Advertisement

ರೈತ ವಿರೋಧಿ ಕಾಯ್ದೆ ರದ್ದತಿಗೆ ಆಗ್ರಹ

09:34 PM Jun 27, 2021 | Team Udayavani |

ಚಿಕ್ಕಮಗಳೂರು: ವಿವಾದಾತ್ಮಕ ರೈತ ವಿರೋಧಿ ಕೃಷಿಕಾಯ್ದೆಗಳನ್ನು ರದ್ದುಗೊಳಿಸಿ, ಎಂಎಸ್‌ಪಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಜೂ.26ಕ್ಕೆ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಚಳುವಳಿ ಏಳು ತಿಂಗಳು ಪೂರೈಸು ತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ಮತ್ತು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಸರ್ಕಾರ ರೈತರ ಸಮಸ್ಯೆ ಗಣನೆಗೆ ತಗೆದುಕೊಳ್ಳದಿರುವುದು ಬೇಸರದ ಸಂಗತಿ ಎಂದರು. ಕಳೆದ 74 ವರ್ಷಗಳಿಂದ ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಇತರೆ ಕ್ಷೇತ್ರಗಳು ಕುಸಿದವು. ಆದರೆ, ಕೃಷಿಕ್ಷೇತ್ರದಲ್ಲಿ ದಾಖಲೆಯ ಉತ್ಪಾದನೆ ಸಾಧಿಸಿದ್ದೇವೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಕರಾಳ ಮೂರು ರೈತವಿರೋಧಿ ಕಾಯ್ದೆಗಳನ್ನು ನಮ್ಮ ಮೇಲೆ ಹೇರಿದೆ. ಈ ಕಾನೂನು ಕೃಷಿಯನ್ನು ಮತ್ತು ಕೃಷಿಯ ಮುಂದಿನ ಪೀಳಿಗೆಯನ್ನು ನಾಶಪಡಿಸುತ್ತದೆ. ಕೃಷಿ ಕ್ಷೇತ್ರವನ್ನು ರೈತರ ಕೈಯಿಂದ ಕಸಿದುಕೊಂಡು ಕಾರ್ಪೋರೆಟ್‌ ಕಂಪೆನಿಗಳಿಗೆ ಹಸ್ತಾಂತರಿಸುವ ಕಾನೂನು ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೃಷಿಕ್ಷೇತ್ರದಲ್ಲಿ ನಷ್ಟ ಅನುಭವಿಸಿ ಕಳೆದ 30 ವರ್ಷಗಳಲ್ಲಿ 4 ಲಕ್ಷಕ್ಕೂ ಹೆಚ್ಚಿನ ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ| ಸ್ವಾಮಿನಾಥನ್‌ ಸಮಿತಿ ವರದಿಯಂತೆ ಕೃಷಿ ಬೆಂಬಲ ಬೆಲೆಯನ್ನು ನಿಗದಿಪಡಿಸಿ ರೈತರಿಗೆ ಕಾನೂನು ಚೌಕಟ್ಟಿನಲ್ಲಿ ಖಾತರಿ ಪಡಿಸಬೇಕೆಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ರಸಗೊಬ್ಬರ, ಕೀಟನಾಶಕ, ಬಿತ್ತನೆ ಬೀಜ, ಕೃಷಿ ಯಂತ್ರೋಪಕರಣ ಹಾಗೂ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಮಾಡಿದ್ದು, ರೈತ ಸಮುದಾಯಕ್ಕೆ ತೀವ್ರವಾದ ಆರ್ಥಿಕ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಲೆ ಏರಿಕೆಯನ್ನು ತಗ್ಗಿಸಬೇಕೆಂದು ಒತ್ತಾಯಿಸಿದರು.

ರೈತರು ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ನೆರವಿಗೆ ಬಾರದೆ ಕೃಷಿಕ್ಷೇತ್ರವನ್ನು ಉದ್ಯಮಿಗಳ ಕೈವಶ ಮಾಡಲು ಮುಂದಾಗಿದ್ದು, ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರು ತಕ್ಷಣ ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು. ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಡಿ.ಆರ್‌. ದುಗ್ಗಪ್ಪ ಗೌಡ, ಕಾರ್ಯಾಧ್ಯಕ್ಷ ಬಿ.ಸಿ. ದಯಾಕರ್‌, ಜಿಲ್ಲಾ ಸಂಚಾಲಕ ಅನಂತೇಶ್‌, ನಿರಂಜನ್‌ ಮೂರ್ತಿ, ಮಂಜೇಗೌಡ, ರಾಜಪ್ಪ, ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಇತರರು ಇದ್ದರು.‌

