ಚಿಕ್ಕಮಗಳೂರು: ಕೋವಿಡ್ ನಿಯಂತ್ರಣಕ್ಕೆ ಸಿಲುಕದ ಪರಿಸ್ಥಿತಿ ತಲುಪಿದೆ. ಸೋಂಕಿತರು ಚಿಕಿತ್ಸೆ ಸಿಗದೆ ಮೃತಪಡುತ್ತಿದ್ದಾರೆ. ಆದ್ದರಿಂದ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕಠಿಣ ಲಾಕ್‌ಡೌನ್‌ಗೆ ಮುಂದಾಗಬೇಕೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಒತ್ತಾಯಿಸಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರು ಮತ್ತು ಸರ್ಕಾರದ ಮುಖ್ಯ ಕಾರ್ಯ ದರ್ಶಿ ಹೇಳಿಕೆಯಲ್ಲಿ ಗೊಂದಲವಿದೆ. ಇದರಿಂದ ಜನರು ಗೊಂದಲಕ್ಕೆ ಒಳಗಾಗಿದ್ದಾರೆ. ಸರ್ಕಾರದಲ್ಲಿ ಸಮನ್ವಯತೆ ಇಲ್ಲದಿರುವುದು ಎದ್ದು ಕಾಣುತ್ತಿದೆ ಎಂದರು.
ಸೋಂಕು ನಿಯಂತ್ರಣಕ್ಕೆ ದೆಹಲಿ ಮುಖ್ಯಮಂತ್ರಿ ಮೂರನೇ ಬಾರಿ ಲಾಕ್‌ಡೌನ್ ವಿ ಧಿಸಿದ್ದಾರೆ. ಆದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪದೇ ಪದೇ ಕೇಂದ್ರದ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ. ರಾಜ್ಯದ ಒಳಿತಿಗೆ ಏನು ತೀರ್ಮಾನ ತೆಗೆದುಕೊಳ್ಳಬೇಕು ಎನ್ನುವುದು ಮುಖ್ಯಮಂತಿಗಳಿಗೆ ಗೊತ್ತಿರಬೇಕು. ಈ ಗೊಂದಲದಿಂದ ರಾಜ್ಯದ ಜನರು ಪರಿತಪಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಉಲ್ಬಣವಾಗಲಿದೆ ಎಂದು ತಜ್ಞರ ಸಮಿತಿ ಒಂದು ತಿಂಗಳ ಹಿಂದೆಯೇ ಎಚ್ಚರಿಸಿತ್ತು. ಪ್ರತೀ ದಿನ 50 ಸಾವಿರಕ್ಕೂ ಹೆಚ್ಚು ಸೋಂಕಿತರು ಕಂಡು ಬರಲಿದ್ದಾರೆ ಎಂದು ಹೇಳಿದ್ದರು. ಸರ್ಕಾರ ಯಾವುದೇ ಪೂರ್ವಸಿದ್ಧತೆ ಮಾಡಿಕೊಳ್ಳದೆ ಇಂದು ಜನರು ಬೀದಿಯಲ್ಲಿ ಸಾಯುವ ಪರಿಸ್ಥಿತಿ ಬಂದಿದೆ. ಇಷ್ಟರ ಮೇಲೂ ಸರ್ಕಾರ ಎಚ್ಚೆತ್ತುಕೊಳ್ಳದೆ ಕೇಂದ್ರ ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿದೆ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.
ಅಂತರ್ ಜಿಲ್ಲೆ ಸಂಚಾರ ನಿರ್ಬಂಧಿ ಸಿ ಸರ್ಕಾರ ಆದೇಶ ಹೊರಡಿಸಿದ್ದು ಸೋಮವಾರದಿಂದ ಜಾರಿಯಾಗಲಿದೆ. ಪಟ್ಟಣ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೆ ಜನರು ಬರುತ್ತಿದ್ದು, ಹಳ್ಳಿಗಳ ಪರಿಸ್ಥಿತಿ ಇನಷ್ಟು ಕಷ್ಟವಾಗಲಿದೆ. ಈಗಾಗಲೇ ಹಳ್ಳಿಗಳಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಸೋಂಕು ಹೆಚ್ಚಳವಾದರೆ ಪರಿಸ್ಥಿತಿ ಮತ್ತಷ್ಟು ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ಲಾಕ್‌ಡೌನ್‌ಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಸಚಿವ ಸೋಮಶೇಖರ್ ಕೋವಿಡ್‌ನಿಂದ ಮೃತಪಟ್ಟ ಕುಟುಂಬಕ್ಕೆ 50 ಸಾವಿರ ಪರಿಹಾರ ನೀಡುವುದಾಗಿ ಹೇಳುತ್ತಿದ್ದು, ನಿಮ್ಮ ಪರಿಹಾರ ಯಾರಿಗೆ ಬೇಕು. ಮೊದಲು ಸೋಂಕಿತರಿಗೆ ಚಿಕಿತ್ಸೆ ನೀಡಲು ಹಾಸಿಗೆ ಮತ್ತು ಆಕ್ಸಿಜನ್ ಒದಗಿಸಿ. ತೇಜಸ್ವಿ ಸೂರ್ಯ ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ಪತ್ತೆ ಹಚ್ಚಿದ್ದು, ಕೇಂದ್ರ ಮತ್ತು ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ. ಆದರೂ ಇಂತಹ ಘಟನೆ ನಡೆಯುತ್ತಿದೆ ಎಂದರೆ ಈ ಸರ್ಕಾರಕ್ಕೆ ಮುಜುಗರವಾಗಬೇಕು ಎಂದರು.