Advertisement

ಕಸ ವಿಲೇವಾರಿಗೆ ಆಕ್ರೋಶ

11:21 AM Jun 28, 2019 | Naveen |

ಚಿಕ್ಕಮಗಳೂರು: ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಗುರುವಾರ ಮೃತಪಟ್ಟಿದ್ದು, ಅವರು ಡೆಂಘೀ ಜ್ವರದಿಂದ ಸಾವನ್ನಪ್ಪಿದ್ದಾರೆ. ನಗರಸಭೆಯವರು ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡದಿರುವುದೇ ಗ್ರಾಮ ದಲ್ಲಿ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ನಗರಸಭೆ ಕಸದ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.

Advertisement

ನಗರ ಹೊರವಲಯದ ಇಂದಾವರ ಗ್ರಾಮದಲ್ಲಿ ನಗರಸಭೆಯವರು ಘನತ್ಯಾಜ್ಯ ಹಾಕುತ್ತಿದ್ದಾರೆ. ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲವೆಂದು ಆರೋಪಿಸಿ ಕಳೆದ ಹಲವು ವರ್ಷಗಳಿಂದ ಗ್ರಾಮಸ್ಥರು ಪ್ರತಿಭಟನೆ ಮಾಡುತ್ತಲೇ ಇದ್ದಾರೆ. ಇತ್ತೀಚೆಗೆ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಆರಂಭವಾಗಿದ್ದು, ಗ್ರಾಮದ ಹಲವರು ಜ್ವರದಿಂದ ಬಳಲುತ್ತಿದ್ದಾರೆ ಎಂದು ಆರೋಪಿಸಿದರು.

ಕಸದ ವಾಹನ ತಡೆದು ಆಕ್ರೋಶ: ಗುರುವಾರ ಬೆಳಗ್ಗೆ ಜ್ವರದಿಂದ ನರಳುತ್ತಿದ್ದಸಿದ್ಧಪ್ಪಶೆಟ್ಟಿ(69)ಎಂಬುವವರು ಮೃತಪಟ್ಟಿದ್ದರು. ಅವರು ಡೆಂಘೀ ಜ್ವರದಿಂದಲೇಸಾವಪ್ಪಿದ್ದಾರೆ. ನಗರಸಭೆ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲ. ಕಸ ದಿಂದಾಗಿಯೇ ಗ್ರಾಮದಲ್ಲಿ ಜ್ವರ ಹೆಚ್ಚಾ ಗುತ್ತಿದೆ. ಕಸದ ದುರ್ವಾಸನೆಯೂ ತೀವ್ರವಾಗಿದೆ. ಈ ಬಗ್ಗೆ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು, ದಿಢೀರನೆ ಕಸ ಸುರಿಯಲು ಗ್ರಾಮಕ್ಕೆ ಬರುತ್ತಿದ್ದ ವಾಹನಗಳನ್ನು ತಡೆದು ಪ್ರತಿಭಟನೆ ಆರಂಭಿಸಿದರು.

ಗ್ರಾಮದಲ್ಲಿ ಕಸ ಹಾಕಬೇಡಿ: ನಗರಸಭೆ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಕೂಡಲೇ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರಬೇಕು. ನಗರಸಭೆಯವರು ಗ್ರಾಮದಲ್ಲಿ ಕಸ ಹಾಕುವುದನ್ನು ನಿಲ್ಲಿಸಬೇಕೆಂದು ಪಟ್ಟುಹಿಡಿದರು.

ಸ್ಥಳಕ್ಕೆ ಜಿಲ್ಲಾಧಿಕಾರಿ ಬರಲಿ: ಗ್ರಾಮಸ್ಥರು ಕಸದ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿರುವ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ನಗರಸಭೆ ಆಯುಕ್ತ ಪರಮೇಶಿ ಅವರು, ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲಾಗುವುದು. ಪ್ರತಿಭಟನೆ ಕೈ ಬಿಡಿ ಎಂದು ಮನವಿ ಮಾಡಿಕೊಂಡರು. ಆದರೆ, ಅವರ ಮನವಿಗೆ ಸೊಪ್ಪು ಹಾಕದ ಗ್ರಾಮಸ್ಥರು, ನೀವು ಏನೂ ಮಾಡುವುದಿಲ್ಲ. ಕೇವಲ ಭರವಸೆ ನೀಡುತ್ತೀರಿ. ಸ್ಥಳಕ್ಕೆ ಜಿಲ್ಲಾಧಿಕಾರಿಗಳೇ ಬರಬೇಕು. ಸಮಸ್ಯೆ ಪರಿಹರಿಸುವ ಭರವಸೆಯನ್ನು ಅವರು ನೀಡುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ. ಕಸವನ್ನು ಇಲ್ಲಿ ಹಾಕಲು ಬಿಡುವುದೂ ಇಲ್ಲ ಎಂದು ಹೇಳಿ ಪ್ರತಿಭಟನೆ ಮುಂದುವರೆಸಿದರು.

Advertisement

ಸಿದ್ಧಪ್ಪಶೆಟ್ಟಿ ಡೆಂಘೀ ಜ್ವರದಿಂದ ಮೃತಪಟ್ಟಿಲ್ಲ: ಡಿಎಚ್‌ಒ
ಇಂದಾವರ ಗ್ರಾಮದ ಸಿದ್ಧಪ್ಪಶೆಟ್ಟಿ ಸಾವಿನ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥ ಬಾಬು, ಸಿದ್ಧಪ್ಪಶೆಟ್ಟಿ ಅವರು ಜ್ವರದಿಂದ ಬಳಲುತ್ತಿದ್ದುದು ಸತ್ಯ. ಆದರೆ, ಅವರು ಸಾವಪ್ಪಿರುವುದು ಡೆಂಘೀ ಜ್ವರದಿಂದ ಅಲ್ಲ. ಅವರಿಗೆ ಕರಳು ಹಾಗೂ ಹೃದಯ ಸಂಬಂಧಿ ಕಾಯಿಲೆ ಇತ್ತು. ಜಿಲ್ಲೆಯಲ್ಲಿ ಈವರೆಗೂ 47ಜನರಿಗೆ ಡೆಂಘೀ ಇರುವುದು ಖಚಿತವಾಗಿದೆ. ಆದರೆ, ಡೆಂಘೀಯಿಂದ ಈವರೆಗೂ ಯಾವುದೇ ಸಾವು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next