Advertisement

ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಸಿ ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ವ್ಯಾಪಾರ- ವಹಿವಾಟು ನಡೆಸಲು ಅವಕಾಶ ನೀಡಿ ಜಿಲ್ಲಾಧಿಕಾರಿ ಕೆ.ಎನ್‌. ರಮೇಶ್‌ ಆದೇಶ ಹೊರಡಿಸಿದ್ದಾರೆ. ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಆದೇಶವು ಜೂ.28ರಿಂದ ಜು.5ರ ವರೆಗೆ ಜಾರಿಯಲ್ಲಿದ್ದು ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುತ್ತದೆ. ಕೈಗಾರಿಕೆ ಮತ್ತು ಉತ್ಪಾದನಾ ಘಟಕಗಳು ಶೇ.50ರಷ್ಟು ಸಿಬ್ಬಂದಿಗಳನ್ನು ಬಳಸಿಕೊಂಡು ಕಾರ್ಯ ನಿರ್ವಹಿಸಬಹುದಾಗಿದೆ. ಜಿಲ್ಲೆಯಲ್ಲಿನ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಎಲ್ಲಾ ಅಂಗಡಿ- ಮುಂಗಟ್ಟುಗಳು ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಹವಾ ನಿಯಂತ್ರಿತ ಶಾಪ್‌ ಗಳು, ಮಾಲ್‌ಗ‌ಳು ಕಾರ್ಯ ನಿರ್ವಹಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕರು ವಿನಾಕಾರಣ ಮನೆಯಿಂದ ಹೊರಬರುವುದನ್ನು ತಪ್ಪಿಸಲು ದಿನದ 24 ಗಂಟೆಯೂ ಹೋಮ್‌ ಡೆಲಿವರಿಗೆ ಅವಕಾಶ ನೀಡಲಾಗಿದೆ. ಹೊಟೇಲ್‌, ರೆಸ್ಟೋರೆಂಟ್‌ ಬಾರ್‌, ಕ್ಲಬ್‌ಗಳು ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಕಾರ್ಯ ನಿರ್ವಹಿಸಲು ಅವಕಾಶ ನೀಡಿದ್ದು ಶೇ.50ರಷ್ಟು ಸಾಮರ್ಥ್ಯದಷ್ಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಕುಳಿತು ಆಹಾರ, ಪಾನೀಯಗಳ ಸೇವನೆಯನ್ನು ನಿರ್ಬಂಧಿ ಸಲಾಗಿದೆ ಎಂದು ಹೇಳಿದ್ದಾರೆ. ಲಾಡ್ಜ್, ರೆಸಾರ್ಟ್‌ಗಳಲ್ಲಿ ಶೇ.50ರಷ್ಟು ಬಳಕೆಗೆ ಅವಕಾಶವಿದೆ. ಎಲ್ಲಾ ರೀತಿಯ ಕಾಮಗಾರಿ ನಡೆಸಲು ಅನುಮತಿಸಲಾಗಿದೆ. ನಿರ್ಮಾಣ ಕಾಮಗಾರಿ ಸಲಕರಣೆಗಳಿಗೆ ಸಂಬಂಧಿಸಿದ ಅಂಗಡಿ- ಮುಂಗಟ್ಟುಗಳಲ್ಲಿ ವ್ಯವಹಾರ ನಡೆಸಬಹುದಾಗಿದೆ. ಬೆಳಗ್ಗೆ 5 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ವಾಯು ವಿಹಾರ ಉದ್ದೇಶಕ್ಕಾಗಿ ಉದ್ಯಾನವನಗಳನ್ನು ತೆರೆಯಲು ಅವಕಾಶ ನೀಡಿದ್ದು, ಗುಂಪು ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಹವಾ ನಿಯಂತ್ರಿತವಲ್ಲದ ವ್ಯಾಯಾಮ ಶಾಲೆಗಳಲ್ಲಿ ಶೇ.50ರಷ್ಟು ಬಳಕೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಟ್ಯಾಕ್ಸಿ ಮತ್ತು ಆಟೋರಿûಾಗಳು ಗರಿಷ್ಟ ಎರಡು ಪ್ರಯಾಣಿಕರಿಗೆ ಸೀಮಿತಗೊಳಿಸಿ ಕಾರ್ಯ ನಿರ್ವಹಿಸಲು ಅನುಮತಿಸಿದೆ. ಅದರೊಂದಿಗೆ ಎಲ್ಲ ಹೊರಾಂಗಣ ಕ್ರೀಡಾ ಚಟುವಟಿಕೆಗಳನ್ನು ಪ್ರೇಕ್ಷಕರು ಹೊಂದಿಲ್ಲದಂತೆ ನಿಯಮಾನುಸಾರ ನಡೆಸಬಹುದಾಗಿದೆ. ಎಲ್ಲಾ ರೀತಿಯ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಶೇ.50 ಸಿಬ್ಬಂದಿಗಳನ್ನು ಒಳಗೊಂಡು ಕಾರ್ಯ ನಿರ್ವಹಿಸಬಹುದಾಗಿದೆ ಎಂದು ಹೇಳಿದ್ದಾರೆ.

ರಾತ್ರಿ ಕರ್ಫ್ಯೂ ವೇಳೆಯಲ್ಲಿ ರಾತ್ರಿ 7 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ಅಗತ್ಯ ಚಟುವಟಿಕೆ ಹೊರತುಪಡಿಸಿ ಸಾರ್ವಜನಿಕರ ಸಂಚಾರವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ರಾತ್ರಿ ವೇಳೆ ಕಾರ್ಯ ನಿರ್ವಹಿಸುವ ಕೈಗಾರಿಕೆಗಳು, ಕಂಪೆನಿಗಳು, ಸಂಸ್ಥೆಗಳು ಕಾರ್ಯ ನಿರ್ವಹಿಸಲು ಅನುಮತಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next