ಚಿಕ್ಕಮಗಳೂರು: ಹತ್ಯಾ ರಾಜಕಾರಣದಿಂದ ಪಕ್ಷದ ಬೆಳವಣಿಗೆಯನ್ನು ತಡೆಯಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಹತ್ಯೆ ಖಂಡನೀಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಫಲಿತಾಂಶ ಬಂದು 72ಗಂಟೆಗಳಲ್ಲಿ ಬಿಜೆಪಿ ಕಚೇರಿ, ಕಾರ್ಯಕರ್ತರ ಮನೆ, ಅಂಗಡಿಗಳನ್ನು ಲೂಟಿ ಮಾಡಿ, 12 ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆ. 281ಕ್ಕೂ ಹೆಚ್ಚು ದೊಂಬಿ ಪ್ರಕರಣ ನಡೆದಿದೆ. ಕಾನೂನು, ಸುವ್ಯವಸ್ಥೆ ಕಾಪಾಡಬೇಕಾದ ಪಶ್ಚಿಮ ಬಂಗಾಳ ಸರ್ಕಾರ ಗೂಂಡಾಗಳಿಗೆ ಬೆನ್ನೆಲುಬಾಗಿ ನಿಂತು ಸಂವಿಧಾನಕ್ಕೆ ವಿರುದ್ಧವಾಗಿ ವರ್ತನೆ ಮಾಡಿದೆ ಎಂದರು.
ರಾಜಕೀಯ ಪಕ್ಷದ ಧ್ವನಿಯನ್ನು ಹತ್ಯೆಯ ಮೂಲಕ ಹತ್ತಿಕ್ಕಲು ಸಾಧ್ಯವಿಲ್ಲ. ಮತ್ತೆ ಹತ್ತು ಪಟ್ಟು ಸಾಮರ್ಥ್ಯದಿಂದ ಪಕ್ಷ ಬೆಳೆಯುತ್ತದೆ. ಈ ಹತ್ಯಾ ರಾಜಕಾರಣ ಕೊನೆಯಾಗಬೇಕು. ರಾಷ್ಟ್ರಪತಿಗಳು ಮಧ್ಯಪ್ರವೇಶ ಮಾಡಬೇಕೆಂದು ಮನವಿ ಮಾಡಿದರು.
ಬೆಡ್ ಬ್ಲಾಕಿಂಗ್ ನೀಚ ಕೃತ್ಯ: ನಾನು ಮೆಡಿಕಲ್ ಸೀಟ್ ಬ್ಲಾಕ್ ಮಾಡುವುದು ಕೇಳಿದ್ದೆ. ರೋಗಿಗಳಿಗೆ ಚಿಕಿತ್ಸೆ ನೀಡುವ ಬೆಡ್ ಬ್ಲಾಕಿಂಗ್ ಮಾಡಿರುವುದು ಇದೇ ಮೊದಲು ಕೇಳಿದ್ದು. ಇವರ ಈ ಕೃತ್ಯಕ್ಕೆ ದೇವರು ಕ್ಷಮಿಸುವುದಿಲ್ಲ. ಅವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು. ಸಂಸದ ತೇಜಸ್ವಿ ಸೂರ್ಯ ಒಳ್ಳೆಯ ಕೆಲಸ ಮಾಡಿದ್ದಾರೆ.
ಯಾವ್ಯಾವ ಆಸ್ಪತ್ರೆಯಲ್ಲಿ ಆಗಿದೆ. ಈ ರೀತಿ ಎಷ್ಟು ಮಾಡಿದ್ದಾರೆಂಬ ಸಂಗತಿ ಹೊರಬರಬೇಕು. ಪ್ರಾಣದ ಜತೆ ಚೆಲ್ಲಾಟವಾಡುವ ನೀಚ ಕೃತ್ಯ ಮಾಡಿದ್ದಾರೆ. ಇದಕ್ಕೆ ಕ್ಷಮೆಯಿಲ್ಲ ಎಂದರು