೂರು ಅರಣ್ಯ ಸಂರಕ್ಷಣಾ‌ ಕಾರ ಸುನಿಲ್‌ ಪನ್ವರ್‌, ಚಿಕ್ಕಮಗಳೂರು ಎಸಿಎಫ್‌ ಮುದ್ದಣ್ಣ, ಮೂಡಿಗೆರೆ ಎಸಿಎಫ್‌ ನಿರ್ಮಲ, ಆಲ್ದೂರು ಆರ್‌ ಎಫ್‌ಒ ಮೋಹನ್‌ನಾಯಕ್‌, ಮೂಡಿಗೆರೆ ಆರ್‌ ಎಫ್‌ಒ ಮೋಹನ್‌ ಸೇರಿದಂತೆ ಇಲಾಖೆಯ ಎಲ್ಲಾ ಸಿಬ್ಬಂದಿ ಪುಟ್ಟರಾಜು ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ನೋವಿನ ವಿದಾಯ ಹೇಳಿದರು.

ಪುಟ್ಟರಾಜು ಅವರ ಸಹೋದ್ಯೋಗಿಗಳು ತಮ್ಮ ಜೊತೆಗಾರನನ್ನು ಕಳೆದುಕೊಂಡಿದ್ದು ತಮ್ಮ ಸ್ನೇಹಿತನ ಅಂತಿಮ ದರ್ಶನ ಪಡೆದು ಕಣ್ಣೀರಾದರು.

Advertisement

Udayavani is now on Telegram. Click here to join our channel and stay updated with the latest news.

Next